ಚಿಕ್ಕಮಗಳೂರು: ಪರಾಕ್ರಮ, ಶೌರ್ಯ, ಧೈರ್ಯ ದೇಶಪ್ರೇಮದ ಮೂಲಕ ರಾಣಾಪ್ರತಾಪ್ ಅಭಿಮಾನ ಮೂಡಿಸಿದವರೆಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.
ಜಿಲ್ಲಾ ರತಪೂತ ಮಂಡಳಿ ಲಯನ್ಸ್ ಸೇವಾ ಭವನದಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಗ್ಜೀ ಅವರ ೪೮೪ನೆಯ ಜಯಂತಿಮಹೋತ್ಸವದಲ್ಲಿ ಭಾವಚಿತ್ರಕ್ಕ ಪುಷ್ಪ ನಮನಸಲ್ಲಿಸಿ ಅವರು ಮಾತನಾಡಿದರು.
ಮೇವಾಡದ ದೊರೆ ರಾಣಾಪ್ರತಾಪರ ವಂಶಜರೆಂಬುದು ರಜಪೂತ ಸಮುದಾಯಕ್ಕೆ ಅಭಿಮಾನದ ಸಂಗತಿ. ಪ್ರಬಲ ಮೊಘಲ ಸಾಮ್ರಾಜ್ಯವನ್ನು ಹಿಮ್ಮೆಟ್ಟಿಸಿದ ಹಿರಿಮೆ ಅವರದು. ಅವರ ಬಲಿದಾನ, ತ್ಯಾಗ, ಧರ್ಮನಿಷ್ಠೆ, ದೇಶಭಕ್ತಿ ನಮಗೆಲ್ಲಾ ಆದರ್ಶಪ್ರಾಯ. ಇವರು ರಜಪೂತರಿಗಷ್ಟೇ ಅಲ್ಲ ಎಲ್ಲ ಭಾರತೀಯರಿಗೂ ಮಾದರಿ. ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾಪುರುಷರೂ ಸೀಮಿತ ಸಮುದಾಯಕ್ಕೆ ಮಾತ್ರ ಪೂಜ್ಯನೀಯರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದರು.
ರಾಜ್ಯ ಆಳಿದ ರಜಪೂತರು ಮೂಲತಃ ಶ್ರಮಜೀವಿಗಳು. ಇಂದೂ ಸಹ ದೇಶಾದ್ಯಂತ ವ್ಯಾಪಿಸಿ ಪರಿಶ್ರಮದಿಂದ ದುಡಿದು ಬಾಳುವೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲೂ ಸೀಮಿತ ಕುಟುಂಬಗಳಿದ್ದು ಹಲವರು ಕುಲುಮೆ ಕೆಲಸ ಮಾಡುತ್ತಿದ್ದಾರೆ. ಸಾಂಸ್ಕೃತಿಕವಾಗಿ ಒಗ್ಗೂಡಲು ಅನುಕೂಲವಾಗುವಂತೆ ರಜಪೂತ ಭವನ ನಿರ್ಮಿಸಲು ಸರ್ಕಾರದ ನೆರವು ಕೊಡಿಸುವ ಭರವಸೆ ನೀಡಿದ ಶಾಸಕ ತಮ್ಮಯ್ಯ, ಅಗತ್ಯವಿರುವ ನಿವೇಶನವನ್ನು ರಿಯಾಯಿತಿ ದರದಲ್ಲಿ ಸಿಡಿಎ ಮೂಲಕ ಕೊಡಿಸುವುದಾಗಿ ನುಡಿದರು.
