ಚಿಕ್ಕಮಗಳೂರು: ದಾನಶೀಲತೆಯಿಂದ ಸದೃಢ-ಸಮರ್ಥ-ನೆಮ್ಮದಿಯ ರಾಷ್ಟ್ರನಿರ್ಮಾಣ ಸಾಧ್ಯ ಎಂದು ಲೈಫ್ ಲೈನ್ ಫೀಡ್ಸ್ (ಇಂಡಿಯಾ)ಪ್ರೈ.ಲಿ. ಆಡಳಿತ ನಿರ್ದೇಶಕ ಕೆ.ಕಿಶೋರಕುಮಾರ್ ಹೆಗ್ಡೆ ನುಡಿದರು.
ಐಡಿಎಸ್ಜಿ ಸರ್ಕಾರಿ ಕಾಲೇಜಿಗೆ ಲೈಫ್ಲೈನ್ ಸಂಸ್ಥೆ ವತಿಯಿಂದ ೫೦ಲಕ್ಷರೂ.ಗಳ ಪೀಠೋಪಕರಣ ಕೊಡುಗೆ ವಿತರಣಾ ಸಮಾರಂಭದಲ್ಲಿಂದು ಅವರು ಮಾತನಾಡಿದರು.
ದಾನ ನೀಡುವಲ್ಲಿ-ಜನಸೇವೆಯಲ್ಲಿ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ವಿದ್ಯಾಭ್ಯಾಸದ ನಂತರ ದುಡಿಮೆಯ ಸಂದರ್ಭದಲ್ಲಿ ಲಾಭದ ಸ್ವಲ್ಪ ಭಾಗವನ್ನಾದರೂ ದೇಶಕ್ಕಾಗಿ ಕೊಡುವುದರ ಮೂಲಕ ದೇಶವನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯಕರ್ತವ್ಯ ಎಂದವರ ನುಡಿದರು.
ಯಾವುದೇ ದೇಶವಾದರೂ ಸರ್ಕಾರದಿಂದಲೇ ಎಲ್ಲ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡಲಾಗದು. ಸಮಾಜವೂ ಸಂಘ-ಸಂಸ್ಥೆಗಳು ಜೊತೆಗೆ ನಾಗರಿಕರೂ ಕೈಜೋಡಿಸಿದಾಗ ಆನೆಬಲ ಬರುತ್ತದೆ. ಚೆನ್ನಾಗಿ ದುಡಿಮೆ ಮಾಡಿ. ತೆರಿಗೆಯನ್ನು ಪಾವತಿಸಿ. ಲಾಭಾಂಶದಲ್ಲಿ ಶೇ.೭ರಿಂದ ೮ರಷ್ಟು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ ಹೆಗ್ಡೆ, ಕಿತ್ತು ತೆಗೆದುಕೊಳ್ಳುವ ಜನರನ್ನೊಳಗೊಂಡ ದೇಶ ಸುಸ್ಥಿರವಾಗಲು ಸಾಧ್ಯವಿಲ್ಲ ಎಂದರು.
ಈ ಮಣ್ಣು, ನೀರು, ಗಾಳಿ, ಸೇರಿದಂತೆ ನಿಸರ್ಗವನ್ನು ಬಳಸಿಕೊಂಡು ಬದುಕಿದ್ದೇವೆ. ಪ್ರಕೃತಿಗೆ ಬಹಳಷ್ಟು ಹಾನಿ ಮಾಡಿದ್ದೇವೆ. ನಾವು ಪಾವತಿಸುವ ತೆರಿಗೆ ಒಂದುರೀತಿಯಲ್ಲಿ ಇದಕ್ಕೆ ತೆರವು ದಂಡವೆಂದುಕೊಳ್ಳಬೇಕು. ಲಾಭದಲ್ಲಿ ನೀಡುವ ದಾನ ನಮ್ಮ ನಿಜವಾದ ಸಾಮಾಜಿಕಬದ್ಧತೆ. ನಿಯತ್ತಿನಿಂದ ತೆರಿಗೆ ಪಾವತಿಸುವ ಮನೋಭಾವ ರೂಢಿಸಿಕೊಳ್ಳಬೇಕೆಂದವರು ಕಿವಿಮಾತು ಹೇಳಿದರು.
