ಕಡೂರು: ಕ್ಷುಲ್ಲಕ ಕಾರಣಕ್ಕಾಗಿ ಅನ್ಯಕೋಮಿನ ಯುವಕರ ಗುಂಪೊಂದು ಯುವಕನೋರ್ವನ ಮೇಲೆ ಹರಿತವಾದ ಆಯುಧದಿಂದ ಇರಿದು ಹಲ್ಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಕಾರ್ಯಾಚರಣೆ ನಡೆಸಿ ನಾಲ್ವರು ಯುವಕರನ್ನು ಬುಧವಾರ ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇರಿತಕ್ಕೆ ಒಳಗಾದ ಪಟ್ಟಣದ ಸಿಪಿಸಿ ಕಾಲೋನಿ ನಿವಾಸಿ ಯುವಕ ವಿಘ್ನೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಒಟ್ಟು ೮ ಜನರ ಯುವಕರ ಗುಂಪಿನಲ್ಲಿ ಪ್ರಮುಖ ಆರೋಪಿಯಾಗಿರುವ ಕಡೂರು ಪಟ್ಟಣದಲ್ಲಿನ ಕುಟುಂಬಸ್ಥರ ಮನೆಯಲ್ಲಿ ಉಳಿದುಕೊಂಡಿದ್ದ ಶಿವಮೊಗ್ಗದ ಮೂಲದ ಫಾಝಲ್, ಪಟ್ಟಣದ ಕೆ.ಎಂ. ರಸ್ತೆಯ ನಿವಾಸಿ ಶೇಕ್ಮುಷ್ರಫ್, ಸಾದತ್ ಹಾಗೂ ಬಾಲಕನೋರ್ವನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಉಳಿದವರು ತಲೆಮರೆಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಪೈಕಿ ಇಬ್ಬರ ಯುವಕರ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ನಾಗರಾಜ್, ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಮಂಗಳವಾರ ತಡರಾತ್ರಿಯವರೆಗೂ ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದ ಎಸ್ಪಿ ಉಮಾ ಪ್ರಶಾಂತ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಹಲ್ಲೆಗೊಳಗಾದ ಯುವಕ ವಿಘ್ನೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಡೂರು ಪೊಲೀಸ್ ಠಾಣೆಯಲ್ಲಿ ಒಟ್ಟು ಎಂಟು ಜನರ ಮೇಲೆ ಸೆಕ್ಷನ್ ೩೦೭ ಅಡಿ ಪ್ರಕರಣ ದಾಖಲಾಗಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಸಿಪಿಐ ಶಿವಕುಮಾರ್ ಹಾಗೂ ಪಿಎಸೈ ಎಂ.ಆರ್. ಧನಂಜಯ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಘಟನೆ ವಿವಿರ: ಪಟ್ಟಣದ ಕನಕವೃತ್ತದಿಂದ ಸುಭಾಷ್ ನಗರಕ್ಕೆ ಹೋಗುವರಸ್ತೆಯಲ್ಲಿ ಮಂಗಳವಾರ ಮಧಾಹ್ನ ರಿಯಾಜ್ ಎಂಬ ವೃದ್ಧನ ತಳ್ಳುವ ಗಾಡಿಗೆ ವಿಘ್ನೇಶ್ನ ಬೈಕ್ ತಗುಲಿದೆ ಎನ್ನಲಾಗುತ್ತಿದ್ದು. ಈ ವೇಳೆ ಸ್ಥಳದಲ್ಲಿಯೇ ಇದ್ದ ಯುವಕರ ಗುಂಪು ಹಾಗೂ ವಿಘ್ನೇಶನ ನಡುವೆ ಮಾತಿನ ಚಕಮಕಿ ನಡೆಸಿದೆ. ನಂತರ ರಾತ್ರಿ ಗಲಾಟೆಯ ವಿಚಾರವನ್ನು ಕೆದಕಿಕೊಂಡು ರೈಲ್ವೆ ಸ್ಟೇಷನ್ ಬಳಿ ರಸ್ತೆಯಲ್ಲಿ ಯುವಕರ ಗುಂಪು ಹಾಗೂ ವಿಘ್ನೇಶ್ ಕೈಕೈ ಮಿಲಾಯಿಸಿದ್ದಾರೆ.
ಈ ಸಮಯದಲ್ಲಿ ಶಿವಮೊಗ್ಗ ಮೂಲದ ಫಾಝಲ್ ಎಂಬ ಯುವಕ ವಿಘ್ನೇಶನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ. ಘಟನೆಯಲ್ಲಿ ಯುವಕ ರಕ್ತ ಸಾವ್ರದಿಂದ ನರಳುತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಲ್ಲಿ ವಿಘ್ನೇಶ್ನ ಬೆನ್ನು, ಭುಜ ಮತ್ತಿತರೆ ಕಡೆ ತೀವ್ರವಾದ ಗಾಯಗಳಾಗಿವೆ.
ಮಂಗಳವಾರ ರಾತ್ರಿ ನಡೆದ ಹಲ್ಲೆ ಕೃತ್ಯ ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಕರೆಕೊಟ್ಟಿದ್ದರು. ಆದರೆ, ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಸಿದರು.
A quarrel over a petty cause is an assault with a sharp weapon