ಚಿಕ್ಕಮಗಳೂರು: ವೀರಶೈವ ಸಮಾಜಕ್ಕೆ ರಾಜ್ಯಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ನ್ಯಾಯಸಮ್ಮತವಾಗಿ ಒದಗಿಸಿಕೊಡುವ ಮೂಲಕ ಜನಾಂಗದ ಶ್ರೇಯೋಭಿವೃಧ್ದಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಎಐಟಿ ಕಾಲೇಜು ಹಿಂಭಾಗ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಸಮುದಾಯ ಭವನ ದಲ್ಲಿ ಭಾನುವಾರ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಜನಾಂಗದ ಯಾವುದೇ ಕೆಲಸಗಳಿಗೆ ಹಿರಿಯರ ಮಾರ್ಗದರ್ಶನದಲ್ಲಿ ಮೊದಲ ಹೆಜ್ಜೆ ತಮ್ಮದಾಗಿರುತ್ತದೆ ಎಂದು ಭರವಸೆ ನೀಡಿದರು.
ಈ ಹಿಂದೆ ರಾಜ್ಯದಲ್ಲಿ ಬೇರೆ ಬೇರೆ ಪಕ್ಷದ ಸರ್ಕಾರಗಳಿದ್ದರೂ ಸಹ ಜನಾಂಗದ ಅಭಿವೃಧ್ದಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಗೊಂಡಿದ್ದು ಮುಂದಿನ ದಿನಗಳಲ್ಲಿ ಜನಾಂಗದ ಅಭಿವೃದ್ದಿ ಹೆಚ್ಚು ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಕಲ್ಯಾಣ ಮಂಟಪದ ಕನಸನ್ನು ಸಾಕಾರಗೊಳಿಸಲು ಮುಂದಾಗಲಾಗುವುದು ಎಂದರು.
ಕೇವಲ ಸೊನ್ನೆಯಿಂದ ಬಂದಂತಹ ವ್ಯಕ್ತಿಗೆ ಜನಾಂಗದ ಬೆಂಬಲ ಹಾಗೂ ಕ್ಷೇತ್ರದ ಮತದಾರರ ಮೊದಲ ಆರ್ಶೀವಾದಿಂದ ಶಾಸಕನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಇದರ ನಡುವೆ ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ಸರ್ವರನ್ನು ಒಗ್ಗಟ್ಟಿನೊಂದಿಗೆ ಕರೆದೊಯ್ಯಲಾಗುವುದು. ವಿಶೇಷವಾಗಿ ವೀರಶೈವ ಜನಾಂಗಕ್ಕೆ ಒಂದುಪಾಲು ಪ್ರೀತಿ ತಮ್ಮಲ್ಲಿ ಹೆಚ್ಚಿದೆ ಎಂದು ತಿಳಿಸಿದರು.
ಜನಾಂಗದ ಎಲ್ಲಾ ಮುಖಂಡರುಗಳ ಸಹಭಾಗಿತ್ವದಲ್ಲಿ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸ ಸಲಾಗುವುದು. ಸ್ಥಳೀಯ ಮಟ್ಟದಿಂದ ಮುಖಂಡರುಗಳು ಹನಿ ಹನಿ ಹಣ ಸಂಗ್ರಹಿಸುವ ಮೂಲಕ ಸಮುದಾಯ ಭವನದ ಕಾಮಗಾರಿ ಸಹಕರಿಸಬೇಕು. ತದನಂತರ ರಾಜ್ಯಸರ್ಕಾರದಿಂದ ದೊರೆಯುವ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳ ಕಾಲ ಅಧಿಕಾರದಲ್ಲಿದ್ದಂತಹ ವ್ಯಕ್ತಿಯನ್ನು ಎಲ್ಲಾ ಜನಾಂಗದ ಸಹಕಾರದಿಂದ ಪರಾಭವಗೊಳಿಸಿ ತಾವು ಶಾಸಕನಾಗಿ ಆಯ್ಕೆಯಾಗಿರುವುದು ಖುಷಿಯ ತಂದಿದೆ. ಇದರೊಂದಿಗೆ ಜನಾಂಗವು ಯಾವುದೇ ವಿಷಯಗಳಿಗೆ ಮಂತ್ರಿಗಳನ್ನು ಭೇಟಿ ಮಾಡುವ ಸಂಬಂಧ ಯಾವುದೇ ಅನುಮತಿ ಪತ್ರವನ್ನು ಸಲ್ಲಿಸದೇ ನೇರವಾಗಿ ಭೇಟಿ ಮಾಡಿಸುವ ಮೂಲಕ ಸಮುದಾಯಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊ ಡಲಾಗುವುದು ಎಂದರು.
ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಎ.ಶಿವಶಂಕರ್ ಮಾತನಾಡಿ ಬಹಳ ವರ್ಷಗಳ ಹಿಂದೆಯೇ ಕ್ಷೇತ್ರದಲ್ಲಿ ವೀರಶೈವ ಸಮಾಜದಿಂದ ಜನಪ್ರತಿನಿಧಿಯಾಗಬೇಕಿತ್ತು. ಆದರೆ ಹಲವಾರು ಕಾರಣ ಗಳಿಂದ ಸ್ಥಗಿತಗೊಂಡಿದ್ದು ಇದೀಗ ಹೆಚ್.ಡಿ.ತಮ್ಮಯ್ಯನವರ ಮೂಲಕ ಶಾಸಕರಾಗಿರುವುದು ಜನಾಂಗಕ್ಕೆ ಆನೆಬಲ ಬಂದಂ ತಾಗಿದೆ ಎಂದು ತಿಳಿಸಿದರು.
ಜನಾಂಗದ ಮುಖಂಡರುಗಳು ಸಂಘದ ಕಲ್ಯಾಣ ಮಂಟಪಕ್ಕೆ ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವಯಂ ಪ್ರೇರಿತರಾಗಿ ಧನಸಹಾಯ ಮಾಡಿ ಸಮುದಾಯವನ್ನು ಮುನ್ನಡೆಸುವಲ್ಲಿ ಶ್ರಮವಹಿಸಿದ್ದಾರೆ. ಅದೇ ರೀತಿಯಲ್ಲಿ ವೀರಶೈವ ಸಮಾಜದ ಋಣ ತೀರಿಸಲು ತಮ್ಮಯ್ಯನವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಕಟ್ಟಡದ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಕ್ಷೇತ್ರದ ಶಾಸಕರಿಗೆ ವೀರಶೈವರು, ಕುರುಬರು, ಮುಸ್ಲೀಂ, ದಲಿತರು ಸೇರಿದಂತೆ ಎಲ್ಲಾ ಪಂಗಡದವರು ಒಗ್ಗಟ್ಟಿನಿಂದ ಆಶೀರ್ವದಿಸಿ ಆಯ್ಕೆಗೊಳಿಸಿ ದ್ದಾರೆ, ಆಡಳಿತರೂಢ ಕೆಲಸದಲ್ಲಿ ಯಾವುದೇ ಕಪ್ಪುಚುಕ್ಕೆ ಬರದಂತೆ ನಿಗಾವಹಿಸಿ ಸುಲಲಿತ ಆಡಳಿತ ನೀಡುವ ಮೂಲಕ ಮತ್ತೊಮ್ಮೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಬೇಕು ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಹೆಚ್.ಎನ್.ನಂಜೇಗೌಡ, ಹೆಚ್.ಎಂ.ರೇಣುಕಾರಾಧ್ಯ, ಎಂ.ಎಸ್.ನಿರಂಜನ್, ಕಾರ್ಯದರ್ಶಿಗಳಾದ ಸಿ.ಬಿ.ನಂದೀಶ್, ಡಿ.ಎಸ್.ಮಮತ, ಖಜಾಂಚಿ ಎಸ್.ದೇವರಾಜ್, ನಿರ್ದೇಶಕರುಗಳಾದ ಎ.ಎಸ್.ದಿವಾಕರ್, ಭಾರತಿ ಶಿವರುದ್ರಪ್ಪ, ಯು.ಎಂ.ಬಸವರಾಜು, ಸಿ.ಕೆ.ಪ್ರಸಾದ್ ಸಿರಿಮನೆ, ಬಿ.ಪಿ.ಜಗದೀಶ್, ಎನ್.ಸಿ.ಶಿವಕುಮಾರ್, ಹೆಚ್.ಎಂ.ಚಂದ್ರಶೇಖರ್, ಜಿ.ಕೆ.ನಂಜೇಗೌಡ, ಮುರುಗೇಂದ್ರಸ್ವಾಮಿ, ಎಂ.ಎನ್.ಯೋಗಿಶ್ ಮತ್ತಿತರರು ಉಪಸ್ಥಿತರಿದ್ದರು.
A sincere effort to provide facilities to Veerashaiva society