ಚಿಕ್ಕಮಗಳೂರು: ಅಭಿವೃದ್ಧಿಯ ಹರಿಕಾರ ನಾಡಪ್ರಭು ಕೆಂಪೇಗೌಡರು ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ೫೧೪ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬಹಳ ದೂರದೃಷ್ಠಿ ಹೊಂದಿದ ವ್ಯಕ್ತಿ ಅವರು. ದೂರದೃಷ್ಠಿಯಿಂದ ನಾಡು ಕಟ್ಟಿದ್ದಾರೆ. ನಾಲ್ಕು ದಿಕ್ಕಿಗೂ ನಾಲ್ಕು ದ್ವಾರ ಮಾಡಿ, ವೃತ್ತಿಗೊಂದು ಮಾರುಕಟ್ಟೆ ಸ್ಥಾಪಿಸಿ, ಕೆರೆಕಟ್ಟೆಗಳನ್ನು ಅಭಿವೃದ್ಧಿ ಮಾಡಿದ್ದರು. ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸುವ ಸಲುವಾಗಿ ೧೦೦೦ ಕೆರೆಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಬೆಂಗಳೂರು ಹೆಸರು ಪಡೆದಿದ್ದು, ನಮ್ಮ ರಾಷ್ಟ್ರದ ಶೇ. ೪೦ ರಷ್ಟು ಸಾಫ್ಟವೇರ್ ರಫ್ತು ಬೆಂಗಳೂರಿನಿಂದಲೇ ಆಗುತ್ತದೆ. ಶೇ. ೮೦ ರಷ್ಟು ಗ್ಲೋಬಲ್ ಐಟಿ ವಸ್ತುಗಳು ಬೆಂಗಳೂರಿನಿಂದ ರಫ್ತಾಗುತ್ತವೆ. ಸುಮಾರು ೧೩ ಲಕ್ಷಕ್ಕೂ ಮೇಲ್ಪಟ್ಟ ಯುವಕರಿಗೆ ಉದ್ಯೋಗ ಸೃಷ್ಠಿಯಾಗಿದೆ. ಇದಕ್ಕೆಲ್ಲ ಕಾರಣ ಕೆಂಪೇಗೌಡರು ಅಂದು ದೂರದೃಷ್ಠಿಯಿಂದ ಕೈಗೊಂಡ ಯೋಜನೆಗಳು ಇಂದು ಫಲ ನೀಡುತ್ತಿವೆ ಎಂದ ಅವರು ವಿದ್ಯಾರ್ಥಿಗಳು ವಿಶೇಷವಾಗಿ ಅವರ ಚಿಂತನೆ, ಯೋಚನೆ, ಸಾಧನೆಗಳನ್ನು ನೆನಪಿನಲ್ಲಿಟ್ಟುಕೊಂಡು ತಾವು ಕಷ್ಟಪಟ್ಟು ಕೆಲಸ ಮಾಡಿದರೆ ಅಭಿವೃದ್ಧಿ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ನೂರಾರು ವರ್ಷಗಳು ಕಳೆದರು ಇಂದಿಗೂ ನಾಡಪ್ರಭು ಕೆಂಪೇಗೌಡರನ್ನು ಸ್ಮರಿಸಲಾಗುವುದು, ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಹುಟ್ಟು ಹಬ್ಬದ ದಿನವಾದ ಜೂ. ೨೭ ರಂದು ಕೆಂಪೇಗೌಡ ಜಯಂತಿಯನ್ನಾಗಿ ಆಚರಣೆ ಮಾಡಲಾಗುತ್ತಿದೆ, ಅವರು ಒಂದು ಜಾತಿಗೆ ಸೀಮಿತವಾಗದೆ ಕರ್ನಾಟಕದ ಎಲ್ಲಾ ಜನಾಂಗದವರು ಸುಖ, ಶಾಂತಿಯಿಂದ ಜೀವನವನ್ನು ಮಾಡುವುದರ ಜತೆಗೆ ಅಭಿವೃದ್ಧಿಯನ್ನು ಹೊಂದಬೇಕೆಂದು ಬಯಸಿದವರು ಎಂದರು.
ರೈತರಿಗೆ ಮತ್ತು ವ್ಯಾಪಾರಿಗಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ನಾಡನ್ನು ಆಳಿದವರು, ಬೆಂಗಳೂರಿನಂತಹ ದೊಡ್ಡ ನಗರವನ್ನು ನಿರ್ಮಾಣ ಮಾಡಿದವರು, ಅವರು ಮಾಡಿದ ತ್ಯಾಗ ಮತ್ತು ಸೇವೆ ಪಠ್ಯ ಪುಸ್ತಕದಲ್ಲಿ ಉಲ್ಲೇಖವಿದೆ, ಕರ್ನಾಟಕ ರಾಜ್ಯದಲ್ಲಿ ಹುಟ್ಟಿದ ಪ್ರತಿಯೋಬ್ಬರಿಗೂ ಬೆಂಗಳೂರು ನೋಡಬೇಕೆಂಬುದು ಕನಸ್ಸಾಗಿರುತ್ತದೆ ಎಂದರು.
ಸಿವಿಲ್ ಇಂಜಿನಿಯರಾಗಲಿ, ವಾಸ್ತುಶಿಲ್ಪಿಗಳಾಗಲಿ ಇಲ್ಲದ ೫೦೦ ವರ್ಷಗಳ ಹಿಂದೆ ಕೆಂಪೇಗೌಡರು ಬೆಂಗಳೂರು ಎಂಬ ಮಹಾ ನಗರವನ್ನು ಕಟ್ಟಲು ಹಾಕಿದ ಅವರ ಪರಿಕಲ್ಪನೆಯ ಯೋಜನೆ ಮಹತ್ತರವಾದದ್ದು, ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಬಯಸುವ ಇಂದಿನ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಕೆಂಪೇಗೌಡರ ಪ್ರತಿಮೆಯನ್ನು ಜಿಲ್ಲೆಯಲ್ಲಿ ಅನಾವರಣ ಮಾಡಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಬೇಡಿಕೆಯನ್ನು ಇಡಲಾಗುವುದು, ವರ್ಷಕ್ಕೋಮ್ಮೆ ಅವರನ್ನು ನೆನೆಯದೆ, ಅವರ ಪ್ರತಿಮೆ ಕಣ್ಮುಂದೆ ಇದ್ದು ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿ ಕೊಳ್ಳುವಂತಾಗಬೇಕು, ರಾಜ್ಯ ಸರ್ಕಾರವು ಕೆಂಪೇಗೌಡ ಜಯಂತಿ ಆಚರಣೆಗಾಗಿ ನೀಡುತ್ತಿರುವ ೫೦ ಸಾವಿರ ರೂಪಾಯಿ ೫ ಲಕ್ಷ ರೂಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್ ನಗರ ಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್, ಬೇಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಹೆಚ್.ಎಂ. ಮಹೇಶ್ ಕೆಂಪೇಗೌಡರ ಜೀವನ, ಅವರ ಸಾಧನೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಎಲ್ಲರನ್ನು ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
514th birth anniversary of Kempegowda