ಚಿಕ್ಕಮಗಳೂರು: ನಾಡಿನ ಜಿಲ್ಲಾ, ತಾಲ್ಲೂಕು ಛಾಯಾಗ್ರಾಹಕರ ಸಂಘಗಳ ಸಹಯೋಗದಲ್ಲಿ ಇದೇ ಸೆಪ್ಟೆಂಬರ್ ೭ ರಿಂದ ೯ ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಜಿ ಇಮೇಜ್ ನಮ್ಮ ಇಮೇಜ್ ಎಂಬ ೯ನೇ ಅಂತರಾಷ್ಟ್ರೀಯ ವಸ್ತು ಪ್ರದರ್ಶನವನ್ನು ಏರ್ಪಡಿಲಾಗುವುದು ಎಂದು ಛಾಯಾ ಚಿತ್ರ ಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಪರಮೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಛಾಯಾ ಗ್ರಾಹಕರೇ ಆಯೋಜಿಸಿರುವ ದಕ್ಷಿಣ ಭಾರತದ ಅತಿ ದೊಡ್ಡ ವಸ್ತು ಪ್ರದರ್ಶನ ಇದಾಗಿದ್ದು, ಇದರ ಅಂಗವಾಗಿ ಜಿಲ್ಲೆ ಎಲ್ಲಾ ತಾಲ್ಲೂಕುಗಳಲ್ಲಿ ಹಾಗೂ ರಾಜ್ಯಾದ್ಯಂತ ಏಕತಾಯಾತ್ರೆ ನಡೆಯಲಿದೆ ಎಂದು ವಿವರಿಸಿದರು.
ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ, ರಾಜ್ಯ ಮಟ್ಟದ ಬೃಹತ್ ಸಮಾವೇಶ, ಕೆಪಿಎ ವತಿಯಿಂದ ತಂತ್ರಜ್ಞಾನದ ಕಾರ್ಯಾಗಾರ ಹೀಗೆ ಹಲವಾರು ಕಾರ್ಯಕ್ರಮಗಳ ಗುರಿ ಹೊಂದಲಾಗಿದೆ. ಈ ಎಲ್ಲಾ ಯೋಜನೆಗಳಿಗೆ ಅಡಿಪಾಯವಾಗಿ ಇದೀಗ ಆಯೋಜಿಸುತ್ತಿರುವ ಡಿಜಿ-ಇಮೇಜ್ ೨೦೨೩ ನಮ್ಮ ದೇಶದ ಬಹು ನಿರೀಕ್ಷಿತ ಪ್ರದರ್ಶನವಾಗಿದೆ ಎಂದರು.
ಪ್ರತಿಷ್ಠಿತ ಆಕಾರ್ ಸಂಸ್ಥೆಯೊಂದಿಗೆ ಪ್ರದರ್ಶನ ಆಯೋಜಿತವಾಗುತ್ತಿದೆ. ಸೋನಿ, ನಿಕಾನ್, ಫ್ಯೂಜಿಯಂತಹ ದಿಗ್ಗಜ ಕಂಪನಿಗಳು ನೇರವಾಗಿ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಈ ಪ್ರದರ್ಶನ ಕೇವಲ ಒಂದು ವಸ್ತು ಪ್ರದರ್ಶನ ಮಾತ್ರವಾಗಿರದೆ ನಾಡಿನ ಛಾಯಾಗ್ರಾಹಕರ ಒಗ್ಗಟ್ಟಿನ ಸವಾಲಿನ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
೯ನೇ ವರ್ಷದ ವಸ್ತು ಪ್ರದರ್ಶನಕ್ಕೆ ನಮ್ಮ ನಿಮ್ಮೆಲ್ಲರ ಆತ್ಮವಿಶ್ವಾಸ, ವಾಣಿಜ್ಯಾಭಿವೃದ್ಧಿ, ಆಂತರಿಕ ಶಕ್ತಿ, ಬುದ್ಧಿವಂತಿಕೆ, ಸಾಮಾಜಿಕ ಸ್ಥಾನಮಾನ, ಮಾನವೀಯ ಕಾಳಜಿ, ಸಂಘಟನಾ ಶಕ್ತಿ ಮತ್ತು ಶಾಂತಿಯನ್ನು ಪ್ರತಿಧ್ವನಿಸುತ್ತದೆ. ಕೆಪಿಎ ಸಾದರಪಡಿಸುತ್ತಿರುವ ವಸ್ತು ಪ್ರದರ್ಶನದಲ್ಲಿ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಿಜಿ ಇಮೇಜ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ, ಪ್ರಧಾನ ಕಾರ್ಯದರ್ಶಿ ರೇಣುಕ, ತಾಲ್ಲೂಕು ಉಪಾಧ್ಯಕ್ಷ ಎಸ್.ಕೆ.ರವಿ, ಕಡೂರು ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಜಂಟಿ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