ಶಿವಮೊಗ್ಗಜಿಲ್ಲಾ ರಜಪೂತಮಂಡಳಿಯ ಮಾಜಿಅಧ್ಯಕ್ಷ ಅನಂತರಾಮಸಿಂಗ್ ಮಹಾರಾಣಾ ಪ್ರತಾಪ್ಸಿಂಗ್ರ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ಕಂದಹಾರದಿಂದ ಬಂಗಾಳದವರೆಗೂ ವ್ಯಾಪಿಸಿದ್ದ ಬಲಿಷ್ಠ ಮೊಘಲಸಾಮ್ರಾಜ್ಯವನ್ನು ಮೇವಾಡಪ್ರಾಂತ್ಯದಲ್ಲಿ ತಡೆದವರು. ಗೋರಿಲ್ಲಾ ಮಾದರಿಯ ಯುದ್ಧದಿಂದ ಮೊಘಲರ ಪ್ರಬಲ ಸೈನ್ಯವನ್ನು ಹಿಮ್ಮೆಟ್ಟಿಸಿದ ಪರಾಕ್ರಮಿ. ಮುಂದೆ ಶಿವಾಜಿಮಹಾರಾಜರು ಇದೇ ಮಾದರಿಯಿಂದ ಮೊಘಲರ ವಿರುದ್ಧ ಹೋರಾಡಿ ದೇಶವನ್ನು ಕಾಪಾಡಿದರೆಂದರು.
ಸಹಕಾರಿಧುರೀಣ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಮಹಾರಾಣಾಪ್ರತಾಪರ ವಂಶಜರಾಗಿರುವ ರಜಪೂತರು ಈಟಿ, ಭರ್ಜಿ, ಕತ್ತಿ, ಗುರಾಣಿ ಮತ್ತಿತರ ಯುದ್ಧ ಸಲಕರಣೆಯನ್ನು ತಯಾರಿಕೆಯಲ್ಲಿ ಪರಿಣಿತಿ ಪಡೆದವರು ಮುಂದೆ ಕುಲುಮೆ ಕೆಲಸದಲ್ಲಿ ಕ್ಷಮತೆತೋರಿ ಬದುಕು ಕಟ್ಟಿಕೊಂಡಿದ್ದಾರೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸ್ವಾಭಿಮಾನದಿಂದ ಇರುವ ಸ್ಥಳದಲ್ಲಿ ಪರಿಸರ-ಪರಿಸ್ಥಿತಿಗೆ ಹೊಂದಿಕೊಂಡು ಬದುಕು ನಡೆಸುತ್ತಿರುವ ರಜಪೂತರು ಸಮಾಜಕ್ಕೆ ಉತ್ತಮ ಸಂದೇಶ ಕೊಡುಗೆ ನೀಡಿಕೊಂಡು ಬಂದಿದ್ದಾರೆಂದರು.
ಸಮಾಜಸೇವಕ ಎಚ್.ಸಿ.ಶಶಿಪ್ರಸಾದ ಮಾತನಾಡಿ ರಾಣಾಪ್ರತಾಪ ಪರಾಕ್ರಮದಿಂದ ಸೈನ್ಯಕಟ್ಟಿ ಮೇವಾಡವನ್ನು ಮರುಸ್ಥಾಪಿಸಿದ ಮಹಾಸಾಹಸಿಗ. ಅವರ ಹೆಸರಿನಲ್ಲಿ ಅಂಚೆಚೀಟಿ, ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ದೇಶ ಸದಾ ಸ್ಮರಿಸುತ್ತಿದೆ. ಅವನ ಕುದುರೆ ಚೇತಕ್ ಪುತ್ಥಳಿಯನ್ನು ಕೇಂದ್ರಸರ್ಕಾರ ಇತ್ತೀಚಿಗೆ ಸ್ಥಾಪಿಸಿ ಗೌರವಿಸಿದೆ. ಜಯಂತಿ ಸಂಭ್ರಮಿಸುತ್ತಿರುವುದು ಸ್ಮರಣೀಯ ಎಂದರು.
