ಚಿಕ್ಕಮಗಳೂರು: ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಪೂರ್ವಿಗಾನಯಾನ.೮೮ ರ ಸಂಚಿಕೆಯಡಿ ವರಕವಿ ದ.ರಾ. ಬೇಂದ್ರೆ ಹಾಗೂ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಕಾವ್ಯ ಗಾಯನ ಕಾರ್ಯಕ್ರಮ ಜೂ.೨೪ ರಂದು ಶನಿವಾರ ಸಂಜೆ ೬ ಗಂಟೆಗೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಪೂರ್ವಿಸುಗಮ ಸಂಗೀತ ಅಕಾಡಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಸುಧೀರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯುರೇಕಾ ಅಕಾಡಮಿ, ಪೂರ್ವಿ ಸುಗಮ ಸಂಗೀತ ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಲಯನ್ಸ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ದೊಡ್ಡಯ್ಯ ವಹಿಸಲಿದ್ದಾರೆ. ಬೇಂದ್ರೆ ನುಡಿನಮನವನ್ನು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಹಾಗೂ ಕೆ.ಎಸ್.ನ ನುಡಿನಮನವನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಚಿಕ್ಕಮಗಳೂರು ಘಟಕದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಸಲ್ಲಿಸಲಿದ್ದಾರೆ. ಸುಗಮ ಸಂಗೀತ ಗಂಗಾದ ಉಪಾಧ್ಯಕ್ಷ ಡಿ.ಎಚ್.ನಟರಾಜ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಹಾಗೂ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಎನ್.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ನಾಡಿನ ಖ್ಯಾತ ಹಿನ್ನೆಲೆ ಗಾಯಕಿ ಬೆಂಗಳೂರಿನ ಜೋಗಿ ಸುನೀತ, ಅಮಿತ್ ಶೇಖರ್, ಹಾಸನದ ಚೇತನ್ರಾಮ್, ಬೆಂಗಳೂರಿನ ಅನುರಾಧ ಭಟ್, ಶ್ವೇತಾ ಭಾರದ್ವಾಜ್ ಇವರೊಂದಿಗೆ ಪೂರ್ವಿಯ ಗಾಯಕರಾದ ರಾಯನಾಯಕ್, ದೀಪಕ್ ಪಿ.ಎಸ್, ದರ್ಶನ್, ಚೈತನ್ಯ, ವಿಷ್ಣು ಭಾರದ್ವಾಜ್, ರೂಪ ಅಶ್ವಿನ್, ಅನುಷ, ರುಕ್ಸಾನ ಕಾಚೂರ್, ರಮ್ಯ ಮಧುಸೂಧನ್, ಸುಂದರ ಲಕ್ಷ್ಮೀ, ಪಂಚಮಿ ಚಂದ್ರಶೇಖರ್ ಹಾಗೂ ಲಾಲಿತ್ಯ ಅಣ್ವೇಕರ್ ಇವರೆಲ್ಲರೂ ಎಂ.ಎಸ್.ಸುಧೀರ್ ರವರ ಗಾಯನ ಸಾರಥ್ಯದಲ್ಲಿ ಹಾಡಲಿದ್ದು ಕಾವ್ಯದ ವಿಶೇಷತೆಯೊಂದಿಗೆ ಸುಮಪ್ರಸಾದ್ ಹಾಗೂ ರೂಪಾನಾಯ್ಕ್ ನಿರೂಪಿಸಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ವಿಶ್ವ ಸಂಗೀತ ದಿನದ ಅಂಗವಾಗಿ ಬೀರೂರಿನ ಸಂಗೀತ ಶಿಕ್ಷಕಿ ಶ್ರೀಮತಿ ಜ್ಯೋತಿ ಅನಂತ್ರವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ಇಡೀ ಕಾರ್ಯಕ್ರಮದಲ್ಲಿ ಮಾತುಗಳಿಗೆ ಹೆಚ್ಚು ಅವಕಾಶವಿಲ್ಲದೆ ಕೇವಲ ಗೀತೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.
Poetry singing program