ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ೬ ನೇ ಗ್ಯಾರಂಟಿಯಾಗಿ ಶಾಲಾ ಕಾಲೇಜು ಬಿಸಿಯೂಟ ಕಾರ್ಯಕರ್ತೆಯರಿಗೆ ೬ ಸಾವಿರ ರೂ ಮಾಸಿಕ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡದಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಜು.೨೬ ರಂದು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಷನ್(ಎಐಟಿಯುಸಿ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬಿಸಿಯೂಟ ಕಾರ್ಯಕರ್ತೆಯರಿಗೆ ಭವಿಷ್ಯ ನಿಧಿ(ಪಿ.ಎಫ್) ಇಎಸ್ಐ ಹಾಗೂ ಉದ್ಯೋಗ ಭದ್ರತೆ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಂದು ಜಿಲ್ಲೆಯಾದ್ಯಂತ ಬಿಸಿಯೂಟ ಬಂದ್ಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಸುಮಾರು ೧.೨೦ ಲಕ್ಷ ಮಹಿಳೆಯರು ಸೇವೆಸಲ್ಲಿಸುತ್ತಿದ್ದು ಜಿಲ್ಲೆಯಲ್ಲಿ ೨ ಸಾವಿರ ಬಿಸಿಯೂಟ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದಾರೆ ಕಾಂಗ್ರೆಸ್ ಪಕ್ಷ ೬ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದ ನಂತರ ಸಂಘಟನೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಲಾಗಿತ್ತು ಎಂದು ವಿವರಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತಗಳಿಸಿ ಅಧಿಕಾರಕ್ಕೆ ಬಂದಿದ್ದು, ನೀಡಿದ ಭರವಸೆಯಂತೆ ಸರ್ಕಾರದ ಮೊದಲ ಬಜೆಟ್ನಲ್ಲಿ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸುವ ನಿರೀಕ್ಷೆ ಇತ್ತು, ಆದರೆ ಈ ಬಗ್ಗೆ ಯಾವುದೇ ಘೋಷಣೆ ಅಥವಾ ಕ್ರಮ ಕೈಗೊಳ್ಳದಿರುವುದು ಸಂಘಟನೆಗೆ ನಿರಾಸೆ ತಂದಿದೆ ಎಂದು ವಿಷಾಧಿಸಿದರು.
ಸುಮಾರು ೨೦ ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಕೇವಲ ರೂ.೩೭೦೦/- ಗಳನ್ನು ಮಾತ್ರ ನೀಡಲಾಗುತ್ತಿದ್ದು, ಸುಮಾರು ೯ ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಬೇಕಾಗಿದ್ದ ಶೇಕಡಾ ೬೦ ರಷ್ಟು ವೇತನವನ್ನು ಬಿಡುಗಡೆಗೊಳಿಸದೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ರೀತಿಯಲ್ಲಿ ರಾಜ್ಯ ಸರ್ಕಾರವು ಮಾಡುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇಮಕ ಮಾಡಿಕೊಂಡಿದ್ದ ಕಾರ್ಯಕರ್ತೆಯರನ್ನು ಹಲವಾರು ವರ್ಷಗಳ ಸೇವೆಯನ್ನು ಕಡೆಗಣಿಸಿ ಮಕ್ಕಳ ಸಂಖ್ಯೆ ನೆಪ ಹೇಳಿ ತೆಗೆದುಹಾಕಲಾಗುತ್ತಿದೆ ಎಂದು ದೂರಿದರು.
೬೦ ವರ್ಷ ತುಂಬಿದ ಕಾರ್ಯಕರ್ತೆಯರಿಗೆ ಯಾವುದೇ ಉಪಧನ ನೀಡದೆ ನಿವೃತ್ತಿ ವೇತನ ಘೋಷಿಸದೇ ಮನೆಗೆ ಕಳುಹಿಸಲಾಗುತ್ತಿದೆ. ಇದರಿಂದ ವಯೋನಿವೃತ್ತಿ ಹೊಂದಿದ ಬಿಸಿಯೂಟ ಕಾರ್ಯಕರ್ತೆಯವರ ಬದುಕು ಹಿನಾಯ ಸ್ಥಿತಿ ತಲುಪುತ್ತಿದೆ. ಕಾರ್ಯಕರ್ತೆಯರು ಅಕಾಲಿಕ ಮರಣ ಹೊಂದಿದರೆ ಅವರಿಗೆ ಶವಸಂಸ್ಕಾರಕ್ಕೂ ಸಹ ಬಿಡಿಗಾಸು ನೀಡದೆ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ತಾಲ್ಲೂಕು ಸಂಘಟನೆ ಅಧ್ಯಕ್ಷೆ ಇಂದುಮತಿ, ಕಡೂರು ಪುಷ್ಪ, ಕಾರ್ಯದರ್ಶಿ ಸ್ವಪ್ನ, ತರೀಕೆರೆ ಚಂದ್ರಮ್ಮ, ಶಮೀನಾಭಾನು ಮತ್ತಿತರರು ಉಪಸ್ಥಿತರಿದ್ದರು.
26 July protest by Bisiuta workers