ಚಿಕ್ಕಮಗಳೂರುಎಕ್ಸ್ಪ್ರೆಸ್: ಇಂದಿನ ಪೀಳಿಗೆಗೆ ಪಾರಂಪರಿಕ ಜ್ಞಾನ, ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಜ್ಞಾನ ವೈಭವ ಶೀರ್ಷಿಕೆಯಡಿ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ಎ.ಐ.ಟಿ ಕಾಲೇಜು ಆವರಣದಲ್ಲಿ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ ಸ್ಟಾಲ್ ನಿರ್ಮಿಸಲು ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ ಮೇಳ ಮತ್ತು ವಸ್ತು ಪ್ರದರ್ಶನಕ್ಕೆ ಜ್ಞಾನ ವೈಭವ ಎಂಬ ಶೀರ್ಷಿಕೆಯಡಿ ವಿವಿಧ ಹೂವಿನ ಕಲಾಕೃತಿಗಳ ಪ್ರದರ್ಶನ, ತರಕಾರಿ ಕೆತ್ತನೆಗಳ ಕಲಾಕೇತಿಗಳ ಪ್ರದರ್ಶನ, ಪುನೀತ್ ರಾಜ್ ಕುಮಾರ್ ಹೂವಿನ ಪುತ್ತಳಿ, ರಂಗೋಲಿ ಕಲಾಕೃತಿ ಪ್ರದರ್ಶನ, ಬೋನ್ಸಾಯ್ ಗಿಡಗಳ ಪ್ರದರ್ಶನ, ಆರ್ಕೀಡ್ ಪ್ರದರ್ಶನ, ಎಕ್ಸೋಟಿಕ್ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ, ಹನಿ ನೀರಾವರಿ ಮಾದರಿ ಪ್ರದರ್ಶನ, ಜೇನು ಕೃಷಿ, ವಿವಿಧ ಯಂತ್ರೋಪಕರಣಗಳ ಪ್ರದರ್ಶನ, ರೈತರು ಬೆಳೆದಂತಹ ವಿವಿಧ ತೋಟಗಾರಿಕಾ ಬೆಳೆಗಳ ಪ್ರದರ್ಶಿಕೆಗಳ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದರು.
ಕೃಷಿ ಮತ್ತು ಇತರೆ ೪೦ ಇಲಾಖೆಗಳಿಂದ ಅತ್ಯಾಕರ್ಷಕ ಸಜೀವ ಮಾದರಿಗಳ ವಸ್ತು ಪ್ರದರ್ಶನ ಮಾಡಲಾಗುತ್ತಿದೆ, ಕೃಷಿ ಮೇಳ ಮತ್ತು ಪ್ರದರ್ಶನವು ೩ ಹಂತದಲ್ಲಿ ಜರುಗಲಿದೆ. ಸಾಧಕರಿಗೆ ಸನ್ಮಾನ ವಿಭಾಗದಲ್ಲಿ ಈಗಾಗಲೇ ಕೃಷಿ ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಇಲಾಖಾವಾರು ಸಾಧಕರ ಪಟ್ಟಿಯನ್ನು ಸಿದ್ದಗೊಳಿಸಲಾಗುತ್ತಿದೆ.
ವಿಚಾರಗೋಷ್ಠಿಗಳು ಸಂಬಂಧಪಟ್ಟ ಹಾಗೂ ಸ್ಥಳೀಯ ಕೃಷಿಕರು ರೇಷ್ಮೆ ಕೃಷಿಕರು ತೋಟಗಾರಿಕೆ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದಿರುವ ಪ್ರಗತಿಪರರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ರೀತಿಯಲ್ಲಿ ಒಟ್ಟು ೫ ದಿನ ಸುಮಾರು ೧೬ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ.
