ಚಿಕ್ಕಮಗಳೂರು: ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಉದ್ಭವ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ ಮತ್ತು ಬೀರೂರು ಮಲ್ಲಿಗೆ ಬಳಗದಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಕೊಡವೂರು ನೃತ್ಯ ನಿಕೇತನದ ಕಲಾವಿದರಿಂದ ಸೋಮವಾರ ನಡೆದ ನಾರಸಿಂಹ ನೃತ್ಯ ರೂಪಕ ನೋಡುಗರ ಮನಗೆದ್ದಿತು.
ಶ್ರೀಮನ್ನಾರಾಯಣ ನರಸಿಂಹನಾಗಿ ಅವತರಿಸಿ ರಾಕ್ಷಸ ರಾಜನಾದ ಹಿರಣ್ಯಕಶ್ಯಪುವನ್ನು ಸಂಹರಿಸಿ ಲೋಕ ಕಲ್ಯಾಣ ಮಾಡುವ. ಮಹಾವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ನರಸಿಂಹಾವತಾರದ ಕಥನವನ್ನು ಕಲಾವಿದರು ಮನೋಜ್ಞ ಅಭಿನಯದ ಮೂಲಕ ಸಭಿಕರೆದುರು ಸಮರ್ಥವಾಗಿ ತೆರೆದಿಟ್ಟರು.
ಡಾ|| ಶ್ರೀಪಾದ ಭಟ್ಟರ ಸಮರ್ಥವಾದ ನಿರ್ದೇಶನ ಕಲಾವಿದರ ವಸ್ತ್ರಾಲಂಕಾರ, ಮಿಂಚಿನ ಸಂಚಾರ, ನೃತ್ಯ, ಅಭಿನಯ ಸಭಿಕರು ಆಸನದಿಂದ ಮೇಲೇಳದಂತೆ ವೇದಿಕೆಯ ಮೇಲೆ ನೆಟ್ಟ ನೋಟವನ್ನು ಅತ್ತಿತ್ತ ಹೊರಳಿಸದಂತೆ ಮಾಡಿ ಎರಡು ಗಂಟೆಗೂ ಅಧಿಕ ಕಾಲ ಅವರನ್ನು ಹಿಡಿದಿಟ್ಟವು.
ಹಿರಣ್ಯಕಶ್ಯಪುವಿನ ಪಾತ್ರವೊಂದನ್ನು ಹೊರತುಪಡಿಸಿ ಮಹಿಳಾ ಕಲಾವಿದರಿಂದಲೇ ನಡೆದ ಇಡೀ ನೃತ್ಯರೂಪಕ ಬಹಳ ವರ್ಷಗಳ ಹಿಂದೆ ಪ್ರದರ್ಶನಗೊಳ್ಳುತ್ತಿದ್ದ ಖ್ಯಾತ ಪ್ರಭಾತ್ ಕಲಾವಿದರ ನೃತ್ಯರೂಪಕವನ್ನು ನೆನಪಿಸಿತು.
ಕಯಾದು ಪಾತ್ರದಲ್ಲಿ ಗಾಯಕಿ, ಚಲನಚಿತ್ರ ನಟಿ ಮಾನಸಿ ಸುಧೀರ್ ಮತ್ತು ಹಿರಣ್ಯಕಶ್ಯಪುವಿನ ಪಾತ್ರದಲ್ಲಿ ವಿದ್ವಾನ್ ಸುಧೀರ್ ಅವರ ಅಭಿನಯ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ಇದೇ ವೇಳೆ ಗಾಯಕ ಮಲ್ಲಿಗೆ ಸುಧೀರ್ ತಂಡದಿಂದ ಸಿ.ಅಶ್ವಥ್ ಅವರು ಹಾಡಿರುವ ಗೀತೆಗಳ ಗಾಯನ ನಡೆಯಿತು, ನೃತ್ಯರೂಪಕವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಮಾಜದಲ್ಲಿ ಸದಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಚಿತ್ರನಟಿ ಮಾನಸಿ ಸುಧೀರ್ ಮತ್ತು ವಿದ್ವಾನ್ ಸುಧೀರ್ ಅವರಿಗೆ ಮಲ್ಲಿಗೆ ಪುರಸ್ಕಾರ ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಲಾವಿದರಿಂದ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು.
ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ, ರಶ್ಮಿ ರಮೇಶ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಲ್ಕಟ್ಟೆ ಪುಸ್ತಕದ ಮನೆಯ ಹೆಚ್.ಎಂ.ನಾಗರಾಜ ರಾವ್, ರೇಖಾ ನಾಗರಾಜರಾವ್, ವೈಷ್ಣವಿ ಎನ್.ರಾವ್, ಉದ್ಭವ ಪ್ರಕಾಶನದ ಡಿ.ಹೆಚ್.ನಟರಾಜ್, ರಾಮಾ ಜಿ.ಹಾಸ್ಯಗಾರ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ನ ಮಲ್ಲಿಗೆ ಸುಧೀರ್, ಶಾಂತಾ ಸುಧೀರ್, ಅಭಿ ಮಲ್ಲಿಗೆ, ಮಲ್ಲಿಗೆ ಬೀರೂರು ಬಳಗದ ಸ್ವರ್ಣಾ ಗುರುನಾಥ್, ಮಂಜುಳಾ ಮಹೇಶ್ ಉಪಸ್ಥಿತರಿದ್ದರು.
Narasimha's dance metaphor caught the attention of the audience