ಚಿಕ್ಕಮಗಳೂರು: ಕಾಂಗ್ರೆಸಿಗರು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಿಮ್ಮ ತಲೆಯಲ್ಲಿ ಮಿದುಳು ಇರಲಿಲ್ಲವೇ?, ಸಗಣಿ ತುಂಬಿತ್ತಾ? ಈಗೇಕೆ ಮೋದಿಯವರ ಕಡೆಗೆ ಬೆರಳು ತೋರಿಸುತ್ತಿದ್ದೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತರಾಟೆಗೆ ತೆಗೆದುಕೊಂಡರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ೧೩ ಬಜೆಟ್ ಮಂಡಿಸಿದ ಮುಖ್ಯಮಂತ್ರಿಯಾಗಿ, ದೇಶದ ಹಲವಾರು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷವಾಗಿ, ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಪಕ್ಷವಾಗಿ ಯಾವುದೇ ಮುಂದಾಲೋಚನೆ ಇಲ್ಲದೆ ಉಚಿತಗಳನ್ನು ಘೋಷಿಸಿ ಇಂದು ಮೋದಿ ಕಡೆ ಬೆರಳು ಮಾಡಿತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಇದು ಗೊತ್ತಿತ್ತು. ಈ ಕಾರಣಕ್ಕೆ ಈ ಎಲ್ಲಾ ಯೋಜನೆಗೆ ಹಣ ಎಲ್ಲಿಂದ ತರುತ್ತೀರಿ ಎಂದು ಚುನಾವಣೆ ಸಂದರ್ಭದಲ್ಲೇ ಕೇಳಿದ್ದೆವು. ಆದರೆ ಕಾಂಗ್ರೆಸಿಗರು ಭರವಸೆ ನೀಡಿ ಓಟುಗಳನ್ನು ಪಡೆದರು. ಈಗ ಅಕ್ಕಿಗೆ ಮೋದಿಕಡೆ, ದುಡ್ಡಿಗೆ ಮೋದಿ ಕಡೆ, ವಿದ್ಯುತ್ತಿಗೆ ಮೋದಿ ಕಡೆ ಹೀಗೆ ಎಲ್ಲಾ ಗ್ಯಾರಂಟಿಗಳಿಗೆ ಮೋದಿ ಕಡೆಗೆ ಬೆಟ್ಟು ಮಾಡುವುದಾರದರೆ ಯಾರಿಗೆ ಮೋಸ ಮಾಡಲು, ಮೂಗಿಗೆ ತುಪ್ಪ ಹಚ್ಚಲು ಗ್ಯಾರಂಟಿ ಕಾರ್ಡುಗಳನ್ನು ಹಂಚಿದ್ದಿರಿ ಎಂದು ಪ್ರಶ್ನಿಸಿದರು.
ಸರ್ಟಿಫಿಕೇಟ್ ಬೇಕಿಲ್ಲ
ರಾಜ್ಯ ಸರ್ಕಾರ ಬೇಜವಾಬ್ದಾರಿ ಸರ್ಕಾರ, ಚುನಾವಣೆ ಗೆಲ್ಲಲು ಇಲ್ಲದ ಭರವಸೆಕೊಟ್ಟು ಕಾಂಗ್ರೆಸಿಗರು ಆಸೆ ತೋರಿಸಿದರು. ಇಂದು ಅವರ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಪಾಸ್ಗಳನ್ನು ಕೇಳುತ್ತಿದ್ದಾರೆ. ಸರ್ಟಿಫಿಕೇಟ್ ತೋರಿಸಿ ಎನ್ನುತ್ತಾರೆ. ನಾನು ಮಹಿಳೆ ಎನ್ನಲು ಸರ್ಟಿಫಿಕೇಟ್ ಬೇಕಿಲ್ಲ ಎಂದರು.
