ಚಿಕ್ಕಮಗಳೂರು: ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಭವನ ನಿರ್ಮಿಸಲು ನಗರದಲ್ಲಿ ನಿವೇಶನ ನೀಡುವಂತೆ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಶಾಸಕ ಎಚ್.ಡಿ. ತಮ್ಮಯ್ಯಗೆ ಮನವಿ ಮಾಡಿದೆ.
ಶಾಸಕರನ್ನು ಗೃಹ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಮಹಾಸಭಾದ ಪದಾಧಿಕಾರಿಗಳು, ನೂತನವಾಗಿ ಶಾಸಕರಾದ ಹಿನ್ನೆಲೆಯಲ್ಲಿ ತಮ್ಮಯ್ಯ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.
ಗವನಹಳ್ಳಿಯ ಸರ್ವೇ ನಂಬರ್ ೯೩ ರಲ್ಲಿ ೫ ಎಕರೆ ಜಾಗವನ್ನು ಸಂಘದ ಕಾರ್ಯ ಚಟುವಟಿಕೆಗಳಿಗಾಗಿ ನೀಡುವಂತೆ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ ಎಂದರು.
ಸರ್ಕಾರದಿಂದ ನಿವೇಶನವನ್ನು ಒದಗಿಸಿಕೊಟ್ಟಲ್ಲಿ ಆ ಜಾಗದಲ್ಲಿ ವಿಪ್ರ ಸಮುದಾಯಕ್ಕೆ ಅನುಕೂಲವಾಗುವಂತೆ ಆಸ್ಪತ್ರೆ, ಶಾಲೆ,ಧಾರ್ಮಿಕ ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಲ್.ಶ್ರೀಧರ್, ಜಿಲ್ಲಾ ಸಂಚಾಲಕಿ ರಮಾಪ್ರಸಾದ್, ಉಪಾಧ್ಯಕ್ಷ ಭುಜಂಗರಾವ್, ಪ್ರಧಾನ ಕಾರ್ಯದರ್ಶಿ ಎಂ.ಆರ್.ರವಿಶಂಕರ್, ಸಂಘಟನಾ ಕಾರ್ಯದರ್ಶಿ ಎ.ಎಸ್.ಪ್ರಕಾಶ್ ಖಜಾಂಚಿ ಬಿ.ಸಿ.ಜಯರಾಮ್, ಪ್ರಸಾದ್ ಮಾಸ್ಟರ್, ಬಿ.ಎಲ್.ಅಚ್ಯುತ ಮೂರ್ತಿ, ನಾಗರಾಜ ಭಟ್, ಕುಮಾರ್, ಬಾಲಾಜಿ ಹಾಜರಿದ್ದರು.
District Brahmin Mahasabha request to give land