ಚಿಕ್ಕಮಗಳೂರು: ನಗರದ ರಾಜ್ಯ ರಸ್ತೆ ಸಾರಿಗೆ ನಿಗಮದ ಗ್ರಾಮೀಣ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಬಸ್ ನಿಲ್ದಾಣದಿಂದ ಪಕ್ಕದ ಬಸ್ ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಿಸಿ ಎಲಿವೇಟರ್ ಮುಖಾಂತರ ಪ್ರಯಾಣಿಕರು ಸುಲಭವಾಗಿ ತೆರಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತರ ವೇತನ ಹೆಚ್ಚಿಸುವಂತೆ ಸದನದಲ್ಲಿ ತಾವು ಮತ್ತು ವಿಧಾನಪರಿಷತ್ತಿನಲ್ಲಿ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರು ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ರಾಜ್ಯ ಸರ್ಕಾರ ಚುನಾವಣೆಗೆ ಮುನ್ನ ಐದು ಗ್ಯಾರಂಟಿಗಳನ್ನು ನೀಡಿತ್ತು, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆ, ಗೃಹಜೋತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಎರಡು ಯೋಜನೆಗಳನ್ನು ಕಾರ್ಯಕರ್ತಗೊಳಿಸಲಾಗುತ್ತದೆ ಎಂದರು.
ಶಕ್ತಿ ಯೋಜನೆಯಡಿ ಎಲ್ಲಾ ವರ್ಗದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದಾಗಿದ್ದು, ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೈಗೊಂಡಿರುವ ಇಂತಹ ದಿಟ್ಟ ನಿರ್ಧಾರವನ್ನು ಮೆಚ್ಚಲೇಬೇಕು ಎಂದರು. ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯನ್ನು ಶಾಸಕರು ಮಾಡಬೇಕು ಎಂದು ಸಲಹೆ ಮಾಡಿದರು. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ ಮಹಿಳಾ ಸಬಲೀಕರಣದ ಮೊದಲ ಹೆಜ್ಜೆ ಶಕ್ತಿ ಯೋಜನೆಯಾಗಿದೆ ಎಂದರು ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದ ಅವರು ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ಗಳನ್ನು ಮಹಿಳೆಯರಿಗೆ ಆದಷ್ಟು ಶೀಘ್ರವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ ಮಾತನಾಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
ಗುರುತಿನ ಚೀಟಿ ಕಡ್ಡಾಯ: ಉಚಿತ ಪ್ರಯಾಣಕ್ಕೆ ಹೊರಟ ಮಹಿಳೆಯರು ಕಡ್ಡಾಯವಾಗಿ ಯಾವುದಾದರೊಂದು ಮನೆ ವಿಳಾಸ / ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು ಇಲ್ಲವಾದರೆ. ಟಿಕೆಟ್ ಶುಲ್ಕ ಪಾವತಿಸಬೇಕಾಗುತ್ತದೆ. ವೋಟರ್ ಐಡಿ, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ರೇಷನ್ ಕಾರ್ಡ್ ಸೇರಿದಂತೆ ಸರ್ಕಾರದಿಂದ ನೀಡಲಾಗುವ ಇತರೆ ಗುರುತಿನ ಚೀಟಿಗಳಲ್ಲಿ ಒಂದನ್ನು ಪ್ರಯಾಣ ಸಂದರ್ಭದಲ್ಲಿ ಹೊಂದಿರಬೇಕು.
ಈ ಯೋಜನೆಯಡಿಯಲ್ಲಿ ಪ್ರಯಾಣಿಸುವ ಮಹಿಳೆಯರು ಐಷರಾಮಿ ಬಸ್ ಹತ್ತುವಂತಿಲ್ಲ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗಧೂತ ಬಸ್ಗಳಲ್ಲಿ ಮಾತ್ರ ಸಂಚರಿಸಬಹುದು. ಐಷರಾಮಿ ಬಸ್ಗಳಾದ ರಾಜಹಂಸ, ಎಸಿ ಬಸ್, ಸ್ಲೀಪರ್, ವಾಯುವಜ್ರ, ಐರಾವತ, ಅಂಬಾರಿ ಡ್ರಿಮ್ ಕ್ಲಾಸ್, ವೋಲ್ವ ಮಾದರಿ ಬಸ್ಗಳಲ್ಲಿ ಈ ಯೋಜನೆಯ ಸೌಲಭ್ಯ ಲಭ್ಯವಾಗುವುದಿಲ್ಲ.
೩ ತಿಂಗಳೊಳಗೆ ಪಡೆಯಿರಿ ಶಕ್ತಿ ಸ್ಮಾರ್ಟ್ ಕಾರ್ಡ್: ಉಚಿತ ಪ್ರಯಾಣ ಸೌಲಭ್ಯ ಇದೆ ಎಂದು ಕೇವಲ ಗುರುತಿನ ಚೀಟಿ ತೋರಿಸಿ ಕೊಂಡು ಪ್ರಯಾಣ ಮಾಡುವಂತಿಲ್ಲ. ಮುಂದಿನ ಮೂರು ತಿಂಗಳಲ್ಲಿ ಸಾರಿಗೆ ಸಂಸ್ಥೆಗಳಿಂದ ನೀಡುವ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. ಶಕ್ತಿ ಸ್ಮಾರ್ಟ್ ಕಾರ್ಡ್ಗೆ ಸೇವಾ ಸಿಂಧು ಪೋರ್ಟಲ್ನಲ್ಲಿ ಜೂ. ೧೫ ರಿಂದ ಅವಕಾಶ ನೀಡಲಾಗಿದೆ. ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಇದ್ದರೂ ಶೂನ್ಯ ಶುಲ್ಕ ನಮೂದಿಸಿದ ಬಸ್ ಟಿಕೆಟ್ ನೀಡಲಾಗುತ್ತದೆ. ಬಸ್ ಹತ್ತಿದ ಪ್ರತಿಯೊಬ್ಬ ಮಹಿಳೆಯರು ಈ ಟಿಕೆಟ್ ಹೊಂದಿರಬೇಕು, ಇಲ್ಲವಾದರೆ ತಪಾಸಣೆ ವೇಳೆಯಲ್ಲಿ ದಂಡ ಕಟ್ಟಬೇಕಾಗುತ್ತದೆ.
Construction of hi-tech rural bus station