ಚಿಕ್ಕಮಗಳೂರು: ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಎಲ್ಲಾ ಹಾಸಿಗೆ, ಹೊದಿಕೆಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಶಾಸಕ ಹೆಚ್.ಡಿ.ತಮ್ಮಯ್ಯ ಜಿಲ್ಲಾ ಸರ್ಜನ್ ಮೋಹನ್ಕುಮಾರ್ಗೆ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ವಾರ್ಡಿಗೆ ಭೇಟಿನೀಡಿದಾಗ ನಾಲ್ಕು ದಿನಗಳಿಂದ ಹಾಸಿಗೆಯನ್ನು ಬದಲಿಸಿಲ್ಲವೆಂದು ವ್ಯಕ್ತಿಯೋರ್ವರು ದೂರು ನೀಡಿದರು. ಆಗ ಹಾಸಿಗೆಯನ್ನು ಮೇಲೆತ್ತಿ ಪರಿಶೀಲಿಸಿದ ಶಾಸಕರು, ಕೂಡಲೇ ಇವುಗಳನ್ನು ತೆರವುಗೊಳಿಸುವಂತೆ ತಿಳಿಸಿದರು.
ಶೌಚಾಲಯಕ್ಕೆ ಸರಿಯಾಗಿ ನೀರಿಲ್ಲವೆಂದು ಮಹಿಳೆಯೊಬ್ಬರು ತಿಳಿಸಿದರು. ತಕ್ಷಣ ಪ್ರತಿಕ್ರಿಯಿಸಿದ ವೈದ್ಯ ಎಂ.ಚಂದ್ರಶೇಖರ್, ನೀರು ಸಾಕಾಗುತ್ತಿಲ್ಲವೆಂದರು. ಈ ಸ್ಥಳದಲ್ಲಿ ಸಬೂಬು ಹೇಳುವುದು ಸರಿಯಲ್ಲ, ಸಾರ್ವಜನಿಕರನ್ನು ಸರಿಯಾಗಿ ನೋಡಿಕೊಳ್ಳಿ ಎಂದೇ ನನ್ನನ್ನು ಶಾಸಕರಾಗಿ ಆಯ್ಕೆಮಾಡಿದ್ದಾರೆ. ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಂಡು ಉತ್ತಮ ಚಿಕಿತ್ಸೆನೀಡಲು ಸರ್ಕಾರ ನಿಮ್ಮನ್ನು ನೇಮಕಮಾಡಿದೆ ಇದನ್ನು ಮೊದಲು ಅರ್ಥಮಾಡಿಕೊಳ್ಳುವುದು ಒಳ್ಳೆಯದೆಂದರು.
ಸಾರ್ವಜನಿಕ ಆಸ್ಪತ್ರೆ ಹಿಂದೆ ಹೇಗಿತ್ತು ಎನ್ನುವುದು ಬೇಕಿಲ್ಲ, ಮುಂದೆ ಹೇಗಿರಬೇಕೆನ್ನುವುದನ್ನು ಚಿಂತಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಉತ್ತಮರೀತಿ ಸ್ಪಂದಿಸುವವರನ್ನು ಕೆಲಸಕ್ಕೆ ಬಿಡಿ, ಸಾರ್ವಜನಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಬದಲಾವಣೆ ಆಗಿದೆ ಎಂದೆನಿಸಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗಬಾರದು ಹರಿಗೆ ಆಸ್ಪತ್ರೆಯಲ್ಲಿ ನಾರ್ಮಲ್ ಡಿಲೆವರಿಗೆ ಯತ್ನಿಸದೆ ಸಿಜೆರಿಯನ್ಗೆ ಒತ್ತುಕೊಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅದನ್ನು ಮೊದಲು ತಪ್ಪಿಸಬೇಕೆಂದು ಹೆರಿಗೆ ಆಸ್ಪತ್ರೆ ಮೇಲುಸ್ತುವಾರಿ ವಹಿಸಿಕೊಂಡಿರುವ ಡಾ.ಚಂದ್ರಶೇಖರ್ಸಾಲಿಮಠ ಅವರಿಗೆ ಸೂಚಿಸಿದರು.
ಡಯಾಲಿಸಸ್ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯೊಂದು ಅರ್ಧಕ್ಕೆ ಬಿಟ್ಟುಹೋಗಿದೆ. ಈಗ ಸಂಜಿವಾಣಿ ಸಂಸ್ಥೆ ಈ ಕೇಂದ್ರವನ್ನು ವಹಿಸಿಕೊಂಡಿದೆ. ಈ ಕೇಂದ್ರಕ್ಕೆ ರಾಜ್ಯಸಭಾ ಸದಸ್ಯರಾದ ಜೈರಾಂರಮೇಶ್ ಸ್ವಲ್ಪ ಅನುದಾನ ನೀಡಿದ್ದಾರೆ. ಐಡಿಬಿಐ ಬ್ಯಾಂಕ್ ಆರ್ಥಿಕ ಸಹಾಯಮಾಡಿದೆ ಎಂದು ಜಿಲ್ಲಾ ಸರ್ಜನ್ ಮಾಹಿತಿ ನೀಡಿದರು. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸಗಳಾದ ಗೀತಾ ಮತ್ತು ಶಾನ್ಯ ಸಂಬಳ ಕಡಿಮೆ, ಇಎಸ್ಐ, ಪಿಎಫ್ ನೀಡುತ್ತಿಲ್ಲ, ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲವೆಂದರು. ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಶಾಸಕರು ತಿಳಿಸಿದರು.
ಶಾಸಕರು ಭೇಟಿನೀಡುವ ವಿಷಯ ಮೊದಲೆ ತಿಳಿದಿದ್ದರಿಂದ ಶೌಚಾಲಯಗಳ ಸ್ವಚ್ಚಗೊಂಡಿದ್ದವು. ಪೆನಾಯಿಲ್ಹಾಕಿ ಸ್ವಚ್ಚಗೊಳಿಸಿದ್ದು ಕಂಡುಬಂತು. ಮಂಗಳೂರು, ಹಾಸನ, ಶಿವಮೊಗ್ಗಕ್ಕೆ ರೋಗಿಗಳನ್ನು ಚಿಕಿತ್ಸೆಗೆ ಕಳುಹಿಸಿಕೊಡುವುದು ಶೇ.೫೦ ರಷ್ಟು ಕಡಿಮೆಯಾಗಿದೆ ಎಂದು ಸರ್ಜನ್ ತಿಳಿಸಿದರು. ನಿವಾಸಿ ವೈದ್ಯಾಧಿಕಾರಿ ಡಾ.ಕಲ್ಪನಾ, ಹಿರಿಯ ಶುಶ್ರೂಷಕಿ ಅಣ್ಣಮ್ಮ ಇದ್ದರು.
Sudden visit of MLA HD Tammaiah to District Public Hospital