ಚಿಕ್ಕಮಗಳೂರು: ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿರುವ ಬಗ್ಗೆ ಸಂಸದೆ ಶೋಭಾಕರಂದ್ಲಾಜೆ ಅವರು ಶ್ವೇತ ಪತ್ರ ಹೊರಡಿಸುವಂತೆ ಕೆ.ಪಿ.ಸಿ.ಸಿ. ವಕ್ತಾರ ರವೀಶ್ ಕ್ಯಾತನಬೀಡು ಆಗ್ರಹಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಕೇಂದ್ರ ಸಚಿವೆಯಾಗಿರುವ ಇವರು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರದ ಮಂತ್ರಿಯಾಗಿ ಈ ಜಿಲ್ಲೆಗೆ ಯಾವ ಉಪಯುಕ್ತ ಯೋಜನೆಯನ್ನೂ ತರದ ಶೋಭಾ ಕರಂದ್ಲಾಜೆ ಅವರ ನಡುವಳಿಕೆ ಜಿಲ್ಲೆಯ ಜನರಿಗೆ ಭ್ರಮನಿರಸನವನ್ನು ತಂದಿದೆ. ಕಳೆದ ಬಾರಿ ಸ್ವಪಕ್ಷದವರೇ ಗೋ ಬ್ಯಾಕ್ ಶೋಭಾ ಎಂದಿದ್ದು ಈ ಜಿಲ್ಲೆಗೆ ಚರಿತ್ರೆಯಲ್ಲಿ ದಾಖಲಾಗಿದೆ ಎಂದರು.
ಸಿನಿಮಾದಲ್ಲಿ ಬರುವ ಅತಿಥಿ ನಟರಂತೆ ಚಿಕ್ಕಮಗಳೂರಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಖಂಡಿಸಿದ ಅವರು ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಪ್ರಶ್ನಿಸುವ ತಾವು ತಮ್ಮ ರಾಜಕೀಯ ಜೀವನದಲ್ಲಿ ಎಷ್ಟು ನೈತಿಕವಾಗಿದ್ದೀರಿ ಎಂಬುದನ್ನು ಚರ್ಚೆಗೊಳಪಡಿಸಿ. ನಿಮ್ಮ ಪಕ್ಷದವರೇ ಆದ ಡಿ.ಸಿ. ಶ್ರೀಕಂಠಪ್ಪನವರು ಉಳಿಸಿಕೊಂಡ ಗೌರವವನ್ನು ಕಿಂಚಿತ್ತೂ ಉಳಿಸಿಕೊಳ್ಳಲಾಗದ ತಾವು ಮೊಸರು ತಿಂದು ಇನ್ನೊಬ್ಬರ ಬಾಯಿಗೆ ಒರೆಸುವ ನಡುವಳಿಕೆ ಎಂದು ಆರೋಪಿಸಿದರು.
ಅತಿವೃಷ್ಠಿ, ಅನಾವೃಷ್ಠಿ ಆದಾಗ ಜಿಲ್ಲೆಯ ಸಮಸ್ಯೆಗಳನ್ನು ಕುರಿತು ಮಾತನಾಡದ ನೀವು ಚುನಾವಣೆ ಬಂದಾಗ ಮಾತ್ರ ಮಾತನಾಡುತ್ತೀರಿ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಯಾವ ನೀರಾವರಿ ಬಗ್ಗೆ ಎಂದೂ ಚರ್ಚಿಸದ ನೀವು ಯಾವ ನೀರಾವರಿ ಬಗ್ಗೆ ಎಂದೂ ಚರ್ಚಿಸದ ನೀವು ಈ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಒತ್ತುವರಿ, ಕಾಫಿ, ಅಡಿಕೆ, ತೆಂಗು ಇತರೆ ವಿಚಾರಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ನಿಮ್ಮ ನಡುವಳಿಕೆಯನ್ನು ನೋಡಿದರೆ ತಾವೇ ಮುಂದಿನ ಚುನಾವಣೆಗೆ ಹೆದರಿ ಒಂದು ಹೆಜ್ಜೆ ದೂರ ಇಟ್ಟಂತೆ ಕಾಣುತ್ತಿದೆ. ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಸಂಸದರ ಮತ್ತು ಕೇಂದ್ರ ಮಂತ್ರಿಗಳ ಸ್ಥಾನಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದನ್ನು ನಿಮ್ಮ ಪಕ್ಷ ಕಲಿಸಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ ಎಂದರು.
ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಜನರ ವಿಶ್ವಾಸ ಕಳೆದುಕೊಂಡಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ನಿಮ್ಮ ತಾರತಮ್ಯ ನೀತಿಯಿಂದ ಜನತೆ ನಿಮ್ಮನ್ನು ಮನೆಗೆ ಕಳಿಸಿದ್ದಾರೆ ೧೯ ವರ್ಷದ ಆಡಳಿತದಲ್ಲಿ ಜಿಲ್ಲೆ ಕ್ಷೇತ್ರದ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಸವನಹಳ್ಳಿಕೆರೆ, ಕೋಟಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಹಣ ಹೊಡೆದಿರುವುದು ಎಲ್ಲರಿಗೂ ತಿಳಿದ ವಿಷಯ ಈ ಬಗ್ಗೆ ಆ
ತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ತನೂಜ್ಕುಮಾರ್ , ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎನ್.ಡಿ. ಚಂದ್ರಪ್ಪ, ಮುಖಂಡರಾದ ದಯಾನಂದ್, ವಿಜಯಕುಮಾರ್, ರಮೇಶ್ ಇದ್ದರು.
Congress demands a white paper on the development of MP’s district