ಸಜೀವ ಮಾದರಿಗಳ ವಸ್ತು ಪ್ರದರ್ಶನದಲ್ಲಿ ಮುಖ್ಯವಾಗಿ ಮಳಿಗೆಗಳ ಪ್ರವೇಶ ದ್ವಾರದಲ್ಲಿ ಅತ್ಯಾಕರ್ಷಕ ಸಿರಿಧಾನ್ಯ ರಾಶಿ ಹಾಗೂ ಬೆಳವಾಡಿಯ ವೀರನಾರಾಯಣ ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ಇಂಜಿನಿಯರಿಂಗ್ ಇಲಾಖೆಗಳಿಂದ ಜಿಲ್ಲಾಡಳಿತ ಭವನದ ಮಾದರಿ ಹಿರೇನಲ್ಲೂರು ದೇವಾಲಯ ಆಸಂದಿ ದೇವಾಲಯ ಹಾಗೂ ಬಗ್ಗವಳ್ಳಿ ದೇವಾಲಯಗಳ ಕಲಾ ಕೃತಿಗಳನ್ನು ನಿರ್ಮಿಸಲಾಗುತ್ತಿದೆ.
ಇದರ ಜೊತೆಗೆ ಚಿತ್ರ ಸಂತೆ, ಛಾಯಾಚಿತ್ರ, ಪುಸ್ತಕ ಮೇಳ ಹಾಗೂ ಗಾಂಧಿ ಸ್ಮರಣೆ ಕುರಿತು ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಅರಣ್ಯ ಇಲಾಖೆಯಿಂದ ವನ್ಯ ಜಗತ್ತು ತೋಟಗಾರಿಕೆ ಕಾಲೇಜಿನಿಂದ ಚಿಟ್ಟೆ ಮತ್ತು ಕೀಟ ಪ್ರಪಂಚ ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯ ಜಗತ್ತು ಪ್ರದರ್ಶನ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹೆಲ್ತ್ ವೆಲ್ನೆಸ್ ಸೆಂಟರ್ ಮಾದರಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಅಭಿವೃದ್ಧಿ ಇಲಾಖೆಯಿಂದ ಎನ್ಆರ್ಎಲ್ಎಂ, ಎಸ್ಬಿಎಂ ಹಾಗೂ ನರೇಗಾ ಯೋಜನೆಗಳ ಸಜೀವ ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ.
ಜನವರಿ ೨೧ ರಂದು ಶ್ವಾನ ಪ್ರದರ್ಶನ (ಡಾಗ್ ಶೋ) ಹಾಗೂ ಜಾನುವಾರು ಪ್ರದರ್ಶನ ಏರ್ಪಡಿಸಲಾಗಿದೆ.
ಜನವರಿ ೧೯ ಅಥವಾ ಜನವರಿ ೨೦ ರಂದು ಪೂರ್ಣ ಕುಂಭದೊಂದಿಗೆ ಅತ್ಯಾಕರ್ಷಕವಾಗಿ ಅಲಂಕೃತಗೊಂಡ ಎತ್ತಿನಗಾಡಿಗಳ ಮೆರವಣಿಗೆ ಹಾಗೂ ಸಿರಿಧಾನ್ಯ ನಡಿಗೆ ಹಮ್ಮಿಕೊಳ್ಳಲಾಗುವುದು.
ಹೆಸರಾಂತ ಐಎಸ್ಆರ್ಓ, ನೆಹರು ತಾರಾಲಯ ಹಾಗೂ ಹೆಚ್ಎಎಲ್ ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರದರ್ಶನ ಮಾಡಲಾಗುತ್ತದೆ.
ಪ್ರತಿ ನಿತ್ಯ ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾರ್ವಜನಿಕರು, ರೈತರು, ಮಹಿಳಾ ಸ್ವ-ಸಹಾಯ ಸಂಘಗಳ ಹಾಗೂ ಎಫ್.ಪಿ.ಒ ಗಳಿಂದ ದಿನಕ್ಕೆ ಕನಿಷ್ಟ ೧ ಲಕ್ಷದಂತೆ ಒಟ್ಟು ೫ ಲಕ್ಷ ವೀಕ್ಷಕರಿಂದ ವಸ್ತು ಪ್ರದರ್ಶನ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲ್ಲೇಶ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Guddali Puja by MLA for construction of exhibition stalls