ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡುವ ಜೊತೆಗೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ|| ಹೆಚ್.ಸಿ.ಮಹಾದೇವಪ್ಪ ಅವರಿಗೆ ಮಂಗಳವಾರ ಒತ್ತಾಯಿಸಿದರು.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರ ಮೂಲಕ ಮಂಗಳವಾರ ಪರಿಷತ್ ಪದಾಧಿಕಾರಿ ಗಳು ಮನವಿ ಸಲ್ಲಿಸಿ ೨೦೧೮-೧೯ನೇ ಸಾಲಿನಿಂದ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕಗಳನ್ನು ಪಾವತಿಸಬಾರದೆಂದು ಆದೇಶಿಸಿರುವುದು ಸೂಕ್ತವಾದ ತೀರ್ಮಾನವಲ್ಲ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸಂಗೀತಾ ಪ್ರಸಾದ್ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ೨೦೧೯ರಿಂದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಕೋಟಾದಡಿಯಲ್ಲಿ ಪ್ರವೇಶ ಪಡೆದಿರುವ ಕಾರಣಕ್ಕಾಗಿ ಕಳೆದ ಸರ್ಕಾರದಿಂದ ಶಿಷ್ಯವೇತನ ನಿಲ್ಲಿಸಿರುವುದರಿಂದ ಶೋಷಿತ ಸಮುದಾಯ ಗಳ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಹಲವಾರು ವೃತ್ತಿಪರ ಕೋರ್ಸ್ಗಳು ಬಹುತೇಕ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಕೋಟಾದಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಈ ಕೋರ್ಸ್ ಅಭ್ಯಾಸಿಸಬೇಕಾದರೆ ಅನಿವಾರ್ಯವಾಗಿ ವಿದ್ಯಾರ್ಥಿಗಳು ಖಾಸಗೀ ಕೋಟಾದಡಿಯಲ್ಲಿಯೇ ಪ್ರವೇಶ ಪಡೆಯಬೇಕಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ದೊರೆಯದಿದ್ದರೆ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ಹಿಂದುಳಿಯಬೇಕಾಗುತ್ತದೆ ಎಂದು ತಿಳಿಸಿದರು.
ಕೂಡಲೇ ಸರ್ಕಾರ ಓದಲು ಪ್ರವೇಶ ಪಡೆದ ಪ್ರತಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು, ವಸತಿ ನಿಲಯ ಗಳಲ್ಲಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್. ವಸತಿ ನಿಲಯಗಳಲ್ಲಿ ಶೈಕ್ಷಣಿಕ ಪೂರಕ ಕೇಂದ್ರವಾಗಿ ನಿರ್ಮಾಣ , ಮೇಲುಸ್ತುವಾರಿ ಸಮಿತಿ ಸಭೆ ಕಡ್ಡಾಯವಾಗಿ ಪ್ರತಿ ತಿಂಗಳು ನಡೆಯುವುದು, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಹಾಗೂ ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಶಿಷ್ಯವೇತನ ಶೇ.೫೦ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ಕುಮಾರ್, ಮುಖಂಡರುಗಳಾದ ನಂಜುಂಡಪ್ಪ, ಫಾತಿಮಾ, ವಿದ್ಯಾರ್ಥಿಗಳಾದ ಮನೀಶ್, ಮನೋಜ್ ಹಾಜರಿದ್ದರು.
Petition from Dalit Vidyarthi Parishad to Deputy Collector BR Roopa