ಚಿಕ್ಕಮಗಳೂರು ಎಕ್ಸ್ ಪ್ರೆಸ್: ಕಾಂಗ್ರೆಸ್ ಪಕ್ಷದ ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಜಿಲ್ಲಾವಾರು ಸಮಸ್ಯೆಗಳ ಬಗ್ಗೆಯೂ ಕೂಡ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಪ್ರಣಾಳಿಕೆಯನ್ನು ತಯಾರಿಸಲಾಗುವುದು ಎಂದು ಕೆ.ಪಿ.ಸಿ.ಸಿ ಚುನಾವಣಾ ಪ್ರಣಾಳಿಕಾ ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅವರು ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಕುರಿತು ಪ್ರಣಾಳಿಕಾ ಸಮಿತಿ ಅಧ್ಯಕ್ಷರಾದ ಪರಮೇಶ್ ರವರು ಜಿಲ್ಲಾವಾರು ಭೇಟಿ ನಡೆಸಿ ಆಯಾ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದು ಜಿಲ್ಲಾವಾರು ಪ್ರನಾಳಿಕೆಯನ್ನು ತಯಾರಿಸಲಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗದ ವಿಭಾಗದ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಂಡ ಮೇಲೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗದ ವಿಭಾಗದವರು ಮತ್ತು ಕಾಂಗ್ರೆಸ್ ಪಕ್ಷದ ಇತರೆ ಎಲ್ಲಾ ವಿಭಾಗದವರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಅತ್ಯಂತ ಚಿಕ್ಕಪುಟ್ಟ ಸಮುದಾಯಗಳನ್ನೂ ಗುರುತಿಸಿ ಆ ಸಮುದಾಯಗಳಿಗೂ ಪಕ್ಷದಲ್ಲಿ ಪ್ರಾತಿನಿತ್ಯವನ್ನು ನೀಡಬೇಕು. ಇದು ಬಂಗಾರಪ್ಪ ರವರ ಮಗನಾಗಿ ಮತ್ತು ಕಾಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ನನ್ನ ಜವಾಬ್ದಾರಿ ಎಂದವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಚಿಕ್ಕ ಪುಟ್ಟ ಸಮುದಾಯದವರಿಗೂ ಸೂಕ್ತ ಸ್ಥಾನಮಾನ ನೀಡಬೇಕು. ಆ ನಿಟ್ಟಿನಲ್ಲಿ ಹಿಂದುಳಿದ ವಿಭಾಗದ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒ.ಬಿ.ಸಿ ಸಮಾವೇಶಗಳನ್ನು ನಡೆಸಲಾಗುವುದು. ಚುನಾವಣೆ ಹತ್ತಿರ ಬಂದಿರುವುದರಿoದ ಪಕ್ಷದ ರಾಜ್ಯ ಮತ್ತು ಸ್ಥಳೀಯ ಮುಖಂಡರುಗಳನ್ನು ಸೇರಿಸಿಕೊಂಡು ಸುಮಾರು 30 ಸಾವಿರ ಜನರ ಸಮಾವೇಶ ಸಂಘಟಿಸ ಬೇಕೆಂಬ ಗುರಿ ಇದೆ ಎಂದರು.
ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ಹಿಂದುಳಿದವರ್ಗದ ವಿಭಾಗದಿಂದ ಕೊಡಬೇಕು. ಪಾರಂಪರಿಕವಾಗಿ ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ನೀಡುತ್ತಾ ಬಂದಿದ್ದಾರೆ ಎಂದವರು ಹೇಳಿದರು.
ಕಸ್ತೂರಿ ರಂಗನ್ ವರದಿಗೆ ಸಂಬoಧಿಸಿದoತೆ ಕೇರಳದಲ್ಲಿ ಕಾನೂನನ್ನು ಸ್ವಲ್ಪ ಸಡಿಲಮಾಡಿಕೊಂಡು ಅಲ್ಲಿನ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಿಕ್ಕಮಗಳೂರು,ಕಾರವಾರ,ಹಾಸನ,ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರದೇಶಗಳನ್ನು ಬಾಧಿಸುವ ಕಸ್ತೂರಿ ರಂಗನ್ ವರದಿ ಬಗ್ಗೆ ದೆಹಲಿಯಲ್ಲಿ ಧ್ವನಿ ಎತ್ತಬೇಕಾದ ಸಂಸದರುಗಳು ತಮ್ಮ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.
