ಚಿಕ್ಕಮಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಜುಲೈ ೦೧ ರಿಂದ ಆರಂಭವಾಗಿದೆ ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಹಳೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ ಉಚಿತ ವಿದ್ಯುತ್ ಯೋಜನೆಯು ಇಂದಿನಿಂದ ಅನ್ವಯವಾಗಲಿದೆ. ಈಗಾಗಲೇ, ಜೂನ್ನಲ್ಲಿ ಬಳಸಿರುವ ವಿದ್ಯುತ್ ಬಿಲ್ ಜುಲೈನಲ್ಲಿ ಬರಲಿದ್ದು, ಜೂನ್ನಲ್ಲಿ ಬಳಸಿದ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದರು.
ಆ ಬಳಿಕ ಆಗಸ್ಟ್ನಲ್ಲಿ ವಾರ್ಷಿಕ ಸರಾಸರಿಯಂತೆ ಆಯಾಆಯಾ ಮನೆಗಳಿಗೆ ನಿಗಧಿಪಡಿಸಿರುವ ಪ್ರಮಾಣದ ವಿದ್ಯುತ್ ಉಚಿತವಿರಲಿದೆ ಎಂದ ಅವರು ಒಂದು ವೇಳೆ ನಿಗಧಿಪಡಿಸಿದ ಯುನಿಟ್ಗಿಂತ ಹೆಚ್ಚು ಪ್ರಮಾಣದ ವಿದ್ಯುತ್ ಬಳಸಿದರೆ ಹೆಚ್ಚುವರಿ ಬಳಕೆಯ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಉಚಿತ ವಿದ್ಯುತ್ ಪಡೆಯಲು ನೊಂದಾವಣಿಗೆ ಜುಲೈ ೨೫ ರ ವರೆಗೆ ಅವಕಾಶ ಕಲ್ಪಿಸಲಾಗಿದೆ, ಜುಲೈ ೨೫ ರೊಳಗೆ ನೊಂದಾಯಿಸಿಕೊಳ್ಳದೆ ಇರುವ ವಿದ್ಯುತ್ ಗ್ರಾಹಕರಿಗೆ ಇನ್ನೂ ಒಂದು ತಿಂಗಳ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ೮೫ ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಹೊಂದಿರುವ ಬಳಕೆದಾರರು ಸಹ ನೊಂದಾಯಿಸಿಕೊಳ್ಳಬೇಕು ನೋಂದಣಿಗೆ ಗ್ರಾಹಕರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಶಾಸಕರಾದ ಟಿ.ಡಿ. ರಾಜೇಗೌಡ, ಆನಂದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂತಾದವರಿದ್ದರು.
Griha Jyoti Yojana starts from today