ಚಿಕ್ಕಮಗಳೂರುಎಕ್ಸ್ಪ್ರೆಸ್: ಗ್ರಾಮ ಪಂಚಾಯತಿ ದೂರದೃಷ್ಟಿ ಯೋಜನೆಯು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುವ ಎಲ್ಲ ಯೋಜನೆ ಮತ್ತು ಇಲಾಖೆಗಳು ಗುರಿ ತಲುಪುವುದಕ್ಕೆ ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯ್ತಿಗಳ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಲ್ಲ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು ಗ್ರಾಮ ಪಂಚಾಯತ್ ದೂರದೃಷ್ಟಿ ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಕೂಡಾ ೫ ವರ್ಷಗಳ ಅವಧಿಗೆ ಬೇಕಾಗುವ ಎಲ್ಲ ಸೌಲಭ್ಯಗಳ ಮಾಹಿತಿಯನ್ನು ಗ್ರಾ.ಪಂ. ವ್ಯಾಪ್ತಿಯ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮಾಡಬಹುದಾದ ಎಲ್ಲ ಕಾಮಗಾರಿಯ ಮಾಹಿತಿ ಕಲೆಹಾಕಿ ಯೋಜನೆ ಸಿದ್ಧಪಡಿಸಬಹುದಾಗಿದೆ.
ಈ ಹಿಂದೆ ಗ್ರಾಮ ಪಂಚಾಯ್ತಿಗಳು ಇರುವ ಅನುದಾನಕ್ಕೆ ಸೀಮಿತವಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ನರೇಗಾ ಅಡಿಯಲ್ಲಿ ಸಾಕಷ್ಟು ಹಣ ಹರಿದು ಬರುತ್ತಿದೆ. ನರೇಗಾ ಅಡಿಯಲ್ಲಿ ೧೨.೫ ಲಕ್ಷ ರೂ.ವರೆಗೆ ರಸ್ತೆ ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗಿದೆ. ನರೇಗಾ ಅಡಿಯಲ್ಲಿ ಕೆರೆ, ಸ್ಮಶಾನ, ಜಲಗೋಡಿ, ಪಾರ್ಕ್, ಶಾಲೆ, ಅಂಗನಾಡಿ, ಕಾಂಪೌಂಡ್ ಸೇರಿದಂತೆ ಸಮಗ್ರ ಮೂಲಭೂತ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯ್ತಿಯೂ ಕೂಡಾ ಎಲ್ಲಾ ಸೇವೆಗಳನ್ನೂ ಒದಗಿಸುವ ಕೇಂದ್ರವಾಗಬೇಕು, ಆ ನಿಟ್ಟಿನಲ್ಲಿ ಗ್ರಾ.ಪಂ.ಗಳು ನೀಡುವ ಸೇವೆಗಳಲ್ಲಿ ಮತ್ತಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಪಂಚತಂತ್ರ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದ್ದು. ಹೊಸ ತಂತ್ರಜ್ಞಾನದ ಜೊತೆಗೆ ಜನಸ್ನೇಹಿಯಾಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮಿಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಸಮಗ್ರತೆಯಿಂದ ಈ ದೂರದೃಷ್ಟಟಿ ಯೋಜನೆಯನ್ನು ರೂಪಿಸಿರುವುದರಿಂದ ಕೆಲಸಗಳು ಸಮರ್ಪಕವಾಗಿ ಆಗುತ್ತವೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬ ಪಿಡಿಓಗಳೂ ಕೂಡಾ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬ ತಾಲ್ಲೂಕು ಪಂಚಾಯ್ತಿಯ ಇಓ ಕೂಡಾ ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿ ಕುರಿತು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಮಾಲೋಚಕರಾದ ಡಾ. ವಸುಂದರಾ, ಎಎನ್ಎಸ್ಆರ್ಡಿಯ ಗಣೇಶ್ ಪ್ರಸಾದ್, ಜಿಲ್ಲೆಯ ದೂರದೃಷ್ಟಿ ಯೋಜನೆಯ ನೋಡಲ್ ಅಧಿಕಾರಿ ದೀಪಾ, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯ್ತಿ ಇಓ, ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಇದ್ದರು.
Worker who accompanied the Development Officers of Gram Panchayats