ಚಿಕ್ಕಮಗಳೂರು: ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿರುವ ಪತ್ರಿಕಾರಂಗ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿಪ್ರಾಯಿಸಿದರು.
ಅವರು ಶನಿವಾರ ನಗರದ ಪ್ರಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಾಧ್ಯಮ ದಿನ ನಿತ್ಯದ ಆಗು ಹೋಗುಗಳನ್ನು ಸಾರ್ವಜನಿಕರಿಗೆ ಸಂಕ್ಷಿಪ್ತವಾಗಿ ಮನ ಮುಟ್ಟುವಂತೆ ಸುದ್ದಿಗಳನ್ನು ಪ್ರಕಟಿಸುತ್ತಿರುವುದರಿಂದ ದೂರದರ್ಶನ ಸುದ್ದಿ ವಾಹಿನಿ, ಸಾಮಾಜಿಕ ಜಾಲ ತಾಣಗಳ ಪೈಪೋಟಿ ನಡುವೆಯೂ ಮಹತ್ವವನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ವಿಶ್ಲೇಷಿಸಿದರು.
ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಗಳಿಸಲು ಸಾಧ್ಯ ಎಂದು ಅವರು ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಜಿಲ್ಲಾಡಳಿತದ ಕುರಿತು ಸಮಗ್ರ ಮಾಹಿತಿಯನ್ನು ಓದುಗರಿಗೆ ತಿಳಿಸುವಲ್ಲಿ ಸಹಕಾರವಾಗಿದ್ದು ಎಲ್ಲಾ ಇಲಾಖೆಗಳಲ್ಲಿ ನಡೆಯುವ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮ ಯಶಸ್ವಿಯಾಗಿದೆ ಎಂದರು.
ಮಾಧ್ಯಮ ಮತ್ತು ಪತ್ರಕರ್ತರು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುವುದರ ಜೊತೆಗೆ ಅವರ ತಪ್ಪುಗಳನ್ನು ತಿದ್ದಿ ತೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ತಪ್ಪು ಸುದ್ದಿಗಳನ್ನು ಪ್ರಕಟಿಸುವುದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಹಲವು ತೊಂದರೆಗಳಾಗುತ್ತವೆ ಎಂದು ಎಚ್ಚರಿಸಿದರು.
ಪತ್ರಕರ್ತರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಗ್ಗೂಡಿ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಸಮಾಜದ ಜವಾಬ್ದಾರಿ ಅರಿಯಲು ಸಾಧ್ಯ ಎಂದ ಅವರು ಜಿಲ್ಲೆಯ ಅಭಿವೃದ್ಧಿಗೆ ಪತ್ರಿಕೆಗಳ ಪಾತ್ರ ಅತಿ ಮುಖ್ಯ ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರ ಅನುಭವ ಪಡೆದು ಯುವ ಪತ್ರಕರ್ತರು ಕರ್ತವ್ಯ ನಿರ್ವಹಿಸಲು ಕಿವಿ ಮಾತು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಗೆ ತನ್ನದೇ ಆದ ಸಾಹಿತ್ಯ, ಸಂಸ್ಕೃತಿ, ಪ್ರಕೃತಿ, ಪರಿಸರ ಪ್ರವಾಸೋದ್ಯಮ ಮುಂತಾದ ವೈಶಿಷ್ಠ್ಯಗಳಿದ್ದು ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪತ್ರಕರ್ತರು ಸುದ್ದಿ ಪ್ರಸಾರ ಮಾಡಬೇಕು ಜಿಲ್ಲೆಯ ಮಾಧ್ಯಮ ಇನ್ನಷ್ಟು ಉತ್ತಮ ಸ್ಥಾನಕ್ಕೆ ಹೋಗಲಿ ಎಂದು ಹಾರೈಸಿದರು.
ಮೊದಲಿಗೆ ಹೊಸದಿಗಂತ ಪತ್ರಿಕೆ ಜಿಲ್ಲಾ ವರದಿಗಾರ ಸಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕೆಗಳು ನಡೆದು ಬಂದ ದಾರಿ ಹಾಗೂ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸ್ಕ್ಲಬ್ ಅಧ್ಯಕ್ಷ ಬಿ.ಎಂ ರವಿ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಪತ್ರಕರ್ತರಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಮೊದಲಿಗೆ ಕ್ಲಬ್ನ ಪ್ರಧಾನ ಕಾರ್ಯದರ್ಶಿ ಸಿ.ಪ್ರಕಾಶ್ ಸ್ವಾಗತಿಸಿ ಛಾಯಾಚಿತ್ರ ಗ್ರಾಹಕ ಎ.ಎನ್ ಮೂರ್ತಿ ನಿರೂಪಿಸಿ ಕೊನೆಯಲ್ಲಿ ಖಜಾಂಚಿ ವೀರೇಶ್ ವಂದಿಸಿದರು.
Governance of the Press – Duty as a bridge between the public