ಚಿಕ್ಕಮಗಳೂರು: ರಾಜ್ಯ ಸರ್ಕಾರ ಭಾನುವಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಮೊದಲ ದಿನ ಚಿಕ್ಕಮಗಳೂರು ವಿಭಾಗದಲ್ಲಿ ೧೦,೪೯೮ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರು ವಿಭಾಗಕ್ಕೆ ಒಳಪಡುವ ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಅರಸಿಕೆರೆ, ಸಕಲೇಶಪುರ ಹಾಗೂ ಬೇಲೂರು ಡಿಪೋಗಳಿಂದ ಹೊರಡುವ ಕೆಎಸ್ಆರ್ಟಿಸಿ ಬಸ್ಗಳಲ್ಲಿ ೧೦,೪೯೮ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಭಾನುವಾರ ಮಧ್ಯಾಹ್ನ ೧ ಗಂಟೆಗೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾತ್ರಿ ೧೦ ಗಂಟೆಯವರೆಗೆ ಮಹಿಳೆಯರಿಗೆ ಉಚಿತವಾಗಿ ನೀಡಿರುವ ಟಿಕೆಟ್ಗಳ ಒಟ್ಟು ಮೊತ್ತ ೪,೦೭,೪೪೦ ರೂ. ಚಿಕ್ಕಮಗಳೂರು ವಿಭಾಗದಲ್ಲಿ ಒಂದು ದಿನಕ್ಕೆ ಪ್ರಯಾಣೀಕರಿಂದ ಸುಮಾರು ೬೦ ಲಕ್ಷ ರುಪಾಯಿ ಸಂಗ್ರಹವಾಗುತ್ತಿದ್ದು, ಇದರಲ್ಲಿ ಮಹಿಳೆಯರ ಪಾಲು ಶೇ. ೪೦ಕ್ಕಿಂತ ಹೆಚ್ಚಿರುತ್ತದೆ. ಈ ಹಣ ಖೋತವಾಗಲಿದೆ.
ಚಿಕ್ಕಮಗಳೂರು ವಿಭಾಗಕ್ಕೆ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳು ಹಾಸನ ಜಿಲ್ಲೆಯ ಅರಸೀಕೆರೆ, ಸಕಲೇಶಪುರ ಮತ್ತು ಬೇಲೂರು ತಾಲೂಕುಗಳ ಸೇರ್ಪಡೆಗೊಳ್ಳಲಿವೆ. ಇಷ್ಟು ತಾಲೂಕುಗಳಲ್ಲಿ ೨೦೭೦ ಗ್ರಾಮಗಳು ಬರುತ್ತಿದ್ದು, ೧೬೩೭ ಹಳ್ಳಿಗಳಲ್ಲಿ ಬಸ್ಸೌಲಭ್ಯವಿದೆ.ಉಳಿದ ೪೩೩ ಗ್ರಾಮಗಳು ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತವಾಗಿವೆ.೪೩೪ ಗ್ರಾಮಗಳು ಖಾಸಗಿ ಬಸ್, ಆಟೋಗಳು ಮತ್ತು ಜೀಪ್ಗಳನ್ನು ಅವಲಂಬಿಸಬೇಕಾಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ ೨೨೯ ಗ್ರಾಮಗಳಿದ್ದು, ೧೯೦ ಗ್ರಾಮಗಳಲ್ಲಿ ಸರ್ಕಾರಿ ಬಸ್ಸಂಪರ್ಕವಿದೆ ೩೯ ಹಳ್ಳಿಗಳಲ್ಲಿ ಬಸ್ ಸೌಲಭ್ಯವಿಲ್ಲ, ಕಡೂರು ತಾಲೂಕಿನ ೨೮೫ ಗ್ರಾಮಗಳಲ್ಲಿ ೨೪೪ಕ್ಕೆ ಬಸ್ ಸಂಚಾರವಿದ್ದರೆ, ೪೧ ಹಳ್ಳಿಗಳಲ್ಲಿ ಬಸ್ಸಂಪರ್ಕವಿಲ್ಲ, ತರೀಕೆರೆಯಲ್ಲಿ ೨೫೨ ಗ್ರಾಮಗಳಿದ್ದು ೭೬ಕ್ಕೆ ಬಸ್ಸಂಚಾರವಿದ್ದರೆ, ೧೭೬ ಹಳ್ಳಿಗಳಿಗೆ ಸರ್ಕಾರಿ ಬಸ್ಸೌಲಭ್ಯವಿಲ್ಲ, ಮೂಡಿಗೆರೆ ತಾಲೂಕಿನಲ್ಲಿ ೧೪೦ಗ್ರಾಮಗಳಿದ್ದು, ೯೮ ಹಳ್ಳಿಗೆ ಬಸ್ಸೌಲಭ್ಯವಿದ್ದರೆ,೪೨ ಹಳ್ಳಿಗಳಿಗೆ ಸರ್ಕಾರಿ ಬಸ್ ಓಡಾಡುತ್ತಿಲ್ಲ.
