ಚಿಕ್ಕಮಗಳೂರು: ಜನ ನಮಗೆ ಅಧಿಕಾರ ಕೊಟ್ಟಿಲ್ಲ ಜವಾಬ್ದಾರಿ ಕೊಟ್ಟಿದ್ದಾರೆ ಎಂಬುದನ್ನು ಅರಿತು ನೂತನ ಶಾಸಕರು ಕೆಲಸ ಮಾಡಬೇಕೆಂದು ಮಾಜಿ ಸಂಸದ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಬಿ.ಎನ್ ಚಂದ್ರಪ್ಪ ಸಲಹೆ ನೀಡಿದರು.
ಅವರು ಇಂದು ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ನೂತನ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರ ಪರಿಶ್ರಮದಿಂದ ಇಂದು ಸಂಭ್ರಮದ ಸುದಿನವಾಗಿದೆ ಆದರೆ ಜವಾಬ್ದಾರಿಯು ಹೆಚ್ಚಾಗಿದೆ ಎಂಬುದನ್ನು ಅರಿಯಬೇಕು ಜಿಲ್ಲೆಯ ೫ ಶಾಸಕರ ಮೇಲೆ ಜವಾಬ್ದಾರಿ ಹೆಚ್ಚಿದೆ ಬಿಜೆಪಿ ದುರಾಡಳಿತದ ಫಲವಾಗಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯ ಸಾಧಿಸಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಇದನ್ನು ಅಧಿಕಾರ ಎಂದು ಭಾವಿಸಬಾರದು ಎಂದು ಎಚ್ಚರಿಸಿದರು.
ಬಿಜೆಪಿ ಐದು ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಜನರ ಆಸೆಗೆ ಮಣ್ಣೆರಚಿ ದುರಾಡಳಿತ ನಡೆಸಿದ್ದು ಬೆಣ್ಣೆಯಂತೆ ಮಾತನಾಡಿ ಉಣ್ಣೆಯಂತೆ ರಕ್ತ ಹೀರಿ ಬಣ್ಣ ಬಣ್ಣದ ಮಾತನಾಡುವ ಅಣ್ಣಯ್ಯನಿಗೆ ಮುಕ್ಕಣ್ಣ ಒಲಿಯುವುದಿಲ್ಲ ನೋಡಾ ಎಂಬ ಬಸವಣ್ಣನ ನುಡಿಯಂತೆ ಬಿಜೆಪಿಗೆ ಆಗಿದೆ ಎಂದರು.
ಗರ್ವಕಾಲ ಮುಗಿದು ಸರ್ವರ ಕಾಲ ಬಂದಾಗಿದೆ ಇದರ ಸದುಪಯೋಗ ಜನರಿಗೆ ತಲುಪಿಸುವಲ್ಲಿ ನೂತನ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಡಾ|| ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚಿಸಿ ಹೇಳಿದ್ದರು ಇದು ಒಳ್ಳೆಯವರ ಜೊತೆ ಅನುಷ್ಠಾನ ಮಾಡುವವರ ಮುಂದೆ ಇದ್ದರೆ ಮಾತ್ರ ಒಳ್ಳೆಯದಾಗುತ್ತೆ ಎಂದು ಆದರೆ ಬಿಜೆಪಿಯವರ ಕೈಯಲ್ಲಿ ಸಿಲುಕಿ ವಿಲಿವಲಿ ಒದ್ದಾಡಿತು ಎಂದು ಆರೋಪಿಸಿದರು.
ಈಗ ಕಾಂಗ್ರೆಸ್ ಪಕ್ಷದ ಕೈಗೆ ಬಂದಿದೆ ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ಇದೆ ಸಮಾನತೆ ಇರದಿದ್ದರೆ ಸಂವಿಧಾನವಿಲ್ಲ ಜಾತಿ ಜಾತಿ ಮಧ್ಯೆ ವಿಷ ಬೀಜ ಬಿತ್ತಿ ಭಾವನೆಗಳ ಜೊತೆ ಚಲ್ಲಾಟವಾಡಿದ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ಗೆ ೧೩೫ ಸ್ಥಾನ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇಲೆ ಜನರ ಕೆಲಸ ಮಾಡಬೇಕೆಂದರು.
