ಚಿಕ್ಕಮಗಳೂರು: ವಯೋವೃದ್ದರು ಸೂಕ್ತ ಸಮಯದಲ್ಲಿ ಕಣ್ಣು ಹಾಗೂ ದಂತ ಚಿಕಿತ್ಸೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.
ನಗರದ ಬೇಲೂರು ಬಸ್ ನಿಲ್ದಾಣದ ಸಮೀಪವಿರುವ ಸರ್ಕಾರಿ ಟಿಜಿಎಂಎಸ್ ಶಾಲೆಯಲ್ಲಿ ನಡೆದ ನೇಚರ್ ಕನ್ಸರ್ವೇಷನ್ ಟ್ರಸ್ಟ್ (ರಿ) ಬಿಕ್ಕಿಮನೆ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್, ಉಡುಪಿ ಹಾಗೂ ನೇತ್ರಾವತಿ ದಂತ ಚಿಕಿತ್ಸಾಲಯ ಇವರ ಸಹಯೋಗದೊಂದಿಗೆ ಉಚಿತ ನೇತ್ರಾ ಹಾಗೂ ದಂತ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಾನವ ಶಕ್ತಿ ಬೆಳವಣಿಗೆಯಾಗಬೇಕಾದರೆ ಕಣ್ಣಿನ ಪೊರೆ ನಿವಾರಣೆಯಾಗಬೇಕು. ದೃಷ್ಟಿ ಗುಣಮಟ್ಟದಿಂದ ಕಾಣುವ ಉದ್ದೇಶ ಹೊಂದುವುದರ ಜೊತೆಗೆ ಉತ್ತಮ ವಾತಾವರಣ ಸೃಷ್ಟಿ ಮಾಡುವುದು ಸಮಾಜದ ಉನ್ನತಿ ಬಯಸುವ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದರು.
ಸಮಾಜದ ಹಿರಿಯ ನಾಗರೀಕರು ೬೦-೮೦ರ ವಯಸ್ಸಿನ ಆಸುಪಾಸಿನ ನಂತರ ದೃಷ್ಟಿ ಹಾಗೂ ದಂತ ಸಮಸ್ಯೆಗಳು ಎದುರಾಗುವ ಹಿನ್ನೆಲೆಯಲ್ಲಿ ನಗರದ ಕೆಲವು ಭಾಗಗಳಲ್ಲಿ ಹಮ್ಮಿಕೊಳ್ಳುವ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಾರಾಯಣ ನೇತ್ರಾಲಯದ ನಿರ್ದೇಶಕ ಎಂ.ಕೆ.ಕೃಷ್ಣ ಮಾತನಾಡಿ ಪ್ರಪಂಚದಲ್ಲಿ ಶ್ರೀಮಂತ, ಬಡವ ಎನ್ನದೇ ಎಲ್ಲರಿಗೂ ಸಾವು ನಿಶ್ಚಿತ. ಆದರೆ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿದರೆ ಇನ್ನೊಂದು ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಹೇಳಿದರು.
ಡಾ|| ರಾಜ್ಕುಮಾರ್ ಹಾಗೂ ಪುನೀತ್ರಾಜ್ಕುಮಾರ್ ಸಹ ತಮ್ಮ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆಯನ್ನು ಮರೆದಿದ್ದು ಅವರ ಮಾರ್ಗಗಳನ್ನು ಪ್ರತಿಯೊಬ್ಬರು ಅನುಸರಿದಾಗ ಮಾತ್ರ ಅಂಧತ್ವದಲ್ಲಿರುವವರಿಗೆ ಸಹಾಯವಾಗಲಿದೆ ಎಂದರು.
ಶಿಬಿರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ತಪಾಸಣೆಗೊಳಪಡಿಸಿಕೊಂಡರು. ಕಣ್ಣಿನ ಸಮಸ್ಯೆ ಇರುವವರಿಗೆ ರಿಯಾಯಿತಿ ದರದಲ್ಲಿ ಕನ್ನಡಕವನ್ನು ವಿತರಣೆ ಮಾಡಲಾಯಿತು. ಇದೇ ವೇಳೆ ತಪಾಸಣೆಯಲ್ಲಿ ೬ ಮಂದಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಉಡುಪಿ ನೇತ್ರಾಲಯಕ್ಕೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಸೈಯದ್ ಜಮೀಲ್ಅಹ್ಮದ್, ಬ್ರಹ್ಮಕುಮಾರಿನ ಭಾಗ್ಯಕ್ಕ, ಟ್ರಸ್ಟ್ ಕಾರ್ಯದರ್ಶಿ ಎಂ.ಪಿ.ಈರೇಗೌಡ, ಸದಸ್ಯ ಪರಮೇಶ್, ತಾಲ್ಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹೇಮಂತ್ ಕುಮಾರ್, ಆರ್.ವಿ.ಕಮಾಡೀಟಿಸ್ ಮಾಲೀಕ ಶಿವೇಗೌಡ, ಮತ್ತಿತರರು ಹಾಜರಿದ್ದರು.