ಈ ಕಾಲೇಜಿ ಮುಂಭಾಗದಲ್ಲಿ ಓಡಾಡುವಾಗ ಕಾಂಪೌಂಡ್ ಒಳಗಿಗಿಂತ ರಸ್ತೆಯಲ್ಲೇ ಹೆಚ್ಚು ವಿದ್ಯಾರ್ಥಿಗಳಿರುವುದನ್ನು ಗಮನಿಸಿದ್ದು, ಕೊಠಡಿ ಹಾಗೂ ಪೀಠೋಪಕರಣಗಳ ಕೊರತೆಯಿಂದ ಎರಡು ಪಾಳಿಯಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂತು. ಇಲ್ಲಿ ಬಂದು ನೋಡಿದಾಗ ಒಟ್ಟು ೩೮೦ ಡೆಸ್ಕ್ಗಳ ಅವಶ್ಯಕತೆ ಕಂಡುಬಂತು. ೩೦ಲಕ್ಷರೂ ಅಂದಾಜಿನಲ್ಲಿ ಡೆಸ್ಕ್ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಲಾಯಿತು. ಆ ನಂತರ ಮರದಲ್ಲೆ ಪೀಠೋಪಕರಣ ಗುಣಮಟ್ಟದೊಂದಿಗೆ ಸಿದ್ಧಪಡಿಸಿದಾಗ ೫೦ಲಕ್ಷರೂ. ವೆಚ್ಚವಾಯಿತು ಎಂದ ಕಿಶೋರಕುಮಾರ್ ಹೆಗ್ಡೆ, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರೆ ದಾನ ಸಾರ್ಥಕವೆನಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಉದ್ಯಮದ ಲಾಭಾಂಶದಲ್ಲಿ ಒಂದಷ್ಟು ಭಾಗವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ದೇಣಿಗೆ ನೀಡುವ ಮೂಲಕ ಲೈಫ್ಲೈನ್ ಸಂಸ್ಥೆ ಆದರ್ಶಪ್ರಾಯವಾಗಿದೆ. ಸಂಸ್ಕಾರವಂತ ಕುಟುಂಬದಿಂದ ಬಂದ ಕಿಶೋರ್, ತಮ್ಮ ಮಕ್ಕಳಿಗೂ ಸೇವೆಯನ್ನು ಪರಿಚಯಿಸುತ್ತಿರುವುದು ಮಾದರಿ ಎಂದರು.
ಹಣ, ಅಧಿಕಾರ ಯಾರಿಗೂ ಶಾಶ್ವತವಲ್ಲ. ಒಳ್ಳೆತನ ಉಳಿಯುತ್ತದೆ. ಮತ ಕೊಟ್ಟವರಿಗಷ್ಟೇ ಅಲ್ಲ ಕ್ಷೇತ್ರದ ೨.೧೯ಲಕ್ಷ ಜನರಿಗೂ ಶಾಸಕ ಎಂಬ ಅರಿವು ತಮಗಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ಕನಸು ಪ್ರಯತ್ನ ತಮ್ಮದು ಎಂದ ಶಾಸಕ ತಮ್ಮಯ್ಯ, ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಿ ಗೌರವಯುತ ಬದುಕು ನಡೆಸಿ ಊರು-ಶಿಕ್ಷಣಸಂಸ್ಥೆ-ಕುಟುಂಬಕ್ಕೆ ಒಳ್ಳೆ ಹೆಸರು ತಂದರೆ ದಾನಕ್ಕೂ ಶ್ರೇಷ್ಠತೆ ಬರುತ್ತದೆ ಎಂದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮುಖ್ಯಅತಿಥಿಗಳಾಗಿ ಮಾತನಾಡಿ ಶಿಕ್ಷಣ ಮತ್ತು ಶಿಕ್ಷಣವ್ಯವಸ್ಥೆಗ ಪ್ರತಿಯೊಬ್ಬರೂ ಗೌರವ ಕೊಡುತ್ತಾರೆ. ನಮ್ಮೆಲ್ಲರ ಅಸ್ಥಿತ್ವ ಮತ್ತು ವ್ಯಕಿತ್ವ ರೂಪಿಸುವ ಜ್ಞಾನ ದೇಗುಲಗಳೆ ಶಾಲಾ-ಕಾಲೇಜುಗಳು. ಇಲ್ಲಿ ಕಲಿಸುವವರಿಗೆ ಸದಾ ಸಮಾಜ ಕೃತಜ್ಞತಾಭಾವದಿಂದ ಗೌರವಿಸುತ್ತದೆ. ವಿಶ್ವಬ್ಯಾಂಕ್ ವರದಿಯೊಂದರ ಪ್ರಕಾರ ಶಿಕ್ಷಣಕ್ಕೆ ಮೂಲಭೂತ ಸೌಕರ್ಯ ಒದಗಿಸಿದರೆ ಶೇ.