ಜಿಲ್ಲಾರಜಪೂತ ಮಂಡಳಿ ಅಧ್ಯಕ್ಷ ಎಸ್.ಎ.ಶಂಕರಸಿಂಗ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ೧೯೮೨ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಸಂಘ ಅನೇಕ ಚಟುವಟಿಕೆಗಳನ್ನು ನಡೆಸಿಕೊಂಡು ಇತಿಮಿತಿಯಲ್ಲಿ ಕೆಲಸ ಮಾಡುತ್ತಿದೆ. ಏಳೆಂಟು ವರ್ಷಗಳಿಂದ ರಾಣಾಪ್ರತಾಪರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಮುಕ್ತಿಧಾಮ ಚಿತಾಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾಗ್ಯಮ್ಮ ಜೊತೆಗೆ ಎಲ್ಲ ಮುಖ್ಯಅತಿಥಿಗಳನ್ನು ಇದೇ ಸಂದರ್ಭದಲ್ಲಿ ರಜಪೂತ ಮಂಡಳಿಯಿಂದ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಹರೀಶಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ೪೦ವರ್ಷಗಳ ಹಿಂದೆ ಆರಂಭಗೊಂಡು ಕೆಲವರ್ಷಗಳಿಂದ ಸ್ಥಗಿತಗೊಂಡಿದ್ದ ಸಂಘ ದಶಕಗಳಿಂದ ಕ್ರಿಯಾಶೀಲವಾಗಿದೆ. ಪ್ರತಿಭಾಪುರಸ್ಕಾರ, ಶಾಲಾಮಕ್ಕಳ ಪಠ್ಯಕ್ಕೆ ಸಂಬಂಧಪಟ್ಟ ಸಲಕರಣೆಗಳನ್ನು ನೀಡುತ್ತಿದೆ. ಸಂಘದ ಸದಸ್ಯರು ಮೃತಪಟ್ಟಾಗ ಅಂತ್ಯಕ್ರಿಯೆಗೆ ೩,೦೦೦ರೂ.ನೀಡುವುದರ ಜೊತೆಗೆ ಸಾಂತ್ವನ ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುವ ಆಶಯವಿದ್ದು ಎಲ್ಲ ಸದಸ್ಯರೂ ಸಕ್ರಿಯವಾಗಿ ಸಹಕರಿಸಬೇಕೆಂದರು.
ಖಜಾಂಚಿ ಬಿ.ಹರಿಸಿಂಗ್ ಸ್ವಾಗತಿಸಿ, ಉಪಾಧ್ಯಕ್ಷೆ ಹೇಮಾವತಿರಾಜುಸಿಂಗ್ ವಂದಿಸಿದರು. ಸಂಘಟನಾಕಾರ್ಯದರ್ಶಿ ಗೀತಾಪ್ರಕಾಶಸಿಂಗ್ ಪ್ರಾರ್ಥಿಸಿ, ಶಿಕ್ಷಕಿ ಲತಾಸಿಂಗ್ ಕಾರ್ಯಕ್ರಮ ನಿರೂಪಿಸಿದರು. ನಿನ್ನೆ ಸಂಜೆ ಮಹಿಳೆಯರಿಗಾಗಿ, ಇಂದು ಬೆಳಗ್ಗೆ ಪರುಷರು ಹಾಗೂ ಮಕ್ಕಳಿಗಾಗಿ ವಿವಿಧ ಆಟೋಟಸ್ಪರ್ಧೆಗಳನ್ನು ಏರ್ಪಡಿದ್ದು ಚಂದ್ರಕಲಾ ಮತ್ತು ಗೀತಾಸಿಂಗ್ ಬಹುಮಾನ ವಿತರಿಸಿದರು.
ಗೌರವಾಧ್ಯಕ್ಷರಾದ ತಾರಾಸಿಂಗ್ ಮತ್ತು ರಣಜಿತ್ ಸಿಂಗ್, ನಿರ್ದೇಶಕರುಗಳಾದ ಕಾಲೂಸಿಂಗ್, ನೇಮ್ಸಿಂಗ್, ಶೇಖರ್ ಸಿಂಗ್, ಧರ್ಮಸಿಂಗ್, ಕುಮಾರ್ಸಿಂಗ್, ಭೀಮ್ಸಿಂಗ್, ನೇಮ್ಸಿಂಗ್ ನೇತೃತ್ವದಲ್ಲಿ ಅಲಂಕೃತ ಮಹಾರಾಣಾ ಪ್ರತಾಪ್ಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
484th birth anniversary of national hero Maharana Pratap Singhji