ಚಿಕ್ಕಮಗಳೂರುಎಕ್ಸ್ಪ್ರೆಸ್: ನಗರಸಭೆ ವ್ಯಾಪ್ತಿಯ ಸುಮಾರ ೧೨ ಸಾವಿರ ಕಂಬಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸುವ ಯೋಜನೆಗೆ ಟೆಂಡರ್ ಕರೆದು ಅಂತಿಮ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಸುಮಾರು ೩೯ ಲಕ್ಷ ರೂ. ವೆಚ್ಚದಲ್ಲಿ ಆಜಾದ್ ಪಾರ್ಕ್ನಿಂದ ಡಿ.ಸಿ.ಕಚೇರಿ ವರೆಗೆ ಎರಡೂ ಬದಿಯಲ್ಲಿ ಫುಟ್ಪಾತ್ ಅಭಿವೃದ್ಧಿ ಪಡಿಸಿ ಸ್ಟೇನ್ಲೆಸ್ ಸ್ಟೀಲ್ ಬ್ಯಾರಿಕೇಡಿಂಗ್ ಹಾಕುವ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಎರಡೂ ವರ್ಷಗಳಿಂದ ಬೀದಿ ದೀಪದ ಸಮಸ್ಯೆ ಇತ್ತು. ಇದೀಗ ಇಡೀ ನಗರದಲ್ಲಿ ೧೨ ಸಾವಿರ ಕಂಬಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಒತ್ತಾಯಿಸಿದ್ದೇನೆ ಎಂದರು.
ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿ ಎರಡು ವರ್ಷಗಳ ನಿರ್ವಹಣೆಯನ್ನೂ ಅವರು ಮಾಡಲಿದ್ದಾರೆ. ಮುಂದೆ ವಿದ್ಯುತ್ ಬಿಲ್ನಲ್ಲಿ ಉಳಿತಾಯವಾಗುವ ಶೇ.೩೦ ರಷ್ಟು ಹಣವನ್ನು ಕಡಿತ ಮಾಡಿ ಉಳಿದಿದ್ದನ್ನು ಗುತ್ತಿಗೆದಾರರಿಗೆ ನೀಡಲಾಗುವುದು ಇದರಿಂದ ಒಂದು ರೂ.ಗಳನ್ನೂ ಬಂಡವಾಳ ಹಾಕದೆ ದೀಪ ಅಳವಡಿಸುವುದರಿಂದ ನಗರಸಭೆಗೆ ಲಾಭವಾಗಲಿದೆ. ಇಡೀ ರಾಜ್ಯದಲ್ಲಿ ಈ ರೀತಿ ಯೋಜನೆಯನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದರು.
ಎಂಜಿ ರಸ್ತೆ ಹಾಗೂ ಮಾರ್ಕೆಟ್ ರಸ್ತೆಯ ಫುಟ್ ಪಾತ್ಗಳನ್ನು ಮರು ಅಭಿವೃದ್ಧಿ ಪಡಿಸುವ ಕೆಲಸವನ್ನು ಮಾಡುತ್ತೇವೆ. ಚಿಕ್ಕಮಗಳೂರು ನಗರ ಸುಂದರ, ಸ್ವಚ್ಛ ಹಾಗೂ ಎಲ್ಲಾ ಸೌಲಭ್ಯವನ್ನೂ ಹೊಂದಿರುವ ನಗರವಾಗಬೇಕು ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇದೆ ಎಂದರು.
ಪಾರ್ಕ್ಗಳ ಅಭಿವೃದ್ಧಿಗೂ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮೊದಲು ಗಡಿ ಗುರುತಿಸಲಾಗುವುದು. ಈಗಾಗಲೇ ೧೪೬ ಪಾರ್ಕ್ಗಳನ್ನು ಗುರುತಿಸಿ ಇ-ಖಾತೆ ಮಾಡಿಸಲಾಗಿದೆ. ಒತ್ತುವರಿಯನ್ನು ಸಹ ತೆರವುಗೊಳಿಸಲಾಗುತ್ತಿದೆ ಎಂದರು.
ನಗರದ ನಾಗರೀಕರ ಸಹಕಾರ ಇದ್ದರೆ ಸುಂದರ ನಗರವಾಗಿ ಪರಿವರ್ತಿಸುವುದು ಕಷ್ಟವಲ್ಲ. ನಗರಸಭೆ ಎಲ್ಲಾ ಸದಸ್ಯರು ನಗರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕು. ವಿಶೇಷ ಅನುದಾನ ತರುವುದು ನಮ್ಮ ಜವಾಬ್ದಾರಿ ಅದಕ್ಕೇನು ಪ್ರಸ್ತಾವನೆ ಬೇಕು ಅದನ್ನು ನಗರಸಭೆ ಕಳಿಸಬೇಕು ಎಂದರು.
ಚಿಕ್ಕಮಗಳೂರು ಹಬ್ಬ ಜನವರಿ ೧೮ ರಿಂದ ನಡೆಯಲಿದೆ. ಅಷ್ಟರೊಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಆಜಾದ್ಪಾರ್ಕ್ ನಿಂದ ಡಿಸಿ ಕಚೇರಿ ವರೆಗೆ ಫುಟ್ಪಾತ್ ಮತ್ತು ರಸ್ತೆ ಮಧ್ಯೆ ಇರುವ ಡಿವೈಡರ್ನ್ನು ಅಭಿವೃದ್ಧಿ ಪಡಿಸುವುದರಿಂದ ಈ ಪ್ರದೇಶ ಇನ್ನಷ್ಟು ಸುಂದರಗೊಳ್ಳಲಿದೆ. ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದರು.
ನಗರದಾದ್ಯಂತ ಕಳೆದ ಹತ್ತು ತಿಂಗಳಿನಿಂದ ನಗರಸಭೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸ್ವಚ್ಛ, ಸುಂದರ ನಗರವಾಗಬೇಕು ಎನ್ನುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ಸದಸ್ಯರುಗಳಾದ ರೂಪಾಕುಮಾರ್, ಸುಜಾತಶಿವಕುಮಾರ್, ಕುಮಾರ್, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Development of footpath on both sides from Azad Park to DC Office