ಚಿಕ್ಕಮಗಳೂರು-ಮನುಷ್ಯ ಸ್ವಾರ್ಥಕ್ಕಾಗಿ ಬದುಕದೆ ಸಮಾಜಕ್ಕಾಗಿ ಬದುಕಬೇಕೆಂದು ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ನಗರದ ಎಐಟಿ ಸರ್ಕಲ್ನಲ್ಲಿ ಇರುವ ಜಿಲ್ಲಾ ಒಕ್ಕಲಿಗರ ಭವನದಲ್ಲಿ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮಿ ಮಹಾ ಗುರುವಿನ ೧೦ನೇ ವರ್ಷದ ಆರಾಧನೆ ಮತ್ತು ಸಂಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಾಲ ಗಂಗಾಧರನಾಥ ಸ್ವಾಮೀಜಿಯವರ ಭಾವ ಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಮಾಡಿರುವ ಸೇವೆ ನಾಡಿಗೆ ಮಾತ್ರವಲ್ಲ ಜಗತ್ತಿಗು ತಿಳಿದಿದೆ, ಶ್ರೀಗಳು ಆದಿಚುಂಚನಗಿರಿಯ ೭೧ನೇ ಪೀಠಾಧ್ಯಕ್ಷರಾದಮೇಲೆ ಈ ಸಂಸ್ಥೆಯು ಕಲ್ಪವೃಕ್ಷವಾಗಿ ಬೆಳೆದಿದೆ, ಪೂಜ್ಯ ಸ್ವಾಮೀಜಿಯವರು ಜ್ಞಾನ, ವಿಜ್ಞಾನ ಮತ್ತು ಧಾರ್ಮಿಕತೆ ಈ ಮೂರು ಕ್ಷೇತ್ರಗಳಲ್ಲಿಯೂ ತ್ರಿವೇಣಿ ಸಂಗಮದಂತೆ ಕೆಲಸವನ್ನು ಮಾಡುವುದರ ಮೂಲಕ ನಾಡಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ, ಸ್ವಾಮಿ ವಿವೇಕಾನಂದರ ಪ್ರಭಾವ ಶ್ರೀಗಳ ಮೇಲೆ ಅಪಾರವಾಗಿತ್ತು ಎಂದರು.
ಪೂಜ್ಯ ಸ್ವಾಮೀಜಿಯವರು ಮೊದಲು ಗ್ರಾಮೀಣ ಜನರಿಗೆ ಶಿಕ್ಷಣ ದೋರೆಯುವಂತಾಗಬೇಕೆಂದು ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡುವುದರ ಮೂಲಕ ಸಮಾಜಮುಖಿ ಕೆಲಸವನ್ನು ಮಾಡಿದ್ದಾರೆ, ಶ್ರೀ ಗುಣನಾಥ ಸ್ವಾಮೀಜಿಯವರು ಬರೆದಿರುವ ಪುಸ್ತಕದಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯ ಈ ಮೂರು ಕ್ಷೇತ್ರಗಳಲ್ಲಿ ಅದ್ಬುತವಾದ ಸಾಧನೆಯನ್ನು ಮಾಡಿರುವ ಬಾಲಗಂಗಾಧರನಾಥ ಸ್ವಾಮಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಬಾಲಗಂಗಾಧರನಾಥ ಸ್ವಾಮಿ ರವರು ೧೯೪೫ರಲ್ಲಿ ಜನಿಸಿ ೨೦೧೩ರಲ್ಲಿ ನಮ್ಮ ಪಾಲಿನ ದೇವರಾಗಿ ತೆರಳಿದ್ದಾರೆ, ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗು ದೇವರಾಗಿದ್ದಾರೆ, ೫೦ ವರ್ಷಗಳ ಹಿಂದೆ ಆದಿಚುಂಚನಗಿರಿ ಸಂಸ್ಥೆಯನ್ನು ಸ್ಥಾಪಿಸಿ ಜಿಲ್ಲೆ ಕೀತಿಯನ್ನು ರಾಜ್ಯದೆಲ್ಲೆಡೆ ಹರಡಿ ಚಿಕ್ಕಮಗಳೂರನ್ನು ಹೆಸರುವಾಸಿಯಾಗುವಂತೆ ಮಾಡಿ, ಇಂದು ಆದಿಚುಂಚನಗಿರಿ ಬೃಹತ್ತಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದೀಪವಾಗಿದೆ ಎಂದರು.
ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದಾದ್ಯಂತೆ ೧೫೦ ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ, ಅವರು ತಮ್ಮ ಜೀವನದಲ್ಲಿ ವಿದ್ಯಾಭ್ಯಾಸದ ಜತೆಗೆ ಪರಿಸರದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಿದ್ದರು, ರಾಜ್ಯದಲ್ಲಿ ಅವರು ನೆಟ್ಟಿದ ಲಕ್ಷಾತಂರ ಗಿಡಗಳು ಇಂದು ಮರಗಳಾಗಿ ಬೆಳೆದು ನಿಂತಿವೆ, ರಾಜ್ಯ ಸರ್ಕಾರ ಅವರ ಪರಿಸರದ ಬಗೆಗಿನ ಪ್ರೇಮ ಮತ್ತು ಕಾಳಜಿಯನ್ನು ಗುರುತಿಸಿ ಪರಿಸರ ರತ್ನ ಎಂಬ ಪ್ರಶಸ್ತಿ ನೀಡಿದೆ, ಭಾರತ ಸರ್ಕಾರ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು, ಅವರ ೭೬ ವರ್ಷ ಬದುಕಿನಲ್ಲಿ ವಿದ್ಯಾರ್ಥಿಗಳಿಗಾಗಿ, ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯೊಂದಿಗೆ ಅವರ ಜೀವನವನ್ನು ಅರ್ಪಣೆ ಮಾಡಿ ನಾವೆಲ್ಲರು ಪೂಜಿಸಲ್ಪಡುವ ನೂರಾರು ವರ್ಷಗಳಾದರು ನೆನಪಿಸಿಕೊಳ್ಳುವ ಸ್ವಾಮೀಜಿಗಳಾಗಿದ್ದಾರೆ ಎಂದರು.
ಶಿಕ್ಷಣ ಶ್ರೀಮಂತರ ಸ್ವತ್ತಾಗದೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬಡವರಿಗೂ ಶಿಕ್ಷಣ ಕೈಗೆಟಕುವಂತೆ ಮಾಡಿದ್ದಾರೆ, ಶ್ರೀಗಳು ಒಕ್ಕಲಿಗ ಜನಾಂಗದಲ್ಲಿ ಜನಸಿದ್ದರು ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಜನರನ್ನು ಪ್ರೀತಿಯಿಂದ ಕಾಣುತಿದ್ದರು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರು ಸಮಾಜದ ಮತ್ತು ದೇಶದ ಅಭಿವೃದ್ಧಿಗಾಗಿ ಮುನ್ನಡೆಯೋಣ, ಶ್ರೀಗಳ ಹುಟ್ಟಿದ ಜ.೧೮ ರಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರ ಜತೆಗೆ ಜಿಲ್ಲೆಯಲ್ಲಿ ಸಾಧನೆ ಮಾಡಿದ ಗಣ್ಯವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಮಾಡುವುದರ ಮುಖಾಂತರ ಶ್ರೀಗಳ ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಈ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಬೇಕೆಂದು ತಿಳಿಸಿದರು.
ಎಐಟಿ ಸರ್ಕಲ್ನಲ್ಲಿ ೧.೫ ಕೋಟಿ ರೂ ವೆಚ್ಚದ ಬಾಲಗಂಗಾಧರನಾಥ ಸ್ವಾಮಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಕ್ಷೇತ್ರದ ಶಾಸಕರಿಗೆ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಮನವಿ ನೀಡಲಾಗಿದ್ದು, ಶ್ರೀ ನಿರ್ಮಲಾನಂದ ಸ್ವಾಮಿಗಳು ಶಾಸಕರು ಮತ್ತು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದು ಅತಿಶೀಘ್ರದಲ್ಲಿ ಶ್ರೀಗಳ ಬೃಹತ್ತಾದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದೆಂದು ತಿಳಿಸಿದರು.
ವೈದ್ಯರಾದ ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ ನನ್ನ ಆರಾದ್ಯ ದೈವ ಮತ್ತು ಗುರು ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ೧೦ನೇ ವರ್ಷದ ಚಿರಸ್ಮರಣೆ ಕಾರ್ಯಕ್ರಮ ಅತ್ಯಂತ ಅರ್ಥ ಪೂರ್ಣವಾದದ್ದು, ಬಾಲಗಂಗಾಧರನಾಥ ಸ್ವಾಮಿಗಳ ಅನುಪಸ್ಥಿತಿಯಲ್ಲಿ ಸಂಸ್ಥೆಯ ಬಗ್ಗೆ ಚಿಂತಿಸುತ್ತಿದ್ದ ದಿನಗಳಲ್ಲಿ, ೨೦ ವರ್ಷಗಳ ಕಾಲ ಶ್ರೀಗಳ ಸಂಪರ್ಕದಲ್ಲಿದ್ದ ನಿರ್ಮಲಾನಂದ ಸ್ವಾಮಿಗಳು ಸಂಸ್ಥೆಯನ್ನು ಉಳಿಸಿ ಬೆಳೆಸಿದ್ದಾರೆ, ಅವರಿಗೆ ನಮ್ಮೆಲ್ಲರ ಗೌರವ ಸಲ್ಲಬೇಕು, ಜಿಲ್ಲಾ ಒಕ್ಕಲಿಗರ ಸಂಘ ಅನೇಕ ಹಿರಿಯರು ಕಷ್ಟಪಟ್ಟು ಕಟ್ಟಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಇದಕ್ಕೆ ಗುರುಗಳ ಆಶೀವಾದ ಸ್ವಾಮೀಜಿಯವರ ಮಾರ್ಗದರ್ಶನ ಇದೆ ಎಂದರು.
