ಚಿಕ್ಕಮಗಳೂರುಎಕ್ಸ್ಪ್ರೆಸ್: ಇದೇ ತಿಂಗಳು ೧೮ ರಿಂದ ೨೨ ರ ವರೆಗೆ ನಡೆಯಲಿರುವ ಚಿಕ್ಕಮಗಳೂರು ಹಬ್ಬಕ್ಕೆ ನಮ್ಮ ಸಂಸ್ಕೃತಿಯ ಸೊಗಡು ಬಿಂಬಿಸುವ ವಿಶೇಷ ಮೆರುಗು ನೀಡಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ತಿಳಿಸಿದರು.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಿಕ್ಕಮಗಳೂರು ಹಬ್ಬದ ಲಾಂಛನವನ್ನು ಬಿಡುಗಡೆ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಚಿಕ್ಕಮಗಳೂರು ಹಬ್ಬದ ಸಂಬಂಧ ಎಲ್ಲಾ ಮಾಹಿತಿಗಳನ್ನು ಒದಗಿಸುವ ಆಪ್ ಅನ್ನು ಸಹ ಇಂದು ಬಿಡುಗಡೆಗೊಳಿಸಲಾಗಿದೆ. ೫ ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಪ್ರಧಾನ ವೇದಿಕೆ ಜೊತೆಗೆ ಉಪ ವೇದಿಕೆಗಳು ಇರುತ್ತವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು, ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಸರ್ಕಾರಿ ಶಾಲೆಗಳು ಈ ಹಬ್ಬದಲ್ಲಿ ಭಾಗಿಯಾಗಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದಲೂ ಕಲಾ ತಂಡಗಳು ಆಗಮಿಸಲಿದ್ದು, ಇದು ವೈಶಿಷ್ಟಯಪೂರ್ಣವಾಗಲಿದೆ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಚಿಕ್ಕಮಗಳೂರು ಹಬ್ಬಕ್ಕೆ ಮುಖ್ಯಮಂತ್ರಿಗಳು ಬರುವುದು ಖಾತ್ರಿಯಾಗಿದೆ. ಪ್ರಧಾನ ಮಂತ್ರಿಗಳಿಗೂ ಆಹ್ವಾನ ನೀಡಿದ್ದೇವೆ. ರಾಜ್ಯಪಾಲರಿಗೂ ಆಹ್ವಾನಿಸಿದ್ದೇವೆ. ವಿವಿಧ ಇಲಾಖೆ ಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮೆಲ್ಲಾ ಶಾಸಕರು, ಸಂಸದರು ಬರಲಿದ್ದಾರೆ. ಚಿಕ್ಕಮಗಳೂರು ಹಬ್ಬಕ್ಕೆ ಸುಮಾರು ೯.೫೦ ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಈಗ ಸರ್ಕಾರ ೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಉಳಿದ ಸಂಪನ್ಮೂಲ ಕ್ರೂಢೀಕರಿಸುವ ಬಗೆಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸುತ್ತೇವೆ ಎಂದರು.
ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಮೇಳ, ತೋಟಗಾರಿಕೆ, ಮೀನುಗಾರಿಕೆ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜ್ಞಾನ ವೈಭವ ಎನ್ನುವ ಕಾರ್ಯಕ್ರಮ ಎಐಟಿ ಕಾಲೇಜಿನಲ್ಲಿ ನಡೆಯಲಿದೆ. ಗ್ರಾಮೀಣ ಕ್ರೀಡಾಕೂಟ, ಕೆಸರುಗದ್ದೆ ಓಟ, ಬೋಟಿಂಗ್, ವಾಟರ್ ಸ್ಪೋರ್ಟ್ಸ್, ಯೋಗ ಎಲ್ಲವನ್ನೂ ಒಳಗೊಂಡ ಯೋಜನಾಬದ್ಧವಾದ ಕಾರ್ಯಕ್ರಮವಿದು ಎಂದರು.
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವ ರೀತಿ ಕಳೆದ ಬಾರಿಯೂ ಚಿಕ್ಕಮಗಳೂರು ಹಬ್ಬದಲ್ಲಿ ಭಾಗವಹಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಆನಂದ ಪಟ್ಟು, ಆಹಾರ ಮೇಳದಲ್ಲಿ ರುಚಿ ರುಚಿಯಾದ ಊಟವನ್ನೂ ಮಾಡಿದರು. ಹಬ್ಬ ಮುಗಿದ ಮೇಲೆ ಪ್ರೆಸ್ ಮೀಟ್ ಆರೋಪವನ್ನೂ ಮಾಡಿದರು ಎಂದು ಟೀಕಿಸಿದರು.
ಆದರೂ ನಾವು ಮಾಡಿದ ಕೆಲಸ ಅವರೆಲ್ಲಾ ಆರೋಪಗಳಿಗೆ ಉತ್ತರವನ್ನೂ ಕೊಟ್ಟಿದೆ. ಇದೇ ವೇಳೆ ಕಳೆದ ಬಾರಿ ೨೫ ಕೋಟಿ ರೂ. ಖರ್ಚಾಗಿದೆ ಎಂದು ಆರೋಪ ಮಾಡಿದರು. ಆದರೆ ವಾಸ್ತವವಾಗಿ ೩.೨೫ ಕೋಟಿ ರೂ. ಮಾತ್ರ ಖರ್ಚಾಗಿತ್ತು. ವಾಸ್ತವಿಕತೆಗೂ ಅವರು ಮಾಡುವ ಆರೋಪಕ್ಕೂ ಸಂಬಂಧ ಇರಲಿಲ್ಲ ಎಂದರು.
ಈ ಬಾರಿಯೂ ಅವರನ್ನೆಲ್ಲಾ ಒಳಗೊಂಡ ಪೂರ್ವಭಾವಿ ಸಭೆ ಮಾಡಿದ್ದೆವು. ನಿಮ್ಮೆಲ್ಲರ ಸಹಕಾರಬೇಕೆಂದು ಕೋರಿದ್ದೇವೆ. ಪಕ್ಷಾತೀತವಾಗಿ ಎಲ್ಲರನ್ನೂ ಜೋಡಿಸಿಕೊಳ್ಳುವ ಕೆಲಸ ಮಾಡಿದ್ದೇವೆ. ಇದು ಆಸಕ್ತಿ ಇರುವವರು ಅವರಾಗಿಯೇ ಜೋಡಿಸಿಕೊಳ್ಳುವ ಹಬ್ಬವಾಗಿದೆ. ನಾವು ಯಾರನ್ನೂ ಬಿಟ್ಟು ಮಾಡಬೇಕು ಎಂದು ಯೋಚನೆ ಮಾಡಿಲ್ಲ ಎಂದು ತಿಳಿಸಿದರು.
ಇಂದಿನ ಸಭೆಯಲ್ಲೂ ಪ್ರಾಮಾಣಿಕತೆ ಜೊತೆಗೆ ಪಾರದರ್ಶಕತೆಯೂ ಇರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ವಿವಿಧ ಇಲಾಖೆ ಅಧಿಕಾರಿಗಳು ಅವರೇ ಬಜೆಟ್ ತಯಾರು ಮಾಡಿದ್ದಾರೆ. ಸುಮಾರು ನಾಲ್ಕೈದು ಲಕ್ಷ ಜನರು ಚಿಕ್ಕಮಗಳೂರು ಹಬ್ಬದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ. ಸಿಇಓ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಆನಂದ್, ಇತರರು ಇದ್ದರು.
9.50 crores for the Chikkamagaluru festival