ಶಾಸಕತ್ವದ ಅಹಂ ಬರಬಾರದು ಮತದಾರರು, ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ ಎಂಬ ಭಾವನೆಯಿಂದ ಕಾರ್ಯಕರ್ತರನ್ನು ದೇವರಂತೆ ಕಾಣಬೇಕೆಂದು ಸಲಹೆ ಮಾಡಿದರು. ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಬಹಳ ವರ್ಷಗಳ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ನಗೆ ಬೀರಿರುವುದು ಸಂತೋಷ ತಂದಿದೆ ನಮಗೆ ಆ ಭಾಗ್ಯ ಸಿಗದಿದ್ದರು ನಿಮಗೆ ಸಿಕ್ಕಿರುವುದಕ್ಕೆ ಸಂತೋಷ ಪಡುತ್ತೇನೆ ಎಂದು ತಿಳಿಸಿದರು.
ಪಕ್ಷದಲ್ಲಿ ಅವಕಾಶ ಎನ್ನುವುದು ಒಂದು ಋಣ ಇದ್ದ ಹಾಗೆ ಕೆಲವೇ ಮಂದಿಗೆ ಈ ಅವಕಾಶ ಸಿಗುತ್ತೆ ಅದನ್ನು ನಮಗೆ ಪಕ್ಷ ಕೊಟ್ಟ ಋಣ ಎಂದು ಭಾವಿಸಬೇಕು ಜಿಲ್ಲಾ ಕಾಂಗ್ರೆಸ್ ಪಕ್ಷ ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸಿದಾಗ ಈ ಋಣ ತೀರಿಸಿದಂತಾಗುತ್ತದೆ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಹೊಣೆಗಾರಿಕೆ ಹೆಚ್ಚಿಸಿಕೊಂಡು ಕೆಲಸ ಮಾಡಬೇಕೆಂದು ನೂತನ ಶಾಸಕರಿಗೆ ಕಿವಿ ಮಾತು ಹೇಳಿದರು.
ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ ನನ್ನ ಗೆಲುವು ಕಾರ್ಯಕರ್ತರ ಗೆಲುವು. ಗೆದ್ದ ಬಳಿಕ ಜನರನ್ನು, ಕಾರ್ಯಕರ್ತರನ್ನು ಗುರ್ತಿಸಿದಾಗ ಮಾತ್ರ ಪಕ್ಷ ಗಟ್ಟಿಗೊಳಿಸಲು ಸಹಕಾರಿಯಾಯಿತು. ಸೋತಾಗ ಎಲ್ಲರು ಸ್ಪಂದಿಸಿ ಕೆಲಸ ಮಾಡಿದ ಪರಿಣಾಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಜೊತೆಗೆ ಗೆಲುವಿಗೆ ಕಾರಣವಾಯಿತೆಂದು ಹೇಳಿದರು.
ತರೀಕೆರೆ ಶಾಸಕ ಜಿ.ಹೆಚ್ ಶ್ರೀನಿವಾಸ್ ಮಾತನಾಡಿ ಆಧಿಕಾರ ಎಂದು ಭಾವಿಸದೆ ಕರ್ತವ್ಯ ಎಂದುಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಅದು ಸಹಕಾರಕ್ಕೆ ಬರುತ್ತದೆ. ನನ್ನ ಕ್ಷೇತ್ರದಲ್ಲಿ ಜೆಡಿಎಸ್, ಸಿಪಿಐ ಮುಖಂಡರು ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಯಿತು ಅವರೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಶಾಸಕ ಕೆ.ಎಸ್ ಆನಂದ್ ಮಾತನಾಡಿ ಜಿಲ್ಲೆಯ ೫ ಕ್ಷೇತ್ರಗಳಲ್ಲಿಯೂ ಈ ಚುನಾವಣೆ ಬಹಳಷ್ಟು ಸವಾಲು ಎದುರಿಸಬೇಕಾದ ಅನಿವಾರ್ಯತೆ ಇತ್ತು ಕಳೆದ ೫ ವರ್ಷಗಳ ಕಾಲ ಎಲ್ಲಾ ಬ್ಲಾಕ್ ಕಾಂಗ್ರೆಸ್ನಿಂದ ಕೆ.ಪಿ.ಸಿ.ಸಿ, ಡಿ.ಸಿ.ಸಿ ಹೋರಾಟದ ಫಲವಾಗಿ ಈ ಅಭೂತಪೂರ್ವ ಗೆಲುವು ಸಾಧ್ಯವಾಯಿತು ಎಂದು ಹೇಳಿದರು.
