ಚಿಕ್ಕಮಗಳೂರು: ಶ್ರೀರಾಮ ಸೇನೆ ಈ ಬಾರಿ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನಕ್ಕೆ ನಗರದಲ್ಲಿ ಬೃಹತ್ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಶಾಂತಿಯುತವಾಗಿ ನಡೆಯಿತು.
ನಗರದ ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಮುಖಂಡರು ಶ್ರೀ ಶಾರಾದಾಂಭೆಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಹಿರಂಗ ಸಭೆ ನಂತರ ಶೋಭಾಯಾತ್ರೆ ಆರಂಭವಾಯಿತು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೇಸರಿ ಧ್ವಜ, ಹಿಡಿದು ನಮ್ಮದು ನಮ್ಮದು ದತ್ತಪೀಠ ನಮ್ಮದು, ವಿವಿಧ ಘೋಷಣೆಯೊಂದಿಗೆ ಪುಷ್ಪಾಲಂಕೃತ ವಾಹನದಲ್ಲಿ ದತ್ತವಿಗ್ರಹವನ್ನು ಪ್ರತಿಷ್ಠಾಪಿಸಿ ಸಾಗಿದರು.
ಕಳೆದ ಮೂರು ವರ್ಷದ ಇದೇ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ತರಲು ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಈ ಬಾರಿ ಅವಕಾಶ ನೀಡಲಾಗಿತ್ತು. ಕೆಲ ಯುವಕರು ಬಜರಂಗಿ ಚಿತ್ರವುಳ್ಳ ಬೃಹತ್ ಧ್ವಜ ಹಿಡಿದು ಅಲ್ಲಲ್ಲಿ ತಿರುಗಿಸುತ್ತಾ ಸಾಗಿದ್ದು ಭಕ್ತರ ಗಮನ ಸೆಳೆಯಿತು. ಡೊಳ್ಳುಕುಣಿತ ಸೇರಿದಂತೆ ವಿವಿಧ ತಮಟೆ ವಾದ್ಯಕ್ಕೆ ಭಕ್ತರು ಹರ್ಷೋದ್ಘಾರದೊಂದಿಗೆ ಹೆಜ್ಜೆ ಹಾಕಿದರು. ಕೇಸರಿ ಬಂಟಿಗ್ಸ್ ನಿಂದ ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಅಜಾದ್ ಪಾರ್ಕ್ ವೃತ್ತದಲ್ಲಿ ಸಮಾಪನ ಗೊಂಡಿತು.
ಕೆಲವು ಯುವಕ, ಯುವತಿಯರು ಕೇಸರಿ ವಸತೊಟ್ಟು ಪಾಲ್ಗೊಂಡಿದ್ದರೆ ಮಹಿಳೆಯರು, ವೃದ್ದರು ಸಾತ್ ನೀಡಿದರು. ಅಲ್ಲಲ್ಲಿ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶೋಭಾಯಾತ್ರೆಯ ಬಳಿಕ ದತ್ತಭಕ್ತರು, ದತ್ತಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ದತ್ತ ಗುಹೆಯೊಳಗೆ ಪ್ರವೇಶ ಮಾಡಿ ದತ್ತ ಪಾದುಕೆಗಳ ದರ್ಶನ ಪಡೆದರು. ಬಳಿಕ ಇರುಮುಡಿಯನ್ನು ಸಮರ್ಪಿಸಿ ಅಲ್ಲಿಂದ ಮನೆಗಳಿಗೆ ತೆರಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ಜಿ.ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಆಯೋಜಿಸಲಾಗಿತ್ತು. ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ್ ಸಾಗರ್ ಇದ್ದರು. ಬಂದೋಬಸ್ತ್ಗಾಗಿ ಸುಮಾರು ಒಂದೂವರೆ ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬಂದಿರುವ ಭಕ್ತರ ಸಂಖ್ಯೆ ಪೊಲೀಸ್ ಸಂಖ್ಯೆಗಿಂತಲೂ ಕಡಿಮೆಯಾಗಿತ್ತು.
ಕಾನೂನು ಸುವ್ಯವಸ್ಥೆಯಿಂದ ಜಿಲ್ಲಾಡಳಿತದಿಂದ ವಿಶೇಷ ಕಾರ್ಯನಿರ್ವಹಕ ದಂಡಾಽಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ಒಟ್ಟಾರೆ, ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿತು.