ಚಿಕ್ಕಮಗಳೂರುಎಕ್ಸ್ಪ್ರೆಸ್: ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಬಿ.ಹೊಸಹಳ್ಳಿ ಗ್ರಾಮದ ಸರ್ವೆ ನಂ. ೩೮ರ ಆಶ್ರಯ ನಿವೇಶನದ ಜಾಗದಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಬಿ.ಹೊಸಹಳ್ಳಿ ಕಾಲೋನಿಯ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗಳಾದ ಕೆ.ಎನ್.ರಮೇಶ್ ಅವರಿಗೆ ಮನವಿ ನೀಡಿದರು.
ಮನವಿ ನೀಡಿ ಹುಣಸೆಮುಕ್ಕಿ ಲಕ್ಷ್ಮಣ್ ಮಾತನಾಡಿ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿ ಗ್ರಾಮದ ಸ.ನಂ ೩೮ ರಲ್ಲಿ ಕಾಲೋನಿಯವರಿಗಾಗಿ ಆಶ್ರಯ ನಿವೇಶನಕ್ಕೆ ಜಾಗವನ್ನು ಕಾಯ್ದಿರಿಸಿದ್ದು, ಆದರೆ ಕೆಲವರು ಜಾಗವನ್ನು ಒತ್ತುವರಿಗೊಳಿಸಿ ತೆರವುಗೊಳಿಸಿರುವುದಿಲ್ಲ ಎಂದರು.
ಈ ಹಿಂದೆ ನಾವುಗಳು ನಿಮಗೆ ಮನವಿ ಸಲ್ಲಿಸಿದ್ದೆವು, ತಾವು ಖುದ್ದಾಗಿ ಸ್ಥಳ ಪರಿಶೀಲಿಸಿ ತಹಸೀಲ್ದಾರ್ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದರು, ಇದುವರೆಗು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿರುವುದಿಲ್ಲ, ಸ್ಥಳಿಯ ತಹಸೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ನಿರ್ವಹಿಸದೆ, ಈ ಹಿಂದೆ ಸರ್ವೆ ಅವರು ಖಾಲಿ ಜಾಗ ಸರ್ವೆ ಮಾಡಿರುವುದು ಬಿಟ್ಟು, ಒತ್ತುವರಿ ಸರ್ವೆ ಮಾಡಿರುವುದಿಲ್ಲ ಎಂದರು.
ಆದ್ದರಿಂದ ತಾವುಗಳು ಜಿಲ್ಲಾ ಮಟ್ಟದ ಸರ್ವೆಯರ್ಗಳನ್ನು ನಿಯೋಜಿಸಿ, ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸರ್ವೆ ಮಾಡಿಸಿ ನಿವೇಶನಗಳನ್ನು ಸರಿಯಾಗಿ ಗುರುತಿಸಿ, ಈ ಭಾಗದ ಸುಮಾರು ೭೦ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿ, ಹಕ್ಕು ಪತ್ರಗಳನ್ನು ಕೊಡಿಸಬೇಕಾಗಿ ಮನವಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ಹರೀಶ್ಮಿತ್ರ, ಮರ್ಲೆ ಅಣ್ಣಯ್ಯ, ಬಾಚಿಗನಹಳ್ಳಿ ಮಂಜಯ್ಯ, ಬಿ.ಹೊಸಹಳ್ಳಿ ಗ್ರಾಮಸ್ಥರಾದ ರವಿ, ರಮೇಶ್, ಜಗಧೀಶ್, ಆಶಾ, ಸುಶೀಲ, ಶೋಭಾ, ಲಕ್ಷ್ಮೀ, ಸಾವಿತ್ರಿ, ಭಾರತಿ ಇತರರು ಉಪಸ್ಥಿತರಿದ್ದರು
Request to evict encroachers