ಅರಣ್ಯ ಪ್ರದೇಶಗಳ ಒತ್ತುವರಿಗೆ ಸಂಬoಧಿಸಿದ ಸಮಸ್ಯೆಗಳು ಇತ್ಯರ್ಥ ಮಾಡಿಕೊಳ್ಳದಿದ್ದರೆ ನೂರಾರು ವರ್ಷಗಳಾದರು ಇದು ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತಿದೆ. ಅರಣ್ಯ ಒತ್ತುವರಿ ಸಮಸ್ಯೆಗೆ ಸಂಬoಧಿಸಿದoತೆ ಹೆಚ್ಚು ಹಿಂದುಳಿದ ವರ್ಗದ ಜನರೇ ಸಾಗುವಳಿ ಮಾಡುತ್ತಿದ್ದಾರೆ. ಇವರುಗಳನ್ನು ಭೂಗಳ್ಳರು ಎಂದು ಬಿಂಬಿಸಲಾಗಿದೆ. ಶಿವಮೊಗ್ಗದಲ್ಲಿ ಇವರುಗಳಿಗೆ ನೋಟೀಸ್ ನೀಡಲಾಗುತ್ತಿದೆ. ನ್ಯಾಯಾಲಯದಿಂದ ಜಾಮೀನು ಪಡೆಯಬೇಕಾದ ಪರಿಸ್ಥಿತಿಗೆ ತಂದಿಟ್ಟಿರುವ ಸರ್ಕಾರ ಇಡೀ ಊರುಗಳನ್ನೇ ಖಾಲಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಇದಕ್ಕೆಲ್ಲಾ ಹೆಚ್ಚು ಬಲಿಪಶುಗಳಾಗುತ್ತಿರುವವರು ಹಿಂದುಳಿದವರಾಗಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಹಿಂದುಳಿದ ವರ್ಗದ ವಿಭಾಗದವರನ್ನು ಹೆಚ್ಚು ಸಂಘಟಿಸ ಬೇಕೆಂದರು. ಸಂಪೂರ್ಣವಾಗಿ ಹಿಂದುಳಿದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರೆ, ಪಕ್ಷ ಸುಮಾರು 125 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಆದರೆ, ಇವತ್ತಿನ ವಾಸ್ತವಾಂಶ ನೋಡಿದರೆ, ಕಾಂಗ್ರೆಸ್ ಪಕ್ಷ ನಿಡುತ್ತಾ ಬಂದಿದ್ದ ಆರ್ಥಿಕ ಸಂಕಷ್ಟದಲ್ಲಿರುವರ ಪರವಾದ ಕಾರ್ಯಕ್ರಮಗಳ ಬಗ್ಗೆ ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಕೇಂದ್ರ ಮಟ್ಟದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಲಿದೆ. ಆ ರೀತಿ ಮಾಡಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿದರೆ, ನಮ್ಮ ಪಕ್ಷದ ತಿಯಿಂದ ಹಾಗೂ ನನ್ನ ನೇತೃತ್ವದಲ್ಲೇ ಮೀಟರ್ಗಳನ್ನು ಕಿತ್ತು ವಿದ್ಯುತ್ ಕಛೇರಿಗಳ ಮುಂದೆ ಬಿಸಾಕುವ ಕೆಲಸ ಮಾಡಬೇಕಾಗುತ್ತದೆ ಎಂದರು.
ಕೇoದ್ರ ಸರ್ಕಾರ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಿ ನಂತರ ಅಡುಗೆ ಅನಿಲ್ ಬೆಲೆ ಹೆಚ್ಚಳ ಮಾಡಿ ಬಡವರು, ಹಿಂದುಳಿದವರ ಜೇಬಿಗೆ ಕತ್ತರಿಹಾಕಿದ್ದಾರೆ ಎಂದು ಮಧು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದವರು ರಾಜ್ಯದಲ್ಲಿ ಸುಮಾರು ಶೇ.55 ಮರಳು ಮಾತಿಗೆ ಮಾರುಹೋದರು. ಆದರೆ, ಈಗ ಬದಲಾವಣೆಯಾಗಿದೆ. ಧರ್ಮದ ಮಾತಿಗೆ ಮಾರು ಹೋಗಿ ಬಿ.ಜೆ.ಪಿಯನ್ನು ಬೆಂಬಲಿಸಿದ್ದೇವೆ. ಈಗ ತಪ್ಪಿನ ಅರಿವಾಗಿ ವಾಪಸ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿದರು.
ಪ್ರವೀಣ್ ಸಾವಿನನಂತರ ಸುನಿಲ್ ಕುಮಾರ್,ಕಟೀಲ್ ರವರುಗಳಿಗೆ ಗೋ ಬ್ಯಾಕ್ ಎಂದು ಕೂಗಿದವರು, ಅವರುಗಳ ಕಾರಿನ ಗಾಳಿ ಬಿಟ್ಟವರು ಕಾಂಗ್ರೆಸ್ನವರಲ್ಲ, ಆರ್.ಎಸ್.ಎಸ್,ವಿ.ಹೆಚ್.ಪಿ,ಬಜರಂಗದಳದವರು ಎಂದು ತಿಳಿಸಿದ ಮಧು ಬಂಗಾರಪ್ಪ, ದೇಶಭಕ್ತಿಯ ಹೆಸರಿನಲ್ಲಿ ದ್ವೇಷದ ಮನಸ್ಥಿತಿಯನ್ನು ಬೆಳೆಸಿ ಅಧಿಕಾರಕ್ಕೆ ಬಂದು ಕೊಲೆ ಸುಲಿಗೆ ಮಾಡುತ್ತಿದ್ದಾರೆ. ಹಿಂದುಳಿದವರನ್ನೇ ಬಲಿಪಶುಗಳಾಗಿ ಮಾಡಲಾಯಿತು. ಈ ಸ್ಥಿತಿ ಬದಲಾಗಬೇಕಾಗಿದೆ. ಯಾರೂ ಮಕ್ಕಳನ್ನು ಕಳೆದುಕೊಳ್ಳಬಾರದು. ಬೇರೆ ಬೇರೆ ಕೊಲೆ ಪ್ರಕರಣಗಳಲ್ಲಿ ಹಿಂದೂ,ಜಾತಿ, ಧರ್ಮ ಎಲ್ಲಾ ಬಿತ್ತನೆ ಮಾಡಿ ಈಗ ಸಾಕ್ಷಿ ಆಧಾರಗಳನ್ನು ನಾಶಪಡಿಸಲಾಗಿದೆ ಎಂದು ಬಿ.ಜೆ.ಪಿಯವರು ದೂರುತ್ತಿದ್ದಾರೆಂದ ಮಧು ಬಂಗಾರಪ್ಪ, ರಾಹುಲ್ಗಾಂಧಿಯವರ ವ್ಯಕ್ತಿತ್ವ ಹರಣ ಮಾಡಲು ಬಿ.ಜೆ.ಪಿಯವರು ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಾಡಿದ್ದಾರೆ ಎಂದರು.
ಈ ವಿಷಯಗಳ ಬಗ್ಗೆ ಅರಿವಾಗಿ ಮಹಿಳೆಯರು,ಯುವಕರು ಬದಲಾಗಿದ್ದಾರೆ, ಜನರ ಭಾವನೆಗಳು ಬದಲಾಗಿ ಎಲ್ಲಾ ಜಾತಿ ಧರ್ಮಗಳಿಗೂ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಕಷ್ಟದಲ್ಲಿರುವ ಜನರ ಪರವಾಗಿ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮoತ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಎನ್.ಮಹೇಶ್, ಜಿಲ್ಲಾ ವಕ್ತಾರ ಹಿರೆಮಗಳೂರು ಪುಟ್ಟಸ್ವಾಮಿ,ಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ,ಒ.ಬಿ.ಸಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್,ಅಲ್ಪಸoಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ನಯಾಸ್,ಕಾಂಗ್ರೆಸ್ ನಗರಾಧ್ಯಕ್ಷ ತನೋಜ್,ವಕ್ತಾರ ರೂಬೆನ್ ಮೋಸಸ್ ಮತ್ತಿತರರು ಉಪಸ್ಥಿತರಿದ್ದರು