ಬೆಂಗಳೂರು: ನಿರೀಕ್ಷೆಯಂತೆ ನಾಳೆ ಆ.01 ರಿಂದ ಅನ್ವಯವಾಗುವಂತೆ, ನಂದಿನಿಯ ಎಲ್ಲಾ ಮಾದರಿ ಹಾಲು ಮತ್ತು ಮೊಸರು ಮಾರಾಟ ದರವನ್ನು ಪ್ರತಿ ಲೀಟರ್/ ಕೆಜಿಗೆ ರೂಪಾಯಿ 3 ರಂತೆ ಪರಿಷ್ಕರಣೆ ಮಾಡಿ ಕರ್ನಾಟಕ ಹಾಲು ಮಹಾಮಂಡಳಿ (ಕೆ ಎಂ ಎಫ್) ಆದೇಶ ಹೊರಡಿಸಿದೆ.
ಟೋನ್ ಹಾಲು (ನೀಲಿ ಪೊಟ್ಟಣ)ದರ ಲೀಟರ್ ಗೆ ರೂ. 42; ಹೋಮೋಜಿನೈಸ್ಟ್ ಟೋನ್ಡ್ ಹಾಲು ಲೀಟರ್ ಗೆ ರೂ 42; ಹಸುವಿನ ಹಾಲು (ಹಸಿರು ಪೊಟ್ಟಣ)ಲೀಟರ್ ಗೆ ರೂ. 46; ಶುಭಂ (ಕೇಸರಿ ಮೊಟ್ಟಣ) /ಸ್ಪೆಷಲ್ ಹಾಲು ಲೀಟರ್ ಗೆ ರೂ. 48 ನಿಗದಿಪಡಿಸಲಾಗಿದೆ. ಮೊಸರು, ಪ್ರತಿ ಕೆಜಿಗೆ ರೂ. 46; ಪ್ರತಿ 200 ಮಿಲಿ ಮಜ್ಜಿಗೆ ಪೊಟ್ಟಣ 9 ರೂಪಾಯಿಗೆ ಏರಿಕೆಯಾಗಿದೆ.
ಈ ಎಲ್ಲ ಉತ್ಪನ್ನಗಳ ಹಿಂದಿನ ಬೆಲೆ 3 ರೂಪಾಯಿ ಕಡಿಮೆ ಇರುತ್ತದೆ. 200 ಮಿಲಿ ಮಜ್ಜಿಗೆ ಪೊಟ್ಟಣಕ್ಕೆ ಹಳೆಯ ದರ 8 ರೂಪಾಯಿಯಾಗಿರುತ್ತದೆ ಎಂದು ಕೆ ಎಂ ಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಎಂ.ಕೆ. ಸಮರ್ಥಿಸಿಕೊಂಡಿದ್ದಾರೆ.
ಹಾಲಿನ ಮಾರಾಟ ದರ ಹೆಚ್ಚಳದ ನಂತರವೂ, ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಹಾಲಿನ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ (42 ರೂಪಾಯಿ) ಕಡಿಮೆಯೇ ಆಗಿರುತ್ತದೆ. ಇದೇ ಹಾಲಿಗೆ ಕೇರಳದಲ್ಲಿ 50,ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ದಲ್ಲಿ 54 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಟೋನ್ಡ್ ಹಾಲಿನ ಮಾರಾಟ ದರ 56 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಕೆ ಎಂ ಎಫ್ ಹಾಲಿನ ದರ ಹೆಚ್ಚಳ ವನ್ನು ಸಮರ್ಥಿಸಿಕೊಂಡಿದೆ.
2022 ನೇ ಸಾಲಿನಲ್ಲಿ ರಾಜ್ಯದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಮೇವಿನ ಅಲಭ್ಯತೆ ಮತ್ತು ಜಾನುವಾರುಗಳಲ್ಲಿ ಉಂಟಾದ ಚರ್ಮಗಂಟು ರೋಗ, ಹಾಲಿನ ಮಾರಾಟ ದರ ಹೆಚ್ಚಳದ ವಿಳಂಬ ಮತ್ತು ಪಶು ನಿರ್ವಹಣಾ ವೆಚ್ಚ ಹೆಚ್ಚಳ ಮತ್ತಿತರ ಕಾರಣಗಳಿಂದ 35 ಸಾವಿರಕ್ಕೂ ಹೆಚ್ಚು ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.
ಈ ಕಾರಣಗಳಿಂದಾಗಿ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ಶೇಖರಣೆ ದಿನವೊಂದಕ್ಕೆ ಅಂದಾಜು 10 ಲಕ್ಷ ಲೀಟರ್ ಕಡಿಮೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರನ್ನು ಉತ್ತೇಜಿಸಲು ಹಾಲು ಖರೀದಿ ದರ ಹೆಚ್ಚಳ ಅನಿವಾರ್ಯವಾಗಿತ್ತು.
ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಭೀಮಾನಾಯ್ಕ ಮತ್ತು ಮಹಾಮಂಡಳದ ನಿರ್ದೇಶಕರು ಹಾಗೂ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರುಗಳೊಂದಿಗೆ ಜು.21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಹಾಲಿನ ದರ ಹೆಚ್ಚಳ ಕುರಿತು ಚರ್ಚೆ ನಡೆಸಲಾಗಿತ್ತು
3 per liter of milk from tomorrow. increase