೧೬ರಷ್ಟು ಬೆಳವಣಿಗೆ ಸಾಧ್ಯ. ಕುವೆಂಪು ಹೇಳಿದಂತೆ ವಿದ್ಯಾರ್ಥಿಗಳು ಭತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂದ ಜಿಲ್ಲಾಧಿಕಾರಿಗಳು, ೫೦ಲಕ್ಷರೂ. ವೆಚ್ಚದಲ್ಲಿ ಪೀಠೋಪಕರಣ ಪೂರೈಸಿರುವುದು ಹರ್ಷದ ಸಂಗತಿ ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಬಿ.ಎಸ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ೩,೬೦೦ವಿದ್ಯಾರ್ಥಿಗಳು ಕಲಿಯುತ್ತಿರುವ ದೊಡ್ಡ ಕಾಲೇಜು ಇದು. ಕೊರತೆಯಿಂದಾಗಿ ಎರಡುಪಾಳಿಯಲ್ಲಿ ತರಗತಿ ನಡೆಸಲಾಗುತ್ತಿತ್ತು. ಸರ್ಕಾರ ೭.೭ಕೋಟಿರೂ. ಅನುದಾನ ನೀಡಿ ಹೊಸಕಟ್ಟಡ ಕಟ್ಟಿಸಿತ್ತಾದರೂ ಮಕ್ಕಳು ಕೂರುವ ಡೆಸ್ಕ್ಗಳ ಕೊರತೆ ಇತ್ತು. ವಿದ್ಯೆಯ ಮಹತ್ವ ಅರಿತು ದೂರದೃಷ್ಟಿಯಿಂದ ಆಲೋಚಿಸಿ ಕಾಲೇಜು ಅಭಿವೃದ್ಧಿ ಸಮಿತಿ ಜನರೇಟರ್ ಜೊತೆಗೆ ೬ಕೊಠಡಿಗೆ ಅಗತ್ಯವಿರುವ ಪೀಠೋಪಕರಣ ಸಂಗ್ರಹಿಸಿಕೊಟ್ಟಿದೆ. ಲೈಫ್ಲೈನ್ ಸಂಸ್ಥೆ ಉದಾರವಾಗಿ ಅವಶ್ಯಕತೆ ಇರುವ ೩೮೦ಡೆಸ್ಕ್ಗಳನ್ನು ೫೦ಲಕ್ಷರೂ.ವೆಚ್ಚದಲ್ಲಿ ಪೂರೈಸಿ ಉಪಕರಿಸಿದೆ ಎಂದರು.
ಲೈಫ್ಲೈನ್ ಸಂಸ್ಥೆಯ ನಿರ್ದೇಶಕರುಗಳಾದ ಅರ್ಜುನ್ಹೆಗ್ಡೆ ಮತ್ತು ನಂದನ್ಹೆಗ್ಡೆ ಡೆಸ್ಕ್ಗಳ ಹಸ್ತಾಂತರ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಕಳೆದ ಸಾಲಿನ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎಚ್.ಎಸ್.ಪುಟ್ಟೇಗೌಡ, ಶಾಂತಕುಮಾರಿ, ಡಾ.ಮೋಹನ್, ನರೇಂದ್ರಪೈ, ವಿದ್ಯಾ ಕಾಫಿ ಜನರಲ್ ಮ್ಯಾನೇಜರ್ ಜಯದೇವ್ಅಲೆಗಾವಿ, ಹಂಪಾಪುರ ಮಂಜೇಗೌಡ ಮತ್ತಿತರರು ವೇದಿಕೆಯಲ್ಲಿದ್ದರು. ಸುಂದರೇಶ್ ಸ್ವಾಗತಿಸಿ, ಪುಷ್ಪಾಭಾರತಿ ನಿರೂಪಿಸಿ, ಲೈಫ್ಲೈನ್ ಹಿರಿಯಲೆಕ್ಕಾಧಿಕಾರಿ ವಿದ್ಯಾಧರ್ ವಂದಿಸಿದರು.
50 lakhs from Lifeline organization. s furniture donation