ಚಿಕ್ಕಮಗಳೂರುಎಕ್ಸ್ಪ್ರೆಸ್: ರಾಜಕಾರಣ ಎಂದರೆ ಒಡೆದು ಆಳುವವರು ಎನ್ನುವ ಒಂದು ಭಾವನೆ ಇದೆ. ನನಗೆ ಆ ತತ್ವದ ಮೇಲೆ ನಂಬಿಕೆ ಇಲ್ಲ. ಕೂಡಿಸಿ ಒಲಿಸಿಕೊಳ್ಳುವುದರಲ್ಲಿ ನಂಬಿಕೆ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಹೇಳಿದರು.
ಬಿಜೆಪಿ ಯುವ ಮೋರ್ಚಾ ವತಿಯಿಂದ ತಾಲ್ಲೂಕಿನ ಲಕ್ಕುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಂಜೆ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರೀಡೆ ಸಣ್ಣವರಿಂದ ದೊಡ್ಡವರ ವರೆಗೆ ಆನಂದ ತರುತ್ತದೆ. ನಾವು ರಾಜಕಾರಣ ಎಂದರೆ ಚುನಾವಣೆಯಿಂದ ಚುನಾವಣೆಗೆ ಮುಖ ತೋರಿಸುವವರಲ್ಲ. ರಾಜಕಾರಣ ಸಮಾಜವನ್ನು ಜೋಡಿಸುವ ಸಾಧನವಾಗಬೇಕು ಎಂದು ಭಾವಿಸಿದವರು ಎಂದರು.
ಒಡೆದಾಳುವ ರಾಜಕಾರಣ ಮಾಡುವ ಜನವೇ ಬೇರೆ, ಅವರಿಗೆ ಜಾತಿ ಪ್ರಶ್ನೆ ದೊಡ್ಡದು ಮಾಡ್ತಾರೆ, ವೈಯಕ್ತಿ ಪ್ರತಿಷ್ಟೆ, ಕುಟುಂಬದ ಪ್ರಶ್ನೆಯನ್ನ ದೊಡ್ಡದು ಮಾಡ್ತಾರೆ. ಜಗಳವಾಡಿಸಲು ಏನು ದಾರಿ ಎಂದು ಹುಡುಕುತ್ತಾರೆ. ನಾವು ಕೂಡಿಸುವುದು ಹೇಗೆ ಎನ್ನುವುದನ್ನು ಯೋಚಿಸುತ್ತೇವೆ. ಹೀಗಾಗಿಯೇ ಯುವ ಮೋರ್ಚಾಕ್ಕೆ ಆಟ ಆಡೋಣ, ಪಕ್ಷ ಕಟ್ಟೋಣ ಎನ್ನುವ ಚಿಂತನೆ ಹೊಳಿಯಿತು ಎಂದು ತಿಳಿಸಿದರು.
ಕಷ್ಟ ಮತ್ತು ಸುಖ ಎರಡನ್ನೂ ಸಮಭಾವದಿಂದ ಸ್ವೀಕಾರ ಮಾಡಬೇಕು. ಕಷ್ಟ ಬಂದಾಗ ಕುಗ್ಗಬಾರದು, ಸುಖ ಬಂದಾಗ ಹಿಗ್ಗಬಾರದು. ಜೀವನವನ್ನ ಸಮ ಚಿತ್ತದಿಂದ ಸ್ವೀಕಾರ ಮಾಡಬೇಕು ಎನ್ನುವದನ್ನು ಯುಗಾದಿ ಹಬ್ಬ ಹೇಳುತ್ತದೆ. ಆಟವೂ ಕೂಡ ಬದುಕಿನ ಸಂದೇಶವನ್ನು ನೀಡುತ್ತದೆ. ಜಗತ್ತನ್ನು ಈಶ್ವರ ತತ್ವ ವ್ಯಾಪಿಸಿದೆ. ಎಲ್ಲರಲ್ಲೂ ಭಗವಂತನಿದ್ದಾನೆ. ಈ ತತ್ವ ನಮ್ಮೊಳಗೆ ಬಂದೆ ಬೇಧ ಭಾವಕ್ಕೆ ದಾರಿ ಇರುವುದಿಲ್ಲ ಎಂದರು.
