ಚಿಕ್ಕಮಗಳೂರು: ದೇಶಭಕ್ತರ ಪಾಠಗಳನ್ನು ಕೈಬಿಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಸೋಮವಾರ ನಗರದ ಶಾಲೆಗಳ ಬಳಿ ವಿದ್ಯಾರ್ಥಿಗಳಿಗೆ ಪಠ್ಯದ ಪ್ರತಿಗಳನ್ನು ಹಂಚುವ ಮೂಲಕ ಪ್ರತಿಭಟಿಸಿದೆ.
ಸರ್ಕಾರಿ ಜೂನಿಯರ್ ಕಾಲೇಜು ಬಳಿ ಸೇರಿದ ಕಾರ್ಯಕರ್ತರು ಶಾಲಾ ಮಕ್ಕಳಿಗೆ ಪಠ್ಯದ ಪ್ರತಿ ವಿತರಿಸಿದ್ದಲ್ಲದೆ, ರಾಜ್ಯ ಸರ್ಕಾರ ಈ ಪಠ್ಯಗಳನ್ನು ರಾಜಕೀಯ ಕಾರಣಕ್ಕೆ ಕೈಬಿಟ್ಟು ದೇಶಭಕ್ತ ಹೋರಾಟಗಾರರಿಗೆ ಅಪಮಾನ ಮಾಡಿದೆ. ಈ ಪಠ್ಯದಿಂದ ಕೈಬಿಟ್ಟರೂ ಸಹ ಇವುಗಳು ಓದಿ ಮಾಹಿತಿ ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಈ ವೇಳೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯದಲ್ಲಿ ಸೇರಿಸಲಾಗಿದ್ದ ದೇಶಭಕ್ತರಾದ ರಾಜ್ಗುರು, ಸುಖ್ದೇವ್, ಭಗತ್ ಸಿಂಗ್, ಹೆಡ್ಗೆವಾರ್ ಅವರ ಪಠ್ಯಗಳನ್ನು ಕೈಬಿಡಲಾಗಿದೆ. ಕರ್ನಾಟಕದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅವುಗಳನ್ನು ಈಡೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ದೇಶಭಕ್ತರ ಪಠ್ಯಗಳನ್ನು ಕೈಬಿಡಲು ಮುಂದಾಗಿದೆ ಎಂದು ದೂರಿದರು.
ನಿಜವಾದ ದೇಶಭಕ್ತರು, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಪಠ್ಯಗಳನ್ನು ತೆಗೆಯುವ ಅಗತ್ಯವಿರಲಿಲ್ಲ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ರಾಜಕೀಯ ದ್ವೇಷ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಸರ್ಕಾರದ ವಿರುದ್ಧ ಸಾಂಕೇತಿಕ ಹೋರಾಟವಾಗಿದೆ. ಮುಂದೆ ರಾಜ್ಯಾದ್ಯಂತ ವ್ಯಾಪಿಸಲಿದೆ ಎಂದು ತಿಳಿಸಿದರು.
ಪಠ್ಯದಿಂದ ಕೈಬಿಡಲಾಗಿರುವ ಪಠ್ಯದ ಪ್ರತಿಗಳನ್ನು ಪ್ರೌಢಾಶಾಲೆ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವನ್ನು ಯುವ ಮೋರ್ಚಾ ಮಾಡಲಿದೆ. ಮುಂದೆ ಪಠ್ಯಗಳೆಲ್ಲವನ್ನೂ ಮುಂದುವರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಯುವ ಮೋರ್ಚಾ ನಗರಮಂಡಲ ಅಧ್ಯಕ್ಷ ರಾಜೇಶ್ ಮಾತನಾಡಿ, ಪಠ್ಯವನ್ನು ಕೈಬಿಡುವ ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಮಕ್ಕಳಿಗೆ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಮಾಹಿತಿ ಸಿಗದಂತೆ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ದೇಶ ವಿರೋಧಿ ನಿಲುವನ್ನು ತೆಗೆದುಕೊಂಡಿದೆ. ನಮ್ಮ ಹೋರಾಟ ಸಾಂಕೇತಿಕವಾಗಿದೆ. ಬಿಜೆಪಿ ಪಠ್ಯದಲ್ಲಿ ಸೇರ್ಪಡೆಗೊಳಿಸಿದ್ದ ಪಾಠಗಳಿಂದ ಮಕ್ಕಳಲ್ಲಿ ದೇಶಪ್ರೇಮವನ್ನು ಪ್ರೇರೇಪಣೆ ಮಾಡಲು ಸಹಕಾರಿ ಆಗಿತ್ತು. ಅದನ್ನು ರಾಜಕೀಯ ದ್ವೇಷಕ್ಕೆ ಹಿಂದಕ್ಕೆ ಪಡೆದಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಯುವಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಪುನೀತ್, ಜಿಲ್ಲಾ ಕಾರ್ಯದರ್ಶಿ ಶಶಿ ಆಲ್ದೂರು, ಪ್ರಮುಖರಾದ ಪಾರ್ಥಿಬನ್, ಕಿಶೋರ್, ಶರವಣ, ಕಿಟ್ಟಿ, ವರುಣ್ ಮಂಜುನಾಥ್ , ಮಧು ನಾಯರ್, ತಿಲಕ್ ರಾಜ ಅರಸ್, ಪುನೀತ್ ದೇವಾಂಗ ಇತರರು ಭಾಗವಹಿಸಿದ್ದರು.
BJP Yuva Morcha Protest Against Congress Govt