ಚಿಕ್ಕಮಗಳೂರು: ಪ್ರತಿಯೊಬ್ಬರಿಗೂ ಆಹಾರ, ಗಾಳಿ, ಬೆಳಕು ಎಷ್ಟು ಮುಖ್ಯವೋ ಕಾನೂನು ಸಹ ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್. ಹೇಳಿದ್ದಾರೆ.
ನಗರದ ಡಿ.ಎ.ಸಿ.ಜಿ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಲಾಗಿದ್ದ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಕಾನೂನನ್ನು ಪ್ರತಿನಿತ್ಯ ಅವಶ್ಯವಾಗಿ ತಿಳಿದು ಸಮಾಜದಲ್ಲಿ ಜೀವಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸಮಾಜದಲ್ಲಿ ತಮ್ಮ ತಪ್ಪುಗಳಿಂದ ಅಶಾಂತಿಯಾಗಲಿ, ಕಾನೂನಿನ ಉಲ್ಲಂಘನೆಯಾಗಲಿ ನಡೆಯದಂತೆ ಜಾಗೃತಿ ವಹಿಸಬೇಕು. ಇತ್ತೀಚೆಗೆ ವಿದ್ಯಾವಂತರಿಂದಲೆ ಕಾನೂನು ಉಲ್ಲಂಘನೆ, ಮಕ್ಕಳ ಮೇಲಿನ ಲೈಂಗಿಕ ಪ್ರಕರಣಗಳು ನಡೆಯುತ್ತಿರುವುದು ನಾಗರೀಕ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದರಿಂದ ಸಮಾಜದಲ್ಲಿ ಹಲವಾರು ಕಾನೂನುಗಳು ಇದ್ದರು ಬಾಲ್ಯವಿವಾಹ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ಸಮಾಜಕ್ಕೆ ಕಂಟಕವಾಗುತ್ತಿದೆ ಎಂದ ಅವರು ಯುವ ಜನಾಂಗ ಸರಿದಾರಿಯಲ್ಲಿ ಒಳ್ಳೆಯ ಚಿಂತನೆಗಳಿಂದ ಕೂಡಿದ ವಿಷಯಗಳನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳವತ್ತಾ ಗಮನಹರಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕ್ಷಣಿಕ ಆಸೆಗಾಗಿ ತಪ್ಪು ದಾರಿಯಲ್ಲಿ ನಡೆಯುವಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದು ಹೇಳಿದರು.
ಯುವ ಜನಾಂಗ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಂವಿಧಾನ ಹಲವು ಅವಕಾಶಗಳು ಮತ್ತು ಹಕ್ಕುಗಳನ್ನು ನೀಡಿದೆ. ಇದರ ಸದಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವತ್ತಾ ಗಮನಹರಿಸಬೇಕು. ಲೈಂಗಿಕ ಅಪರಾಧ ಮಾದಕ ವಸ್ತುಗಳಿಂದ ದೂರವಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಭಾರಿ ಪ್ರಾಂಶುಪಾಲ ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, ಬಾಲ್ಯವಿವಾಹದಂತ ಪ್ರಕರಣಗಳು ತಮ್ಮ ಸುತ್ತಮುತ್ತಲಲ್ಲಿ ನಡೆದರೆ ಅವುಗಳನ್ನು ತಡೆಯುವುದು ಯುವಜನಾಂಗದ ಕರ್ತವ್ಯವಾಗಬೇಕು ಹಾಗೂ ಈ ರೀತಿ ನಡೆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಎಸ್. ಇಂಪಾ, ವಕೀಲರಾದ ಚಂದ್ರಶೇಖರ್ ವಿವಿಧ ಕಾಯ್ದೆಗಳ ಬಗ್ಗೆ ಉಪನ್ಯಾಸ ನೀಡಿದರು.
ವಿದ್ಯಾರ್ಥಿನಿ ನಿಖಿತಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
City’s D.A.C.G. Awareness program on Child Marriage Prohibition Act in Government Polytechnic College