ಚಿಕ್ಕಮಗಳೂರುಎಕ್ಸ್ಪ್ರೆಸ್: ನಗರದ ಪ್ರಮುಖ ಸರ್ಕಲ್ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ನಗರದ ಸೌಂದರ್ಯ ಹೆಚ್ಚಿಸಲಾಗುವುದೆಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ನಗರದ ವಾರ್ಡ್ ನಂ. ೪ರ ಹಿರೇಮಗಳೂರು ವೃತ್ತವನ್ನು ಅಭಿವೃದ್ಧಿಪಡಿಸಿ, ಅಂಬೇಡ್ಕರ್ ವೃತ್ತ ಪ್ರತಿಮೆ ನಿರ್ಮಿಸಲು ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ಪಿಡಬ್ಲೂ ಇಲಾಖೆಯಿಂದ ಪ್ರಾರಂಭಿಸಿದ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ಣಗೊಳಿಸುವ ಕೆಲಸಕ್ಕೆ ನಗರಸಭೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ,
ಈ ದಿನ ಒಂದು ಸುದಿನವಾಗಿದ್ದು, ೧೩ ಲಕ್ಷ ರೂ ಅಂದಾಜು ವೆಚ್ಚದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ವೃತ್ತದ ಕಾಮಗಾರಿ ಪ್ರಾರಂಭಿಸಲಾಗಿದೆ ಹಾಗೂ ಪ್ರತಿನಿತ್ಯ ನಗರದಲ್ಲಿ ಸಂಗ್ರಹವಾಗುವ ಮನೆಗಳ ಕಸಗಳ ಡ್ರಪಿಂಗ್ ಮಾಡಲು ಹಾಗೂ ಆಟೋ ಟ್ರಿಪ್ಪರ್ಗಳ ನಿಲ್ಲಿಸಲು ಜಾಗದ ಕೊರತೆ ಇದ್ದ ಕಾರಣದಿಂದ, ಬಸವನಹಳ್ಳಿ ಕೆರೆ ಏರಿಯ ಮೇಲೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಳ್ಳಲಾಗಿತ್ತು, ಬಸವನಹಳ್ಳಿ ಕೆರೆಯು ಸುಂದರ ಪ್ರವಾಸಿ ಕೇಂದ್ರವಾಗಿ ಮಾರ್ಪಾಡಾಗುವುದರಿಂದ, ನಗರದ ೬೦ಫಿಟ್ ರಸ್ತೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
೬೦ ಫಿಟ್ ರಸ್ತೆಯಲ್ಲಿರುವ ಸರ್ಕಾರಿ ಹಳ್ಳದ ಜಾಗವನ್ನು ತಹಸೀಲ್ದಾರ್ರೊಂದಿಗೆ ಪರಿಶೀಲಿಸಿ, ೪೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್, ಚರಂಡಿ ಮತ್ತು ರಸ್ತೆಯನ್ನು ನಿರ್ಮಿಸಿ ಆಟೋ ಟ್ರಿಪ್ಪರ್ಗಳಲ್ಲಿ ಸಂಗ್ರಹಿಸಿದ ಕಸಗಳನ್ನು ವಿಲೇವಾರಿ ಮಾಡಿ ಇಂದಾವರಕ್ಕೆ ಕಳಿಸಲಾಗುತ್ತಿದೆ ಎಂದರು.
ನಗರದಲ್ಲಿಂದು ೬೦ ಲಕ್ಷ ರೂಗಳಿಗು ಅಧಿಕ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದ್ದು ಈಗಾಗಲೇ ಎಂಜಿ ರಸ್ತೆಯ ಮರುಜೋಡಣೆ ಕಾಮಗಾರಿಯು ಪ್ರಾರಂಭವಾಗಿದೆ ಹಾಗೂ ೩೦ನೇ ವಾರ್ಡ್ನಲ್ಲಿ ೧೨೦ ಮೀ ಉದ್ಧದ ಬಾಕ್ಸ್ ಚರಂಡಿ ಕಾಮಗಾರಿಗೆ ಇಂದು ಚಾಲನೆ ನೀಡಿಲಾಯಿತೆಂದು ತಿಳಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಸರಿಯಾಗಿರುವ ಫುಟ್ಪಾಥ್ ಮತ್ತು ರಸ್ತೆಗಳನ್ನು ಕಿತ್ತು ಮುರುಜೋಡಣೆ ಮಾಡುತ್ತಿರುವುದರಿಂದ ಹಣ ಪೊಲಾಗುತ್ತಿದೆ ಎಂಬ ವಿರೋಧ ಪಕ್ಷದವರ ಆರೋಪಕ್ಕೆ, ಪ್ರತಿಕ್ರಿಯಿಸಿ ಮಾತನಾಡಿ ನಗರಸಭೆ ಅಧ್ಯಕ್ಷ ಜ.೧೮ ರಿಂದ ನಡೆಯುವ ಚಿಕ್ಕಮಗಳೂರು ಹಬ್ಬಕ್ಕೆ ನೆರೆಜಿಲ್ಲೆ ಮತ್ತು ರಾಜ್ಯಗಳಿಂದ ಹಬ್ಬಕ್ಕೆ ಆಗಮಿಸಲಿದ್ದು, ನಮ್ಮ ಜಿಲ್ಲೆಯು ಸ್ವಚ್ಚ ಹಾಗೂ ಸುಂದರವಾಗಿ ಕಾಣುವಂತೆ ಮಾಡುವುದು ಆಡಳಿತ ಪಕ್ಷದ ಜವಾಬ್ದಾರಿಯಾದ ಕಾರಣ ಮರುಜೋಡಣೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಿದ್ಯಾಬಸವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜ್ಕುಮಾರ್ , ಮಾಜಿ ನಗರಸಭೆ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ, ಆಯುಕ್ತ ಬಸವರಾಜ್, ಇಂಜಿನಿಯರ್ ಚಂದನ್, ರಶ್ಮಿ, ಗುತ್ತಿಗೆದಾರ ರೇವನಾಥ್, ಸ್ಥಳಿಯರಾದ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
The work of all the circles in the city will be completed soon