ಚಿಕ್ಕಮಗಳೂರು: ಕಥೆ ಕಾದಂಬರಿ ಕವನ ಸೇರಿದಂತೆ ಸಾಹಿತ್ಯದ ಪುಸ್ತಕ ಗಳನ್ನು ಸಹೃದಯ ಓದುಗರು ತೆರೆದು ಓದಿದಾಗ ಮಾತ್ರ ಅವು ಸಾರ್ಥಕತೆ ಪಡೆಯುತ್ತವೆ ಎಂದು ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್ ಹೇಳಿದರು.
ನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಚ್.ಎಂ. ಧ್ರುವ ಕುಮಾರ್ ಅವರು ವಿಜಯ ಸುತ ಕಾವ್ಯನಾಮದಡಿ ಬರೆದಿರುವ ಹೆಜ್ಜೆ ಗೆಜ್ಜೆ ಮತ್ತು ವರ್ಲ್ಡ್ ಆಫ್ ವರ್ಡ್ಸ್ ಕವನ ಸಂಕನಗಳನ್ನು ಸರ್ಕಾರಿ ನೌಕರರ ಭವನದ ಸಭಾಂಗಣ ದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಥೆ ಕಾದಂಬರಿ ಕವನ ಸೇರಿದಂತೆ ಯಾವುದೇ ಸಾಹಿತ್ಯದ ಪುಸ್ತಕಗಳು ಕೇವಲ ಬಿಡುಗಡೆ ಯಾಗುವುದರಿಂದ ಪ್ರಯೋಜನವಾಗುವುದಿಲ್ಲ. ಸಹೃದಯ ಓದುಗ ಅದನ್ನು ತೆರೆದು ಓದಬೇಕು ಹಾಗಾದಾಗ ಮಾತ್ರ ನಿಜವಾಗಿ ಅವುಗಳ ಬಿಡುಗಡೆಯಾಗುತ್ತದೆ ಎಂದರು.
ಕವನಗಳು ಓದುಗರಿಗೆ ಹತ್ತಿರವಾಗಬೇಕಾದರೆ, ಅವುಗಳಲ್ಲಿ ಬದುಕಿನ ವಾಸ್ತವತೆ ಇರ ಬೇಕು. ಕವನಗಳು ಓದುಗರನ್ನು ಚಿಂತನೆಗೆ ಹಚ್ಚಬೇಕು. ಸಮಾಜದ ಅಂಕುಡೊಂಕುಗಳನ್ನು ಮೋರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಹೆಜ್ಜೆ ಗೆಜ್ಜೆ ಕೃತಿಯ ಕುರಿತು ಮಾತನಾಡಿದ ಸಾಹಿತಿ ವಿಮರ್ಶಕ ಡಾ. ಹೆಚ್.ಎಸ್. ಸತ್ಯನಾರಾಯಣ. ಧ್ರುವ ಕುಮಾರ್ ಅವರ ಕವನಗಳು ಓದುಗರಿಗೆ ಕೌಟುಂಬಿಕ ಮೌಲ್ಯ ಗಳನ್ನು ಕಟ್ಟಿಕೊಡುತ್ತವೆ ಎಂದರು.
ನಿವೃತ್ತಿ ನಂತರದ ಬದುಕಿನಲ್ಲಿ ಸಾಹಿತ್ಯ ಕೃಷಿಗೆ ಮುಂದಾಗಿರುವ ಧ್ರುವ ಕುಮಾರ್ ಅವರ ಕಾರ್ಯವನ್ನು ಬದುಕಿನ ಪ್ರೀತಿಯನ್ನು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕವನ ಸಂಕಲನ ಗಳನ್ನು ಕಥೆ, ಕಾದಂಬರಿಗಳನ್ನು ಕನ್ನಡದಲ್ಲೇ ಹೆಚ್ಚು ಬರೆಯುವಂತೆ ಕಿವಿಮಾತು ಹೇಳಿದರು.
ನಿವೃತ್ತ ಉಪನ್ಯಾಸಕ ಎಂ.ಗೋಪಿನಾಥ್ ವರ್ಲ್ಡ್ ಆಫ್ ವರ್ಡ್ಸ್ ಕೃತಿಯ ಕುರಿತು ಮಾತನಾಡಿದರು. ಲೇಖಕ ಹೆಚ್.ಎಂ.ದ್ರುವ ಕುಮಾರ್ ಮಾತನಾಡಿ, ತಮ್ಮ ಸಾಹಿತ್ಯ ಕೃಷಿಗೆ ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು
.
ಸಮಾರಂಭದಲ್ಲಿ ಲೇಖಕ ಹೆಚ್.ಎಂ.ಧ್ರುವ ಕುಮಾರ್ ಅವರನ್ನು ವಿವಿಧ ಸಂಘ ಸಂಸ್ಥೆ ಗಳ ವತಿಯಿಂದ ಸನ್ಮಾನಿಸಲಾಯಿತು. ಮೂಗ್ತಿಹಳ್ಳಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಕೆ. ಆರ್. ಶಿವಕುಮಾರ್ ಉಪಸ್ಥಿತರಿದ್ದರು.
Hejjegejje and World of Words poetry anthology released