ಚಿಕ್ಕಮಗಳೂರು: ನಗರದ ಎಐಟಿ ಕಾಲೇಜು ವೃತ್ತದಲ್ಲಿರುವ ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಕ್ಷುಲ್ಲಕ ಕಾರಣಕ್ಕೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿಗಳು ಎಸ್ಎಸ್ಯುಐ, ಎಬಿವಿಪಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಕಾಲೇಜು ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಕಳೆದ ಸೋಮವಾರ ಸಹ್ಯಾದ್ರಿ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವ್ಯಾಸಂಗ ಮಾಡುತ್ತಿರುವ ಅಲ್ಲಂಪುರ ಗ್ರಾಮದ ಬಿಂದು ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಅಕ್ಕಪಕ್ಕ ತಿರುಗಿ ನೋಡಿದ್ದಾಳೆಂಬ ಕ್ಷುಲ್ಲಕ ಕಾರಣಕ್ಕೆ ಕಾಲೇಜಿನ ಮುಖ್ಯಸ್ಥೆಯೊಬ್ಬರು ವಿದ್ಯಾರ್ಥಿನಿಗೆ ನಿಂದಿಸಿದ್ದಲ್ಲದೇ ಹಲ್ಲೆಯನ್ನೂ ಮಾಡಿದ್ದರು. ಈ ವೇಳೆ ವಿದ್ಯಾರ್ಥಿನಿ ಮೈಗ್ರೇನ್ ತಲೆ ನೋವು ತಾಳಲಾರದೇ ಕುಸಿದು ಬಿದ್ದಿದ್ದಾಳೆ. ಇದನ್ನು ಕಂಡ ಕಾಲೇಜಿನ ಮುಖ್ಯಸ್ಥೆ ಹಾಗೂ ಸಿಬ್ಬಂದಿ ವಿದ್ಯಾರ್ಥಿನಿ ನಾಟಕ ಆಡುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಬೇರೆ ಕೊಠಡಿಗೆ ಎತ್ತೊಯ್ದು ಆಕೆಯ ಮೈಮೇಲೆ ಮೂರು ಬಕೆಟ್ ನೀರು ಹಾಕಿದ್ದಾರೆ. ಬಳಿಕ ಸಂಜೆ ವೇಳೆ ವಿದ್ಯಾರ್ಥಿನಿಗೆ ಬೇರೆ ವಿದ್ಯಾರ್ಥಿನಿಯ ಬಟ್ಟೆ ಹಾಕಿಸಿ, ಘಟನೆಯನ್ನೂ ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ ಕಾಲೇಜು ಮುಖ್ಯಸ್ಥರು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ವಿದ್ಯಾರ್ಥಿನಿ ತೀವ್ರವಾಗಿ ಅಸ್ಸಸ್ಥಗೊಂಡಿದ್ದನ್ನು ಕಂಡ ತಾಯಿ ಚಂದ್ರಕಲಾ ಮಗಳನ್ನು ವಿಚಾರಿಸಿದಾಗ ಆಕೆ ನಡೆದ ವಿಚಾರವನ್ನು ಹೇಳಿದ್ದಾಳೆ. ಕೂಡಲೇ ಮಗಳನ್ನು ನಗರದ ಜಿಲ್ಲಾಸ್ಪತ್ರೆ೩ಗೆ ದಾಖಲೊಸಿದ ತಾಯಿ ಚಂದ್ರಕಲಾ ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸದೇ ನಿರ್ಲಕ್ಷ್ಯಿಸಿದ್ದಾರೆ ಎಂದು ಚಂದ್ರಕಲಾ ಮಂಗಳವಾರ ಸುದ್ದಿಗಾರರರ ಬಳಿ ಅಳಲು ತೋಡಿಕೊಂಡಿದ್ದರು.
ಈ ಘಟನೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಪ್ಯಾರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎನ್ಎಸ್ಯುಐ, ಎಬಿವಿಪಿ ನೇತೃತ್ವದಲ್ಲಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ದಿಢೀರ್ ಧರಣಿ ನಡೆಸಿ, ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿ ಕಿರುಕುಳ ನೀಡಿದ ಕಾಲೇಜು ಮುಖ್ಯಸ್ಥರು ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೇ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಗೆ ಹಲ್ಲೆ ಮಾಡಿ, ಆಕೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಕೆಯ ಮೇಲೆ ಮೂರು ಬಕೆಟ್ ನೀರು ಸುರಿದು ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮವಹಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಒತ್ತಡಕ್ಕೆ ಮಣಿದು ದೂರು ದಾಖಲಿಸದೇ ನಿರ್ಲಕ್ಷ್ಯವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಧರಣಿಯಿಂದಾಗಿ ಕಾಲೇಜು ಆವರಣದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ವಿದ್ಯಾರ್ಥಿ ಮುಖಂಡರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜವಾಗಲಿಲ್ಲ.ವಿದ್ಯಾರ್ಥಿಗಳು ಸುಮಾರು ೧ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರೂ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳೊಂದಿಗೆ ಮಾತುಕತೆಗೆ ಬಾರದಿರುವುದು ಧರಣಿ ನಿರತ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗಲು ಕಾರಣವಾಯಿತು. ಈ ವೇಳೆ ಸ್ಥಳಕ್ಕಾಮಿಸಿದ ಡಿವೈಎಸ್ಪಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಘಟನೆ ಸಂಬಂಧ ವಿದ್ಯಾರ್ಥಿನಿಯರ ಹೇಳಿಕೆ ಪಡೆದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡಲಾಯಿತು.
ಧರಣಿಯಲ್ಲಿ ಎನ್ಎಸ್ಯುಐ ಜಿಲ್ಲಾಧ್ಯಕ್ಷ ಶ್ರೀಕಾಂತ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Students protest at Sahyadri Para Medical College