ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಅಧಿಕಾರಿಗಳು, ನೌಕರವರ್ಗ, ಜನಪ್ರತಿನಿಧಿಗಳು ನೀಡಿದ ಸಹಕಾರ ಅವಿಸ್ಮರಣೀಯ ಎಂದು ಜಿಲ್ಲಾಧಿಕಾರಿ ಕೆ .ಎನ್ ರಮೇಶ್ ಹೇಳಿದರು
ಜಿಲ್ಲಾಡಳಿತದ ವತಿಯಿಂದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ನಿಕಟ ಪೂರ್ವ ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳು ಬೀಳ್ಕೊಡುಗೆ ಮತ್ತು ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧಿಕಾರಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಒಂದು ರಥ ಸುಲಲಿತವಾಗಿ ನಡೆಯಲು ರಥಕ್ಕೆ ಗಾಲಿ , ಕೀಲುಗಳೊಂದಿಗೆ ರಥ ಎಳೆಯುವ ಜನರ ಶ್ರಮವೂ ಹೇಗೆ ಅಗತ್ಯವೋ ಅದೇ ಮಾದರಿಯಲ್ಲಿ ನಮ್ಮ ಕರ್ತವ್ಯದ ಅವಧಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಎಲ್ಲರ ಸಹಕಾರ ದೊರೆತ ಕಾರಣಕ್ಕೆ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು. ಯಾವುದೇ ವ್ಯಕ್ತಿ ಒಂದು ಸಾಧನೆಯನ್ನು ಒಬ್ಬನೇ ಸಾಧಿಸಿದ್ದೇನೆ ಎಂದರೆ ತಪ್ಪಾಗುತ್ತದೆ. ನಮ್ಮ ಸಾಧನೆಯಲ್ಲಿ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ ಎಂದು ನೆನಪಿಸಿಕೊಂಡರು.
ತಮ್ಮ ಸೇವಾವಧಿಯ ಕೋವಿಡ್ಭೀಕರ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿವರ್ಗ ನೀಡಿದ ಸಹಕಾರವನ್ನು ಮೆಲುಕು ಹಾಕಿದ ಅವರು ದತ್ತ ಜಯಂತಿ ಕಾರ್ಯಕ್ರಮಗಳು, ಸೌಹಾರ್ದಯುತವಾಗಿ ನಡೆಸಿದ ಉರುಸ್ ಕಾರ್ಯಕ್ರಮ, ಯಶಸ್ವಿಯಾಗಿ ನಡೆಸಿದ ಚುನಾವಣೆ ಪ್ರಕ್ರಿಯೆಗಳು ನನ್ನೊಬ್ಬನಿಂದಲೇ ಯಶಸ್ವಿಯಾಗಿದೆ ಎಂದು ಹೇಳಿದರೆ ತಪ್ಪಾಗುತ್ತದೆ .ನನ್ನೊಂದಿಗೆ ಅಪರ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳ ನೆರವು ಸ್ಮರಣೀಯ ಎಂದರು .
ನಿರ್ಗಮಿತ ಅಪರ ಜಿಲ್ಲಾಧಿಕಾರಿ ಬಿಆರ್ ರೂಪ ಮಾತನಾಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ವರ್ಗಕ್ಕೆ ಬೀಳ್ಕೊಡುಗೆ, ನೂತನ ಅಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮ ಹಳೆಯ ಮತ್ತು ಹೊಸ ಅಧಿಕಾರಿಗಳ ನಡುವಿನ ಕೊಂಡಿ ಬೆಸೆಯುವ ಅವಿಸ್ಮರಣೆಯ ಕಾರ್ಯಕ್ರಮ ಎಂದು ಹೇಳಿದರು.
ತಂದೆಯ ಸ್ಥಾನದಲ್ಲಿ ನಿಂತು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳ ಕರ್ತವ್ಯದ ನಿಷ್ಟೆ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದ ಅವರು ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳೊಂದಿಗೆ ನಮ್ಮ ಸಂಬಂಧ ಭಾವನಾತ್ಮಕ ಸಂಬಂಧ ಎಂದು ಗದ್ಗದಿತರಾದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ನಾವು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕರ್ತವ್ಯಕ್ಕಿಂತ ಹೆಚ್ಚಿನ ಭಾವನಾತ್ಮಕ ಸಂಬಂಧ ಹೊಂದಿದ್ದೆವು. ಅವರು ತಾಳ್ಮೆಯ ಸಾಕಾರ ಮೂರ್ತಿ, ತಮ್ಮ ಕೆಲಸದಲ್ಲಿನ ಅಚ್ಚುಕಟ್ಟುತನ ದೊಂದಿಗೆ ಮಾನವೀಯ ಮೌಲ್ಯಗಳೊಂದಿಗೆ ಕರ್ತವ್ಯ ನಿರ್ವಹಿಸಿದ ಅಪರೂಪದ ಅಧಿಕಾರಿ ಎಂದು ಹೇಳಿದರು.
ಅವರು ತಾಳ್ಮೆ, ಮೃದು ಎಂದು ಎನಿಸಿದರು ಸಕಾಲದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ಕಠಿಣತೆಯನ್ನು ನಮಗೆ ತೋರಿಸಿದ್ದಾರೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್ ಮಾತನಾಡಿ ಮೇಲ್ಮಟ್ಟದ ಅಧಿಕಾರಿಗಳು ಕೆಳಮಟ್ಟದ ಅಧಿಕಾರಿಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಚೆನ್ನಾಗಿ ಕರ್ತವ್ಯ ನಿರ್ವಹಿಸಬಹುದು ಎಂಬುದನ್ನು ಜಿಲ್ಲಾಧಿಕಾರಿಗಳು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ನೂತನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ ಹಿರಿಯ ಅಧಿಕಾರಿಗಳು ಹಾಕಿರುವ ಅಡಿಪಾಯದ ಮೇಲೆ ಒಟ್ಟಾಗಿ ಕಾರ್ಯನಿರ್ವಹಿಸಿ ಒಳ್ಳೆಯ ಅಭಿವೃದ್ದಿಯ ಸೌಧವನ್ನು ಕಟ್ಟೋಣ ಎಂದು ಆಶಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧಿಕಾರಿ ಮೀನಾ ನಾಗರಾಜ್,ಅಪರಜಿಲ್ಲಾಧಿಕಾರಿ ನಾರಾಯಣ ಕನಕ ರೆಡ್ಡಿ, ರಶ್ಮಿ ರಮೇಶ್, ಕಂದಾಯ ಉಪವಿಭಾಗಾಧಿಕಾರಿ ರಾಜೇಶ್ ಸೇರಿದಂತೆ ಹಲವರಿದ್ದರು.
Collectors and Deputy Collectors farewell