ಮರ್ಯಾದೆ ಇಲ್ಲದ, ಬೇಜವಾಬ್ದಾರಿಯುತವಾಗಿ ಮುಖ್ಯಂತ್ರಿ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಅಕ್ಕಿ ಬಫರ್ ಸ್ಟಾಕ್ ಇರುವುದು ಬರ, ನೆರೆ, ಯುದ್ಧದ ವಾತಾವರಣ, ಕೊರೋನಾ ಬಂದಂತಹ ಸಂದರ್ಭದಲ್ಲಿ ಬಳಸಿಕೊಳ್ಳಲು ಇಟ್ಟಿರಲಾಗುತ್ತದೆ. ದೇಶದ ಜನಕ್ಕೆ ಸಂಕಷ್ಟದ ಸಂದರ್ಭದಲ್ಲಿ ಅನ್ನಕೊಡಲು ಇರುವುದು ಎಂದರು.
ಮಾನ ಮರ್ಯಾದೆ ಇಲ್ಲದವರು
ನಿಮ್ಮ ಗ್ಯಾರಂಟಿಗಳಿಗೆ ಅಕ್ಕಿ ಕೊಡಲು ಬೇರೆ ರಾಜ್ಯಗಳಿಂದ ಖರೀದಿ ಮಾಡಬೇಕಿತ್ತು. ನಮ್ಮ ರಾಜ್ಯದ ರೈತರು ಬೇರೆ ರಾಜ್ಯಗಳಿಗೆ ಅಕ್ಕಿ ಮಾರುತ್ತಿದ್ದಾರೆ. ಅದನ್ನೇ ಸರ್ಕಾರ ಖರೀದಿಸಬೇಕಿತ್ತು. ಇದಾವ ಮುಂದಾಲೋಚನೆ ಇಲ್ಲದೆ ಉಚಿತಗಳನ್ನು ಘೋಷಿಸಿ ಈಗ ಮೋದಿ ಕಡೆಗೆ ಬೆರಳು ತೋರಿಸುತ್ತಿದ್ದೀರಿ. ನಿಮಗೆ ಮಾನ ಇಲ್ಲ, ಮರ್ಯಾದೆ ಇಲ್ಲ. ಓಟು ತೆಗೆದುಕೊಂಡು ಜನರಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ ಕುಟುಕಿದರು.
ಅಧಿಕಾರಬಿಟ್ಟು ತೊಲಗಿ
ಇಂತಹ ಎಲ್ಲಾ ಬೇಜಾಬ್ದಾರಿ ಹೇಳಿಕೆ ಹಿಂದಕ್ಕೆ ಪಡೆದು ಎಲ್ಲಿಂದಾದರೂ ತಂದು ಜನರಿಗೆ ಅಕ್ಕಿಯನ್ನು ಹಂಚಬೇಕು. ಕೇಂದ್ರ ಸಕಾರದ ಅಕ್ಕಿ ೫ ಕೆಜಿಯನ್ನು ನರೇಂದ್ರ ಮೋದಿ ಕೊಡುತ್ತಿದ್ದಾರೆ. ಅದರ ಜೊತೆಗೆ ನೀವು ೧೦ ಕೆಜಿ ಅಕ್ಕಿಯನ್ನು ಸೇರಿಸಿ ೧೫ ಕೆಜಿ ಅಕ್ಕಿಯನ್ನು ವಿತರಿಸಬೇಕು. ಇಲ್ಲವಾದರೆ ಅಧಿಕಾರ ಬಿಟ್ಟು ತೊಲಗಿ ಎಂದರು.
ಒಂದೇ ತಿಂಗಳಲ್ಲಿ ಆರಾಜಕತೆ
ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ರಾಜ್ಯದಲ್ಲಿ ಆರಾಜಕತೆ ಬಂದಿದೆ. ಉಚಿತ ವಿದ್ಯುತ್ ಎಲ್ಲಿಂದ ಕೊಡುತ್ತೇವೆ ಹೇಳಲಿಲ್ಲ. ಇದ್ದಕ್ಕಿದ್ದಂತೆ ವಿದ್ಯುತ್ ಬಿಲ್ ಒಂದೂವರೆ ಪಟ್ಟು ಹೆಚ್ಚಿಸಲಾಗಿದೆ. ಕೈಗಾರಿಕೋದ್ಯಮಿಗಳು ಬೇಸತ್ತು ಹೋಗಿದ್ದಾರೆ. ಜನ ಇದನ್ನು ಎಲ್ಲಿಂದ ತುಂಬಬೇಕು ಶೋಭಾ ಪ್ರಶ್ನಿಸಿದರು.
Rice should be distributed. Otherwise, leave the power and get rid of it