ಚಿಕ್ಕಮಗಳೂರು: ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ತೊಡಗಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಕ್ರೀಯಾಶೀಲರಾಗಿರಬಹುದು ಎಂದು ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷ ಜೆ.ಎನ್.ಮಂಜೇಗೌಡ ಹೇಳಿದರು.
ತಾಲ್ಲೂಕಿನ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯರ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ಹರಿಹರದಹಳ್ಳಿ, ಮರ್ಲೆ, ಅಂಬಳೆ, ಮುಗುಳುವಳ್ಳಿ, ಕೆ.ಆರ್.ಪೇಟೆ ಹಾಗೂ ಮಳಲೂರು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ ಅಂಬಳೆ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮಸ್ಥರು ಒತ್ತಡದ ಬದುಕಿನಲ್ಲಲಿ ತಮ್ಮ ಸ್ವಲ್ಪ ಸಮಯವನ್ನು ವ್ಯಾಯಾಮ ಹಾಗೂ ಕ್ರೀಡೆಗಳಿಗೆ ಮೀಸಲಿಡಬೇಕು ಎಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಕ್ರೀಡಾಕೂಟ ಸಹಕಾರಿಯಾಗ ಲಿದೆ ಎಂದು ತಿಳಿಸಿದರು.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಮೂಲೆ ಗುಂಪಾಗುತ್ತಿವೆ. ಇವುಗಳನ್ನು ಪುನರಾರಂಭಗೊಳಿಸಲು ಸರ್ಕಾರ ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು ಇದರ ಉಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಹರಿಹರದಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಶಾರದಾ ಮಾಸ್ತೇಗೌಡ ಮಾತನಾಡಿ ಮನುಷ್ಯನ ಜೀವನದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಜೊತೆಗೆ ಅನಾರೋಗ್ಯದಿಂದ ಬಳಲುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಹ ಕ್ರೀಡಾಚಟುವಟಿಕೆಯಲ್ಲಿ ಪಾಲ್ಗೊಂಡು ಕ್ರಿಯಾಶೀಲರಾಗಬೇಕು ಎಂದರು.
ತಾಲ್ಲೂಕು ಶಿಕ್ಷಣಾಧಿಕಾರಿ ಛಲವಾದಿ ಮಾತನಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಾರ್ಯಕ್ರಮದ ಸಿದ್ದತೆಗಳನ್ನು ಮಾಡಿಕೊಂಡು ಇಂದು ಚಾಲನೆ ನೀಡಲಾಗಿದೆ ಎಂದ ಅವರು ಗ್ರಾಮಸ್ಥರು ಸಹ ಅತ್ಯಂತ ಕ್ರೀಡಾಸಕ್ತಿಯಿಂದ ಭಾಗವಹಿಸಿದ್ದಾರೆ ಎಂದು ಹೇಳಿದರು.
ಹರಿಹರದಹಳ್ಳಿ ಗ್ರಾ.ಪಂ. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲಕ್ಷ್ಮಣ್ ಮಾತನಾಡಿ ಕ್ರೀಡಾಕೂಟದಲ್ಲಿ ಕಬ್ಬಡಿ, ಖೋ ಖೋ, ವಾಲಿಬಾಲ್ ಹಾಗೂ ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದವರು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗು ತ್ತಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರುಗಳಾದ ಶೇಖರ್, ಕೆ.ಎಸ್.ಮಂಜುನಾಥ್, ಶೈಲಾ ಪದ್ಮೇಗೌಡ, ಸದಸ್ಯರಾದ ಹೆಚ್.ಎಂ.ಮಂಜೇಗೌಡ, ಲಲಿತಾ ಶಿವಾನಂದ, ಜಯಂತಿ ನಾಗರಾಜ್, ಕವಿತಾ ಶಿವಾರಾಂ, ಮುಳ್ಳೇಗೌಡ, ದೊಡ್ಡೇಗೌಡ, ಮರ್ಲೆ ಪಿಡಿಓ ಯಮುನಾ ಹಾಗೂ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Live an active life through sports