ಚಿಕ್ಕಮಗಳೂರು: ನಿರಂತರ ಮಳೆಯಿಂದಾಗಿ ನಾಲ್ಕೈದು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರ ಮುಳ್ಳಯ್ಯನಗಿರಿಗೆ ತೆರಳದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಮಂಗಳವಾರ ಬೆಳಗ್ಗೆ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗಮಧ್ಯೆ ಸಿಗುವ ಯೂಟರ್ನ್ ಬಳಿ ಗುಡ್ಡ ಕುಸಿದು ರಸ್ತೆ ಮೇಲೆ ಮಣ್ಣು ಶೇಖರಣೆಗೊಂಡಿದೆ. ಇದರಿಂದ ದ್ವಿಚಕ್ರ ವಾಹನ ಹೊರತು ಪಡಿಸಿ ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳಗೆ ಇದೇ ಮಾರ್ಗದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ರಸ್ತೆ ಪಕ್ಕದ ಗುಡ್ಡದಲ್ಲಿ ಕುಸಿತ ಕಂಡುಬಂದಿದೆ.
ಬೆಳಗಿನಿಂದಲೇ ಲೋಕೊಪಯೋಗಿ ಇಲಾಖೆಯು ಜೆಸಿಬಿಗಳ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಇದರ ನಡುವೆ ಮಳೆ ನಿರಂತರವಾಗಿ ಸುರಿಯುತ್ತಲೇ ಇರುವುದರಿಂದಾಗಿ ಅನಾಹುತಗಳ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಪೊಲೀಸರು ಮುಂಜಾಗ್ರತೆಯಾಗಿ ಮುಳ್ಳಯ್ಯನಗಿರಿಗೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ.
ದತ್ತಪೀಠದ ರಸ್ತೆಯಿಂದ ಮುಳ್ಳಯ್ಯನಗಿರಿ ಕಡೆಗೆ ತಿರುವು ತೆಗೆದುಕೊಳ್ಳುವ ಜಾಗದಲ್ಲೇ ಬಾರಿಕೇಡ್ಗಳನ್ನು ಅಳವಡಿಸಿ, ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರವಾಸಿಗರನ್ನು ಅಲ್ಲಿಯೇ ತಡೆದು ಹಿಂದಕ್ಕೆ ಕಳಿಸಲಾಗುತ್ತಿದೆ.
ಇದರಿಂದ ನಿಸರ್ಗದ ಸೌಂದರ್ಯ ಸವಿಯಲೆಂದು ಬಂದಿದ್ದ ಸಾವಿರಾರು ಪ್ರವಾಸಿಗರು ನಿರಾಶರಾಗಿದ್ದಾರೆ. ಆದರೆ ಸುರಕ್ಷತೆಯ ದೃಷ್ಠಿಯಿಂದ ನಿರ್ಬಂಧ ಅನಿವಾರ್ಯ ಎಂದು ಪೊಲೀಸರು ಅವರಿಗೆ ಮನವರಿಕೆ ಮಾಡುತ್ತಿದ್ದಾರೆ.
District administration bans people from going to Mullaiyanagari