- ಡಿಜಿ ಇಮೇಜ್-೨೦೨೩ ರ ವೈಶಿಷ್ಟ್ಯಗಳು
ಬ್ರ್ಯಾಂಡೆಡ್ ಕಂಪನಿಗಳಾದ ಸೋನಿ, ಕೆನಾನ್, ನಿಕಾನ್, ಪ್ಯಾನಾಸೋನಿಕ್, ಫ್ಯೂಜಿ, ಕೊಡಾಕ್, ಗೋಡೆಕ್ಸ್, ಟ್ಯಾಮರಾನ್, ಎಲ್.ಇ.ಡಿ, ಪ್ರಿಂಟರ್ಸ್, ಡಿಸ್ಪ್ಲೇ ಪ್ರಾಡಕ್ಟ್ಸ್, ಎಡಿಟಿಂಗ್ ಸಾಫ್ಟ್ವೇರ್ಸ್, ಲೈವ್ ಸ್ಟ್ರೀಮಿಂಗ್ ಮುಂತಾಗಿ ೧೫೦ ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ನೇರವಾಗಿ ಭಾಗವಹಿಸುತ್ತಿವೆ. ೨೦೦೦ಕ್ಕೂ ಅಧಿಕ ಛಾಯಾಗ್ರಾಹಣ ಸಲಕರಣೆಗಳನ್ನು ಪ್ರದರ್ಶಿಸಲಾಗುತ್ತಿದೆ. ಕೆಲವು ಅಂತರಾಷ್ಟ್ರೀಯ ಕಂಪನಿಗಳ ಹೊಸ ಕ್ಯಾಮರಾ ಸಲಕರಣಿಗಳ ಲಾಂಚಿಂಗ್ ಸಹ ನಡೆಯಲಿದೆ. - ಮೂರು ದಿನಗಳು ಕೆಪಿಎ ಅಜೀವ ಸದಸ್ಯರ ನೊಂದಣಿ ಅಭಿಯಾನ ಹಾಗೂ ಅಭಯ ಹಸ್ತ ಯೋಜನೆಯ ನವೀಕರಣದ ವಿಶೇಷ ಕೌಂಟರ್ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಹೆಸರಾಂತ ಛಾಯಾಗ್ರಾಹಣ ತಂತ್ರಜ್ಞರಿಂದ ಮೂರು ದಿನಗಳ ಉಚಿತ ಕಾರ್ಯಾಗಾರಗಳನ್ನು ಆಯೋಜನೆ ಮಾಡಲಾಗಿದೆ. - ರಾಜ್ಯದ ಪ್ರತಿ ಜಿಲ್ಲೆಯಿಂದ ಆಯ್ಕೆಗೊಂಡ ವೃತ್ತಿಸಾಧಕರಿಗೆ ಛಾಯಾ ಸಾಧಕ ವಿಶೇಷ ಪ್ರಶಸ್ತಿ ಪ್ರಧಾನವಿದೆ.
- ಪ್ರತೀ ತಾಲ್ಲೂಕಿನ ಇಬ್ಬರು ಛಾಯಾ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
- ಮೂರು ದಿನಗಳು ಲಕ್ಕಿಡ್ರಾ ಮಾಡಿ, ವಿಜೇತರಿಗೆ ಸ್ಥಳದಲ್ಲೇ ಬಹುಮಾನ ನೀಡಲಾಗುವುದು.
- ಪ್ರದರ್ಶನಕ್ಕೆ ಆಗಮಿಸುವ ಎಲ್ಲಾ ವೃತ್ತಿಬಾಂಧವರಿಗೆ ಮೂರೂ ದಿನಗಳು ಕೆಪಿಎ ವಿಶೇಷವಾಗಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.
- ಮೂರು ದಿನಗಳು ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆ.
- ಮೊಬೈಲ್ ಎಟಿಎಂ ಕೌಂಟರ್ ಹಾಗೂ ಲಗೇಜ್ಕೌಂಟರ್ ಸೌಲಭ್ಯ ಒದಗಿಸಲಾಗುವುದು.
9th International Art Exhibition for three days from 7th September