೨೪೦೦ ವರ್ಷಗಳ ಹಿಂದೆ ಸ್ಥಾಪನೆಗೊಂಡು ಶಿವಪಾರ್ವತಿ, ರಾಮಲಕ್ಷ್ಮಣರು ಬಂದಂತಹ ಜಾಗ ಆದಿಚುಂಚನಗಿರಿ, ಅಲ್ಲಿನ ೭೧ನೇ ಶ್ರೀಗಳು ಬಾಲಗಂಗಾಧರನಾಥ ಸ್ವಾಮಿಗಳು ಕೊಟ್ಯಾಂತರ ಭಕ್ತರನ್ನು ಸಂಪಾದನೆ ಮಾಡಿ ಜನರಿಗಾಗಿ ೪೭೦ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ೬೦೦ ಸಂಸ್ಥೆಗಳನ್ನು ಹೊಂದಿರುವ ಸಂಸ್ಥಾನ, ಜಗತ್ತಿಗೆ ಒಂದು ಕೊಡುಗೆಯಾಗಿದೆ, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನಾದರು ಸಾಧಿಸಬಹುದು ಎಂಬುವುದನ್ನು ಶ್ರೀಗಳು ಮಾಡಿತೊರಿಸಿದ್ದಾರೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ೧೦ನೇ ವರ್ಷದ ಬಾಲ ಗಂಗಾಧರನಾಥ ಸ್ವಾಮಿಗಳ ಆರಾಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಾವು ಆರಾಧನ ಮಹೋತ್ಸವವನ್ನು ಮಾಡುವ ಉದ್ದೇಶ ಬದುಕಿರುವ ವ್ಯಕ್ತಿ ಅವರ ಕಾಲದಲ್ಲಿ ಮಾಡಿದ ಸಾಧನೆ ಅವರ ಕಾಲದ ನಂತರವೂ ಶಾಶ್ವತವಾಗಿ ಉಳಿದಿದ್ದರೆ ಅಂತವರು ಇನ್ನೂ ಸಮಾಜದಲ್ಲಿ ಬದುಕಿದ್ದಾರೆ ಎಂದು ಅರ್ಥ, ನಮ್ಮ ಸಮಾಜಕ್ಕೆ ಗುರುವಿನ ಅವಶ್ಯಕತೆ ಇದೆ, ನಾವು ಆದಿವಾಸಿಗಳು, ಅನಾಗರೀಕತೆಯಿಂದ ಬಂದವರು ನಾವು, ನಮಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ವಿಚಾರಗಳನ್ನು ಹೇಳುವಂತವರು ಗುರುಗಳು, ಇಂದು ಬಾಲಗಂಗಾಧರ ನಾಥ ಸ್ವಾಮಿಗಳು ಯಾವುದೇ ಬೆಂಬಲವಿಲ್ಲದೆ ಒಂಟಿಯಾಗಿ ಜೊಳಿಗೆ ಹಿಡಿದು, ಬಸವಣ್ಣ ನವರ ನುಡಿಯಂತೆ ಕಾಯಕವೇ ಕೈಲಾಸವೆಂದು ಕಾಲ್ನಡಿಗೆಯಲ್ಲಿ ಸಾಧನೆಯನ್ನು ಮಾಡಿದವರು ನಮ್ಮ ಶ್ರೀಗಳು ಎಂದರು.
ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಟಿ.ಜಯದೇವ ರವರು ಮಾತನಾಡಿ ಪೂಜ್ಯ ಸ್ವಾಮೀಜಿಯವರು ಚಿಕ್ಕಮಗಳೂರಿನ ಹೌಸಿಂಗ್ ಬೊರ್ಡ್ನಲ್ಲಿ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯ ಸಂಸ್ಥೆಯನ್ನು ಸ್ಥಾಪಿಸಿ ಜಿಲ್ಲೆಯ ಅಭಿವೃದ್ಧಿಗೆ ಮೂಲ ಕಾರಣ ಕರ್ತರಾಗಿದ್ದು, ಚಿಕ್ಕಮಗಳೂರಿನ ನಾವೆಲ್ಲರು ಚಿರಋಣಿಗಳು, ಎಐಟಿ ಸರ್ಕಲ್ ರಸ್ತೆ ಜೋಡಿ ರಸ್ತೆಯಾಗಿದ್ದು ಈ ರಸ್ತೆಗೆ ಬಾಲ ಗಂಗಾಧರನಾಥ ಸ್ವಾಮಿ ರಸ್ತೆ ಎಂದು ಹೆಸರಿಡುವಂತೆ ಸಂಬಂದಪಟ್ಟ ಅಧಿಕಾರಿಗಳಲ್ಲಿ ಪ್ರೀತಿಯ ಒತ್ತಾಯವನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎನ್.ಲಕ್ಷ್ಮಣ್ಗೌಡ, ಕಾಲೇಜಿನ ಆಡಳಿದ ಮಂಡಳಿ ಸಿ.ಕೆ.ಮೋಹನ್, ಸಿಇಓ ಕುಳ್ಳೇಗೌಡ, ಮ್ಯಾನೇಜರ್ ರಾಜು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Live for society and not for selfishness