ಚಿಕ್ಕಮಗಳೂರು: ನಗರ ಹೊರವಲಯ ಸಿರ್ಗಾಪುರದ ಶ್ರೀ ಗುರು ದತ್ತ ಚೈತನ್ಯ ಶೋಡಶಿ ಸೇವಾ ಆಶ್ರಮದಲ್ಲಿ ನೂತನ ಶಿಲಾ ದೇಗುಲ ನಿರ್ಮಾಣದ ಮತ್ತು ೩೨ ಹಸ್ತಗಳುಳ್ಳ ಹನ್ನೊಂದು ಅಡಿ ಎತ್ತರದ ಶ್ರೀ ಚಿಂತಾಮಣಿ ದುರ್ಗಾ ದೇವಿ ವಿಗ್ರಹದ ಪ್ರತಿಷ್ಠಾಪನಾ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಆರಂಭ ಗೊಂಡವು.
ಬೆಳಿಗ್ಗೆ ಆಶ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹಾಸಂಕಲ್ಪ, ದೇವತಾ ಪ್ರಾರ್ಥನೆ, ಸ್ಥಾನ ಶುದ್ಧಿ, ಗಣಪತಿ ಪೂe, ಮಹಾಗಣಪತಿ ಹೋಮ, ದೇವತಾ ಸಾನಿಧ್ಯ ಸ್ತಿರತೆಗಾಗಿ ಷಡಾದಾರ ಪ್ರತಿಷ್ಠೆ ಜರುಗಿತು. ದಾಸ ಸಾಹಿತ್ಯ ಪ್ರಾಜೆಕ್ಟ್ನ ಭಜನಾ ಮಂಡಳಿಗಳ ಮಹಿಳೆಯರಿಂದ ಕೋಟಿ ಅರ್ಚನೆಗೊಂಡ ಶ್ರೀ ಚಕ್ರ ಯಂತ್ರವನ್ನು ಭೂಗರ್ಭದಲ್ಲಿ ಪ್ರತಿಷ್ಠಾಪಿಸಲಾಯಿತು.
ಧಾರ್ಮಿಕ ವಿಧಿ ವಿಧಾನಗಳ ನಡುವೆ ಶಿಲಾ ದೇಗುಲದ ನಿರ್ಮಾಣ ಕಾರ್ಯವನ್ನು ಮತ್ತು ದೇವಿಯ ವಿಗ್ರಹವನ್ನು ಮುಂದಿನ ಆದಿವಾಸಾದಿ ಪೂಜೆಗಳಿಗಾಗಿ ವಿಗ್ರಹ ನಿರ್ಮಾಣ ಸಮಿತಿ ಅಧ್ಯಕ್ಷ ಡಿ.ಎಚ್.ನಟರಾಜ್ ದಂಪತಿ ತಂತ್ರಿಗಳಿಗೆ ಹಸ್ತಾಂತರಿಸಿದರು. ಈ ವೇಳೆ ದಾಸ ಸಾಹಿತ್ಯ ಪ್ರಾಜೆಕ್ಟ್ನ ಭಜನಾ ಮಂಡಳಿಯ ಮಹಿಳೆಯರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಭಜನೆ, ನಾಮ ಸಂಕೀರ್ತನೆ ನಡೆದವು. ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ಆಶ್ರಮದ ಅಧ್ಯಕ್ಷ ಅಶೋಕ್ ಶರ್ಮ ಗುರೂಜಿ, ವ್ಯವಸ್ಥಾಪಕ ಅಕ್ಷಯ್ ಶರ್ಮಾ ಅವರ ನೇತೃತ್ವದಲ್ಲಿ ಷಡಾದಾರ ಪ್ರತಿಷ್ಠೆಯ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಇದೇ ವೇಳೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ, ಮನುಷ್ಯನಿಗೆ ನಾನು ಎಂಬ ಭ್ರಮೆಯನ್ನು ಕಳೆದುಕೊಂಡಾಗ ಮಾತ್ರ. ಭಕ್ತಿಯ ಪರಾಕಾಷ್ಟೆ ಬರುತ್ತದೆ. ಎಲ್ಲಿಯವರೆಗೆ ನಮ್ಮಲ್ಲಿ ದೇವರ ಮುಂದೆ ನಾನು ಭಕ್ತ ಎಂಬ ತಿಳುವಳಿಕೆ, ಭಕ್ತಿ ಹುಟ್ಟುವುದಿಲ್ಲವೋ ಅಲ್ಲಿಯವರೆಗೂ ದೇವರು ನಮ್ಮಿಂದ ದೂರವಿರುತ್ತಾನೆ ಎಂದರು. ನಮ್ಮಲ್ಲಿ ಭಕ್ತಿ ಇಲ್ಲದಿದ್ದಲ್ಲಿ ದೇವರು ಬರೀ ಮೂರ್ತಿಯಾಗಿರುತ್ತಾನೆ. ನಮ್ಮಲ್ಲಿ ಭಕ್ತಿ ಇದ್ದರೆ ಮೂರ್ತಿ ಮಾತನಾಡುತ್ತದೆ. ದೇವರು ಮತ್ತು ನಮ್ಮ ನಡುವೆ ಭಾವ ಸಂವ ಹನವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಆಶ್ರಮದ ಅಧ್ಯಕ್ಷ ಅಶೋಕ್ ಶರ್ಮ ಗುರೂಜಿ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಆಶ್ರಮದಲ್ಲಿ ಶಿಲಾದೇಗುಲ ಮತ್ತು ಚಿಂತಾಮಣಿ ದುರ್ಗಾದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು. ದೇವಾಲಯ ಲೋಕಾರ್ಪಣಾ ಸಮಿತಿಯ ಅಧ್ಯಕ್ಷ ಡಿ.ಎಂ.ಶಂಕರ್ ಹಾಜರಿದ್ದರು. ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Installation of Sri Chintamani Durga Devi idol for public welfare