ನಮ್ಮ ಜೊತೆಗೆ ಬರುವುದು ನಮ್ಮ ಸಂಪತ್ತು, ಅಧಿಕಾರ, ಸೌಂದರ್ಯಗಳಲ್ಲ. ಮನುಷ್ಯ ಎಷ್ಟೇ ಸುಂದರನಾಗಿದ್ದರೂ ಸತ್ತ ಮೇಲೆ ಆತನನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಬಂಧು-ಬಾಂಧವರು ಜೊತೆಗೆ ಬರುವುದಿಲ್ಲ. ಸಂಪತ್ತು, ಶ್ರೀಮಂತಿಕೆ ಯಾವುದೂ ಬರುವುದಿಲ್ಲ. ಹಾಗಾದರೆ ನಮ್ಮ ಜೊತೆಗೆ ಜೀವನದಲ್ಲಿ ಬರುವುದು ನಾವುಗಳಿಸಿದ ಪಾಪ ಮತ್ತು ನಾವುಗಳಿಸಿದ ಪುಣ್ಯ ಮಾತ್ರ ಎಂದರು.
ಪರೋಪಕಾರ ಮಾಡಿದರೆ ಪುಣ್ಯ ಬರುತ್ತದೆ. ಪರಪೀಡನೆ ಮಾಡಿದರೆ ಪಾಪ ಬರುತ್ತದೆ. ಅದಕ್ಕೆ ದಾರ್ಶನಿಕರು ಹೇಳಿದ್ದು ಒಳಿತು ಮಾಡು ಮನುಜ, ಇರೋದು ಮೂರು ದಿವಸ ಎಂದು. ಈ ಕಾರಣಕ್ಕೆ ನಗು ನಗುತ, ಆನಂದವಾಗಿ ಕಾಲ ಕಳೆಯಬೇಕು. ನಾವು ಮನಸ್ಸುಗಳನ್ನು ಕಟ್ಟಬೇಕು, ಅಭಿವೃದ್ಧಿ ಮಾಡಬೇಕು ಎಂದು ರಾಜಕಾರಣಕ್ಕೆ ಬಂದಿದ್ದೇವೆ ಎಂದರು.
ಯುವ ಸಂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಸ್ಥಳೀಯ ಕಾರ್ಯಕರ್ತರ ಜೊತೆಗೆ ಲಕ್ಕುಮನಹಳ್ಳಿ ಗ್ರಾಮ ಪಂಚಾಯ್ತಿಯ ಕುನ್ನಾಳು, ಸಿರಬಡಿಗೆ, ಬೀರನಹಳ್ಳಿ, ಅಜ್ಜನಹಟ್ಟಿ, ಬಾಳೇನಹಳ್ಳಿ ಹಾಗೂ ಲಕ್ಕುಮನಹಳ್ಳೀ ಸೇರಿದಂತೆ ಇತರೆ ಗ್ರಾಮದ ಯುವಕ, ಯುವತಿಯರು, ಮಕ್ಕಳು ಸಹ ಭಾಗವಹಿಸಿ ವಿವಿಧ ಆಟೋಟಗಳಲ್ಲಿ ಭಾಗವಹಿಸಿದರು.
ಗ್ರಾಮಾಂತರಯುವ ಮೋರ್ಚಾ ಅಧ್ಯಕ್ಷ ಯತೀಶ್ ಇಂದಾವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೊಷ್ ಕೋಟ್ಯಾನ್ ಇತರರು ಭಾಗವಹಿಸಿದ್ದರು.
Politics should be a tool to unite society