ಮಲೆನಾಡಿನ ಶೃಂಗೇರಿ ತಾಲೂಕಿನಲ್ಲಿ ೪೮ ಗ್ರಾಮಗಳಿವೆ. ಅವುಗಳಲ್ಲಿ ೧೪ ಗ್ರಾಮಗಳಲ್ಲಿ ಬಸ್ ಓಡಾಡುತ್ತಿದ್ದರೆ, ೩೪ ಹಳ್ಳಿಗಳಲ್ಲಿ ಬಸ್ಸೌಲಭ್ಯವೇ ಇಲ್ಲವಾಗಿದೆ.ಕೊಪ್ಪದಲ್ಲಿ ೮೦ ಗ್ರಾಮಗಳಿದ್ದು, ೨೮ಕ್ಕೆ ಬಸ್ಸೇವೆ ಇದ್ದರೆ ೫೨ ಹಳ್ಳಿಗಳಿಗೆ ಬಸ್ ಸಂಚಾರ ಇಲ್ಲವಾಗಿದೆ. ನರಸಿಂಹರಾಜಪುರದಲ್ಲಿ ೫೮ ಹಳ್ಳಿಗಳಿವೆ ಅದರಲ್ಲಿ ೧೦ ಗ್ರಾಮದಲ್ಲಿ ಬಸ್ ಓಡಾಡುತ್ತಿದ್ದರೆ, ೪೮ ಹಳ್ಳಿಗಳು ಬಸ್ಸೌಲಭ್ಯದಿಂದ ವಂಚಿತವಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳು ಅರಣ್ಯ, ಗುಡ್ಡಗಾಡು ತಿರುವಿನಿಂದ ಕೂಡಿದ ಚಿಕ್ಕ ರಸ್ತೆಗಳಾಗಿದ್ದರಿಂದ ರಾಜ್ಯರಸ್ತೆಸಾರಿಗೆ ನಿಗಮದಿಂದ ವಾಹನಗಳು ಕಾರ್ಯಚರಣೆಯಾಗದ ಸ್ಥಳಗಳಿಗೆ ಖಾಸಗಿ ಬಸ್ಗಳ ಬದಲು ಖಾಸಗಿ ಜೀಪ್ ಮತ್ತು ಆಟೋಗಳು ಸಂಚರಿಸುತ್ತಿವೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಒಟ್ಟು ೩೬೯ ಗ್ರಾಮಗಳನ್ನು ಹೊಂದಿದ್ದು, ೩೬೯ಕ್ಕೂ ಬಸ್ಸೌಲಭ್ಯವಿದೆ. ಯಾವುದೇ ಗ್ರಾಮಗಳು ಬಸ್ಸಂಚಾರದಿಂದ ವಂಚಿತವಾಗದಿರುವುದು ಸಂತೋಷದ ಸಂಗತಿ ಸಕಲೇಶಪುರ ತಾಲೂಕಿನಲ್ಲಿ ೨೨೭ ಗ್ರಾಮಗಳಲ್ಲಿ ೨೨೬ಕ್ಕೆ ಬಸ್ಸೌಲಭ್ಯವಿದೆ.
ಬಸ್ಸೌಲಭ್ಯವಿಲ್ಲದ ನತದೃಷ್ಟ ಗ್ರಾಮವೆಂದರೆ ಅತ್ತಿಗನಹಳ್ಳಿ ಈ ಊರು ಸಕಲೇಶಪುರ-ಹೆತ್ತೂರು ಮುಖ್ಯರಸ್ತೆಯಿಂದ ೩ ಕಿ.ಮೀ. ದೂರದಲ್ಲಿದೆ. ರಸ್ತೆ ಕಿರಿದಾದ ಹಾಗೂ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಇಲ್ಲದಿರುವುದು ಇಲ್ಲಿ ಹೆಚ್ಚಿನ ಜನಸಂಖ್ಯೆ ಇಲ್ಲ ಹಾಗಾಗಿ ಸಾರಿಗೆ ಸೌಲಭ್ಯವಿಲ್ಲ.
ಬೇಲೂರು ತಾಲೂಕಿನಲ್ಲಿ ೩೮೨ ಗ್ರಾಮಗಳಿವೆ ಈ ಗ್ರಾಮಕ್ಕೆಲ್ಲ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ
Free travel by 10498 women