ಚಿಕ್ಕಮಗಳೂರು: ಚಿತ್ರದುರ್ಗ ಎಂದರೆ ನೆನಪಾಗುವುದೇ ಅಲ್ಲಿನ ಕೋಟೆ ಹಾಗೂ ವೀರಮಹಿಳೆ ಒನಕೆ ಓಬವ್ವರ ಕಥೆ. ತನ್ನ ಗಂಡ ಮಾಡುವ ಕರ್ತವ್ಯದಲ್ಲಿ ತನಗೂ ಪಾಲಿದೆ ಎನ್ನುವ ಚಿಂತನೆಯಲ್ಲಿ ದೇಶಪ್ರೇಮ, ನಾಡಿನಪ್ರೇಮದಿಂದ ಹೋರಾಡಿ ಜೀವವನ್ನೇ ತ್ಯಾಗಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒನಕೆ ಓಬವ್ವರ ಕಥೆ ಕೇಳಿದ ಪ್ರತಿಯೊಬ್ಬರಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಆದರ್ಶ ಮಹಿಳೆ ಎನ್ನುವ ಮನೋಭಾವ ಮೂಡುತ್ತದೆ. ಅಂತಹ ವೀರಮಹಿಳೆಯರಿಂದಲೇ ನಮ್ಮ ದೇಶ ಸುಭದ್ರವಾಗಿದೆ ಎಂದು ಅವರು ಬಣ್ಣಿಸಿದರು.
ಡಾ. ಶ್ರೀನಿವಾಸ್ ಮಾತನಾಡಿ, ವೀರವನಿತೆ ಒನಕೆ ಓಬವ್ವ ಹೈದರಾಲಿಯ ಸೈನಿಕರೊಂದಿಗೆ ಹೋರಾಡಿ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದವಳು. ಅಂತಹ ಎಷ್ಟೋ ವೀರವನಿತೆಯರ ಇತಿಹಾಸ ಜನರಿಗೆ ತಿಳಿದಿಲ್ಲ ಎಂದು ಹೇಳಿದರು.
ಮನುಸ್ಮೃತಿಯಿಂದ ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿದ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ೧೮ನೇ ಶತಮಾನದ ಮೊದಲೇ ಇದ್ದಿದ್ದರೆ ಮಹಮ್ಮದ್ ಘಜ್ನಿ, ಘೋರಿ, ಟರ್ಕರಂತಹ ಪರಕೀಯರು ಬರಲಾಗುತ್ತಿರಲಿಲ್ಲ. ಸಾವಿರಾರು ಒನಕೆ ಓಬವ್ವರನ್ನು ಕಾಣಬಹುದಿತ್ತು ಎಂದು ಅವರು ಹೇಳಿದರು. ಒನಕೆ ಓಬವ್ವರ ಇತಿಹಾಸವನ್ನು ಹೆಕ್ಕಿ ತೆಗೆದು ಭವಿಷ್ಯದ ಮಹಿಳೆಯರ ಅವರ ವ್ಯಕ್ತಿತ್ವ ಮಾದರಿಯಾಗುವಂತೆ ಮಾಡಲು ಕೆಲಸ ಮಾಡಬೇಕಾಗಿದೆ ಎಂದರು.
ಒನಕೆ ಓಬವ್ವರ ಬಗ್ಗೆ ಯಾವುದೇ ಪುಸ್ತಕ ಲಭ್ಯವಿಲ್ಲ. ಜಾನಪದದಿಂದ ಮಾತ್ರ ಅವರ ಇತಿಹಾಸ ನಮಗೆ ತಿಳಿದಿದೆ. ದೇಶದಲ್ಲಿ ಅದೆಷ್ಟೋ ವಿಶ್ವವಿದ್ಯಾಲಯಗಳಿದ್ದು, ಓಬವ್ವರ ಬಗ್ಗೆ ಸಂಶೋಧನೆ ಮಾಡಲಾಗಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಮಹಾನ್ ವ್ಯಕ್ತಿಗಳು ದೇಶಕ್ಕೆ, ಸಮಾಜಕ್ಕೆ ವಿಶ್ವಕ್ಕೆ ನೀಡಿರುವ ಕೊಡುಗೆಗಳು, ಅವರ ಆಚಾರ ವಿಚಾರಗಳನ್ನು ಸದುಪಯೋಗ ಪಡಿಸಿ, ಅವರ ಮಾರ್ಗದರ್ಶನದಂತೆ ಬಾಳಬೇಕು ಎನ್ನುವ ಉದ್ದೇಶದಿಂದ ಅವರ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಇತಿಹಾಸದ ಪುಟಗಳನ್ನು ತೆರೆದಾಗ ಹೈದರಾಲಿಯ ಸೈನ್ಯದೊಂದಿಗೆ ಒಬ್ಬಂಟಿಯಾಗಿ ಹೋರಾಡಿದ ಒನಕೆ ಓಬವ್ವರ ಸಾಹಸಗಾಥೆಯನ್ನು ನೋಡುತ್ತೇವೆ. ನಾಡಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿ ಹೋರಾಡಿದ ಅವರ ತ್ಯಾಗ ಇಂದಿನ ಯುವಜನರಿಗೆ ಮಾದರಿಯಾಗಬೇಕು ಎಂದರು.
ಶ್ರೀ ಕೆ.ಪಿ ವೆಂಕಟೇಶ್, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಬೆಂಗಳೂರು, ಶ್ರೀ ವರಸಿದ್ಧಿ ವೇಣುಗೋಪಾಲ್ ಮಾನ್ಯ ಅಧ್ಯಕ್ಷರು, ನಗರಸಭೆ, ಚಿಕ್ಕಮಗಳೂರು, ಚಿಕ್ಕಮಗಳೂರು ಡಿವೈಎಸ್ಪಿ ಪುರುಷೋತ್ತಮ್ ಹಾಗೂ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.
Hero woman Onake Obavva