ಚಿಕ್ಕಮಗಳೂರು: ರಾಜ್ಯಕ್ಕೆ ಉಚಿತ ಅಕ್ಕಿ ನೀಡದಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಇಲ್ಲಿನ ತಾಲೂಕು ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹನುಮಂತಪ್ಪ ವೃತ್ತ ತಲುಪಿದ ಬಳಿಕ ಪಕ್ಷದ ಮುಖಂಡರು ಮಾತನಾಡಿದರು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಜಗತ್ತಿನ ಗುರು ಎಂದು ಸ್ವಯಂ ಘೋಷಿತ ಬಿಜೆಪಿಯ ಕೇಂದ್ರ ನಾಯಕರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಬಡವರ, ಅಲ್ಪಸಂಖ್ಯಾತರ, ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಹಾಗೇನಾದರೂ ಇದ್ದಿದ್ದರೆ ಎಲ್ಲಾ ವರ್ಗದವರಿಗೆ ಉಚಿತವಾಗಿ ನೀಡಲು ಅಕ್ಕಿಯನ್ನು ಬಿಡುಗಡೆ ಮಾಡುತ್ತಿತ್ತು ಎಂದರು.
ರಾಜ್ಯದ ಪ್ರಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳ್ಳಿಯಲ್ಲಿ ಹುಟ್ಟಿ ಬಡವರ, ರೈತರ ಕಷ್ಟವನ್ನು ಅರಿತವರು, ಅದ್ದರಿಂದ ಉಚಿತವಾಗಿ ಅಕ್ಕಿ ನೀಡುವ ಭರವಸೆ ನೀಡಿದ್ದಾರೆ. ಜನರ ಕಷ್ಟವನ್ನು ನೋಡಿ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.
ಹೊಟ್ಟೆ ನೋವಿಗೆ ಚಿಕಿತ್ಸೆ, ಔಷಧಿ ನೀಡಬಹುದು. ಆದರೆ, ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ. ರಾಜ್ಯದಲ್ಲಿ ಹೀನಾಯವಾಗಿ ಸೋತಿದ್ದರಿಂದ ಬಿಜೆಪಿ ಹೊಟ್ಟೆ ಕಿಚ್ಚಿನಿಂದಾಗಿ ರಾಜ್ಯಕ್ಕೆ ಉಚಿತವಾಗಿ ಅಕ್ಕಿ ನೀಡುತ್ತಿಲ್ಲ ಎಂದ ಅವರು, ಜನರಿಗೆ ಭಾವನೆ ಮುಖ್ಯ ಅಲ್ಲ, ಬದುಕು ದೊಡ್ಡದು. ಸ್ವಯಂ ಘೋಷಿತ ವಿಶ್ವಗುರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣವಾಗಲಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ನಿಮ್ಮ ಭ್ರಷ್ಟಚಾರ, ೪೦ ಪರ್ಸೆಂಟ್ ಕಮಿಷನ್ನಿಂದಾಗಿ ರಾಜ್ಯದ ಜನರು ಬೇಸತ್ತು, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯಂತೆ ೫ ಗ್ಯಾರಂಟಿ ನೀಡುತ್ತಿದೆ. ಈ ಯೋಜನೆಗಳ ಮೇಲೆ ಬಿಜೆಪಿ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೂ, ಮಾತಿನ ನಡುವೆ ವ್ಯತ್ಯಾಸ ಇದೆ ಎಂದ ಅವರು, ಜನರಿಗೆ ಅಕ್ಕಿ ಬದಲು ದುಡ್ಡು ಕೊಡಿ ಎಂದು ಸಲಹೆ ನೀಡಿರುವ ಸಿ.ಟಿ. ರವಿ ಹೇಳಿಕೆಯನ್ನು ಖಂಡಿಸಿದರು.
ಕಾಂಗ್ರೆಸ್, ಜನರಿಗೆ ಗ್ಯಾರಂಟಿ ಯೋಜನೆಗಳು ಕೊಟ್ಟರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವ ಭಯ ಬಿಜೆಪಿಗೆ ಕಾಡುತ್ತಿದೆ. ಈ ಕಾರಣಕ್ಕಾಗಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದ ಅವರು, ರಾಜ್ಯ ಸರ್ಕಾರ ಬಡವರಿಗೆ ಅಕ್ಕಿ ಕೊಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಉಚಿತ ಅಕ್ಕಿ ಕೇಳಿದಾಗ ಕೊಡದೆ ಇರುವ ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ. ಇದು, ಕನಿಷ್ಟ ಮಟ್ಟದ ರಾಜಕಾರಣ ಎಂದು ಆರೋಪಿಸಿದರು.
ಬಡವರ ಅನ್ನ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಜನರು ಕಷ್ಟದಲ್ಲಿ ಇರುವುದರಿಂದ ಉಚಿತ ಅಕ್ಕಿ ಕೇಳುತ್ತಿದ್ದೇವೆ. ಈ ವಿಷಯದಲ್ಲಿ ಬಿಜೆಪಿ ಬದ್ಧತೆಯಿಂದ ವರ್ತಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಸವಿತಾ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಸವಿತಾ ರಮೇಶ್, ಎಂ.ಸಿ. ಶಿವಾನಂದಸ್ವಾಮಿ, ಕೆ. ಭರತ್, ಕೆ. ಮಹಮದ್, ರೂಬಿನ್ ಮೊಸಸ್, ಮಂಜುನಾಥ್, ಹಿರೇಮಗಳೂರು ರಾಮಚಂದ್ರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Congress is trying to drag Modi to cover up its failure