ಶೃಂಗೇರಿ: ಶೃಂಗೇರಿಯಲ್ಲಿ ಬಿಡದೆ ಬರುತ್ತೀದ್ದ ಗಾಳಿ, ಮಳೆಯು ಸೋಮವಾರವು ಮುಂದುವರೆದು ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ. ಮಳೆಯಿಂದ ತಾಲ್ಲೂಕಿನ ನಾನಾ ಭಾಗಗಳಲ್ಲಿ ತುಂಬಾ ಹಾನಿಯಾಗಿದೆ. ಶೃಂಗೇರಿಯ ಸೋಬಗನ್ನು ಸವಿಯಲು ಹಾಗೂ ಶಾರದ ಪೀಠದ ದರ್ಶನ ಪಡೆಯಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ ಆದರೆ ಭಾರಿ ಮಳೆಯಿಂದ ಜನರು ದಿಕ್ಕೆಟ್ಟಿದ್ದಾರೆ.
ಜಡಿ ಮಳೆಯಿಂದ ತಾಲ್ಲೂಕಿನ ಜಲಪಾತಗಳಾದ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿದೆ. ಹಳ್ಳಕೊಳ್ಳಗಳು, ಭತ್ತದಗದ್ದೆಗಳು ನೀರಿನಿಂದ ಆವೃತ್ತಗೊಂಡಿದೆ. ತುಂಗಾನದಿ ಉಕ್ಕಿ ಹರಿದು ಶಾರದ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮಿಜೀಯವರ ಸ್ನಾನ ಘಟ್ಟ ಹಾಗೂ ಸಂದ್ಯಾವಂದನೆ ಮಂಟಪ ಮುಳುಗಿದೆ. ನದಿ ಉಕ್ಕಿ ಹರಿಯುವಾಗ ಕಾಳಿಂಗ ಸರ್ಪದಂತಹ ಜೀವ ಜಂತುಗಳು, ಮರದ ದಿಮ್ಮಿಗಳು ತೆಲಾಡುತ್ತಿದ್ದವು.
ಮರ್ಕಲ್ನ ಕೊಗೋಡಿನಲ್ಲಿ ವಿದ್ಯುತ್ ತಂತಿಯ ಮೇಲೆ ಅಡಿಕೆ ಮರ ಬಿದ್ದಿದೆ. ಶೃಂಗೇರಿಯಿಂದ ಉಡುಪಿಗೆ ಸಂಪರ್ಕ ಕಲ್ಪಿಸುವ ನೆರಳಕೊಡಿಯಲ್ಲಿ ಧರೆ ಕುಸಿದಿದೆ. ಮಳೆಯಿಂದ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಮೇಗಳಬೈಲ್ನಲ್ಲಿ ೨ ಕಂಬ, ಕೋಡಿಗೆಮಕ್ಕಿಯಲ್ಲಿ ೩ ಕಂಬ, ಮರಿಗೆಬೈಲ್ನಲ್ಲಿ ೩ ಕಂಬ, ಕೆರೆಕಟ್ಟೆಯಯ ಕಾರ್ಕಿಯಲ್ಲಿ ೪ ಕಂಬ ಧರೆಗೆ ಉರುಳಿವೆ. ಕುರುಬಕೇರಿಯ ರಸ್ತೆಯಲ್ಲಿರುವ ಅಂಗಡಿಗಳಿಗೆ ತುಂಗಾ ನದಿಯ ನೀರು ನುಗ್ಗಿದೆ.
ತಾಲ್ಲೂಕಿನ ಜಡಿ ಮಳೆಯಿಂದ ಹಲವು ಕಡೆ ನೀರಿನಿಂದ ಆವೃತ್ತಗೊಂಡು ರಾಷ್ಟ್ರೀಯ ಹೆದ್ದಾರಿ ೧೬೯ರ ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆಯಲ್ಲಿ ತುಂಗಾನದಿ ಉಕ್ಕಿ ಹರಿದು ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.
ಮಳೆ ಇದೇ ರೀತಿ ಮುಂದುವರೆದರೆ ಪ್ರಮುಖ ರಸ್ತೆಗಳಾದ ಶೃಂಗೇರಿ ಶಿವಮೊಗ್ಗ ಮಾರ್ಗದ ರಸ್ತೆ, ತೆಕ್ಕೂರು ಮಾರ್ಗದ ಕಲ್ಕಟ್ಟೆಯ ರಸ್ತೆ ನೀರಿನಿಂದ ಮುಳುಗುವ ಸಾಧ್ಯತೆ ಇದೆ. ಇಲ್ಲಿರುವ ೪೯ ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಮೊದಲಾದ ಗ್ರಾಮಗಳು ಪಟ್ಟಣದಿಂದ ೨೫ ರಿಂದ ೩೦ ಕಿಲೋಮೀಟರ್ ದೂರವಿದೆ.
ಮಳೆಯಿಂದ ಅನಾರೋಗ್ಯ, ಅಪಘಾತ ಸಂಭವಿಸಿದರೆ ಅಸ್ಪತ್ರೆಗೆ ಬರಲು ಜನರು ಹರಸಾಹಸ ಪಡಬೇಕಿದೆ. ಕಾರಣ ಅಸಮರ್ಪಕವಾದ ರಸ್ತೆಗಳು ಇರುವುದರಿಂದ ಮಳೆಯಲ್ಲಿ ವಾಹನವನ್ನು ಕೊಂಡಯ್ಯಲು ಕಷ್ಟವಾಗಿದೆ. ಪ್ರವಾಹದಿಂದ ಯಾರು ದಿಕ್ಕೆಡಬಾರದೆಂದು ತಹಶೀಲ್ದಾರ್ ಗೌರಮ್ಮ, ಸಬ್ ಇನ್ಸ್ಪೆಕ್ಟರ್ ಭರಮಪ್ಪ ಬೆಳಗಲಿ, ಅಗ್ನಿಶಾಮಕ ಸಿಬ್ಬಂದಿಯವರು, ತಾಲ್ಲೂಕಿನ ಬಗ್ಗೆ ತೀವ್ರ ಕಟ್ಟೇಚ್ಚರ ವಹಿಸಿದ್ದಾರೆ.
Threat of rising Tunganadi flood in Sringeri