ಚಿಕ್ಕಮಗಳೂರುಎಕ್ಸ್ಪ್ರೆಸ್: ನಗರದ ದಂಟರಮುಕ್ಕಿಯಲ್ಲಿ ೫೪ ಕೋಟಿ ರೂ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮತ್ತು ಪೊಲೀಸ್ ಅಧೀಕ್ಷಕರ ಕಟ್ಟಡ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದೆಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಅವರು ಮಂಗಳವಾರ ಸಂಜೆ ದಂಟರಮುಕ್ಕಿಯ ವಾರ್ಡ್ ನಂ. ೨೩, ೨೪ರಲ್ಲಿ ಏರ್ಪಡಿಸಿದ್ದ ಸಾರ್ವಜನಿಕರ ಬಳಿಗೆ ನಗರಸಭೆ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕಳೆದ ೫ ವರ್ಷಗಳಲ್ಲಿ ದಂಟರಮುಕ್ಕಿಯ ೨೩ನೇ ವಾರ್ಡ್ಗೆ ೪ ಕೋಟಿ, ೨೪ನೇ ವಾರ್ಡ್ಗೆ ೩ ಕೋಟಿಗೂ ಹೆಚ್ಚಿನ ಅನುದಾನ ನೀಡಿ ಮಾದರಿ ವಾರ್ಡ್ಗಳನ್ನಾಗಿ ಮಾಡಲಾಗಿದೆ, ನಿಮ್ಮ ವಾರ್ಡ್ಗೆ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ, ಪೊಲೀಸ್ ಅಧೀಕ್ಷಕರ ಕಛೇರಿ ಪ್ರಾರಂಭಕ್ಕೆ ಶಂಕುಸ್ಥಾಪನೆ ನೆರೆವೇರಿಸಲಾಗುವುದು, ಬಸವನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ, ಸಂಗೋಳ್ಳಿ ರಾಯಣ್ಣ ರವರ ಪ್ರತಿಮೆ ನಿರ್ಮಿಸಲಾಗುವುದು, ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ ೭೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ತರಲಾಗಿದ್ದು, ಈ ಹಣದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಚಿಕ್ಕಮಗಳೂರು ನಗರದ ಎಲ್ಲಾ ೩೫ ವಾರ್ಡ್ಗಳಿಗೂ ೧೨ ಲಕ್ಷ ಎಲ್.ಇ.ಡಿ. ಬೀದಿ ದೀಪ ಅಳವಡಿಸುವ ಕೆಲಸ ಮುಂದುವರೆದಿದ್ದು, ರಸ್ತೆಯ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ತಮಗೆ ವಿವಿಧ ಜವಾಬ್ದಾರಿ ನೀಡಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ಹಿಂದೆ ಬಿದ್ದಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಸತತವಾಗಿ ನಾಲ್ಕು ಬಾರಿ ನನ್ನನ್ನು ಆಯ್ಕೆ ಮಾಡಿದ ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಜನರ ವಿಶ್ವಾಸ ಮತ್ತು ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ನಗರದ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ವಿನಾಃಕಾರಣ ನಗರಸಭೆ ಕಛೇರಿಗೆ ಪದೇ ಪದೇ ಅಲಿಯುವುದನ್ನು ತಪ್ಪಿಸಲು ನಗರದ ೩೫ ವಾರ್ಡ್ಗಳಲ್ಲೂ ಸಾರ್ವಜನಿಕರ ಬಳಿಗೆ ನಗರಸಭೆ ಎಂಬ ವಿಶೇಷ ಜನಸಂಪರ್ಕ ಸಭೆಯನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಯಾವುದೇ ಸಮಸ್ಯೆ ಇದ್ದರೂ ಕ್ಷೇತ್ರದ ಜನಪ್ರಿಯ ಶಾಸಕರ ಸಮ್ಮುಖದಲ್ಲೇ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ ಶಾಸಕರು ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಸಮಯವನ್ನು ಮಾಡಿಕೊಂಡು ಜನಸಂಪರ್ಕ ಸಭೆಗೆ ಬಂದು ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸುವುದರ ಜತೆಗೆ ಜಿಲ್ಲೆಯ ಅಭಿವೃದ್ಧಿಗಾಗಿ ೬೦೦ ಕೋಟಿ ರೂಗಳ ಅನುದಾನವನ್ನು ತಂದಿದ್ದಾರೆ, ದಂಟರಮುಕ್ಕಿ ಮತ್ತು ಜ್ಯೋತಿ ನಗರಕ್ಕೆ ೬ ಕೋಟಿ ವಿಶೇಷ ಅನುದಾನವನ್ನು ಮೀಸಲಿಟ್ಟು ಅಭಿವೃದ್ಧಿಯ ಕಾಮಗಾರಿ ನಡೆಯುತ್ತಿದೆ ಎಂದರು.
ನಗರದ ದಂಟರಮುಕ್ಕಿ ಕೆರೆಯು ೩೮ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳ ಕಛೇರಿಯು ಇದೆ ಸ್ಥಳದಲ್ಲಿ ಆಗಲಿದ್ದು, ಈ ಪ್ರದೇಶವು ನಗರದ ಅತಿ ಹೆಚ್ಚು ಬೇಡಿಕೆಯ ಪ್ರದೇಶವಾಗಲಿದೆ, ನಗರಸಭೆ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಸ್ವಚ್ಚತೆ ಕಾರ್ಯ, ಬೀದಿ ದೀಪ, ಯುಜಿಡಿ, ಅಮೃತ್ ಯೋಜನೆ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ, ಸಾರ್ವಜನಿಕರ ಯಾವುದೇ ದೂರುಗಳಿದ್ದಲ್ಲಿ ಸ್ಥಳದಲ್ಲಿ ಪರಿಹರಿಸಲಾಗುವುದು, ನಗರದ ವಾರ್ಡ್ಗಳನ್ನು ಮಾದರಿ ವಾರ್ಡ್ಗಳನ್ನಾಗಿಸುವ ನಿಟ್ಟಿನಲ್ಲಿ ಶಾಸಕರು ಮತ್ತು ನಗರಸಭೆ ಪಣವನ್ನು ತೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಮಧುಕುಮಾರ್ ರಾಜ್ಅರಸ್, ಮಂಜುಳಾಶ್ರೀನಿವಾಸ್, ಮೋಹನ್, ಗುರುಮಲ್ಲಪ್ಪ, ರವಿ, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ್, ಮತ್ತಿತರರು ಉಪಸ್ಥಿತರಿದ್ದರು.
Construction of District Collector's office and Superintendent of Police at a cost of Rs 54 crore