ಸಂಘಟಿತ ಹೋರಾಟದಿಂದ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಒಗ್ಗಟ್ಟಿನಿಂದ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ ಗೆಲುವಿಗೆ ಸಹಕಾರ ಆಯಿತೆಂದು ಹೇಳಿದ ಅವರು ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಹಿರಿಯರ ಸಲಹೆ ಸಹಕಾರ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆಂದು ಭರವಸೆ ನೀಡಿದರು.
ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ತವರೂರಾಗಬೇಕೆಂದು ನಾನು ಕಾಂಗ್ರೆಸ್ ಪಕ್ಷ ಸೇರಿ ಶಾಸಕನಾಗಿರುವುದು ಸಂತಸ ತಂದಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಅಧಿಕಾರವಿಲ್ಲದೆ ೨೦ ವರ್ಷಗಳಾಗಿದ್ದ ಈ ಸಂದರ್ಭದಲ್ಲಿ ಬಂಗಾರದಂತೆ ಕಾರ್ಯಕರ್ತರು ಇದ್ದು ಹಗಲು ಇರುಳು ಎನ್ನದೆ ಕೆಲಸ ಮಾಡಿದರು ಜೊತೆಗೆ ೮ ಜನ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಪ್ರಚಾರ ಮಾಡಿದರು ಯೋಗ್ಯತೆ ಇದ್ದರು ಯೋಗಬೇಕು ಅದರಂತೆ ಗೆಲ್ಲಿಸಿದ್ದಾರೆ ಎಂದರು.
ರಂಜಾನ್ ಹಬ್ಬದ ಸಂದರ್ಭದಲ್ಲಿ ಉಪವಾಸ ಮಾಡಿದ ಮುಸ್ಲಿಂ ಸಮುದಾಯದವರು ಕ್ಷೇತ್ರದಲ್ಲಿ ತಮ್ಮಯ್ಯ, ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂದು ಮಸೀದಿಯಲ್ಲಿ ಪ್ರಾರ್ಥನೆ ಮಾಡಿದರು ಅವರೆಲ್ಲರಿಗೂ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಬಿ.ಎಲ್ ಶಂಕರ್, ಗಾಯಿತ್ರಿಶಾಂತೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂದು ಕಾರ್ಯಕರ್ತರ ಕನಸಿದೆ ಅದಕ್ಕೆ ಪೂರಕವಾಗಿ ಸ್ಪಂದಿಸಿದರೆ ಕಾಂಗ್ರೆಸ್ ಭವನ ಕಟ್ಟಿ ಉದ್ಘಾಟನೆ ಮಾಡೇ ಮಾಡುತ್ತೇನೆಂದು ಭರವಸೆ ನೀಡಿದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಬಿ.ಎಲ್ ಶಂಕರ್, ಮಾಜಿ ಎಂಎಲ್ಸಿ ಗಾಯಿತ್ರಿ ಶಾಂತೇಗೌಡ, ನೂತನ ಶಾಸಕಿ ನಯನಮೋಟಮ್ಮ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಸ್ವಾಗತಿಸಿದರು.ವೇದಿಕೆಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಗಪೂರ್, ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್, ಮೋಟಮ್ಮ, ಡಾ|| ಡಿ.ಎಲ್ ವಿಜಯ್ಕುಮಾರ್ ಎಂ.ಎಲ್ ಮೂರ್ತಿ, ಸಚಿನ್ ಮೀಗಾ, ರೇಖಾ ಹುಲಿಯಪ್ಪಗೌಡ, ಎ.ಎನ್ ಮಹೇಶ್, ಬಿ.ಹೆಚ್ ಹರೀಶ್, ಪ್ರಭಾಕರ್, ಎಂ.ಸಿ ಶಿವಾನಂದಸ್ವಾಮಿ. ಕೆ.ಮಹಮದ್, ಎಸ್.ಎಲ್ ರಾಧಾಸುಂದರೇಶ್, ಗುರುಶಾಂತಪ್ಪ, ರೂಬಿನ್ ಮೊಸಸ್, ರವೀಶ್ ಬಸಪ್ಪ ಮತ್ತಿತರಿದ್ದರು
People have not given authority, they have given responsibility