ಚಿಕ್ಕಮಗಳೂರು: ಪೋಷಕರ ಇಂಗ್ಲಿಷ್ ವ್ಯಾಮೋಹದಿಂದಾಗಿ ರಾಜ್ಯಾದ್ಯಂತ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರಗಳು ಗಮನ ಹರಿಸಬೇಕೆಂದು ಕೆ.ಆರ್.ಪೇಟೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನವನೀತ್ ಕೆ.ಎನ್ ತಿಳಿಸಿದರು.
ಅವರು ಇಂದು ತಾಲ್ಲೂಕಿನ ಕೆ.ಆರ್ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೇ ವಿದ್ಯಾರ್ಥಿ ಸಂಘ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ಕಲಿತ ಶಾಲೆಯಿಂದ ಅನೇಕರು ಉನ್ನತ ಹುದ್ದೆಗೆ ಹೋಗಿದ್ದಾರೆ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ಸರ್ಕಾರಿ ಶಾಲೆಯಲ್ಲಿಯೇ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿಸಬೇಕು, ಗುಣಮಟ್ಟದ ಶಿಕ್ಷಣ ದೋರೆಯುವುದರ ಜೊತೆಗೆ ಸರ್ಕಾರದ ಅನೇಕ ಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದರು.
ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಈ ಶಾಲೆಗೆ ವಾಹನ ವ್ಯವಸ್ಥೆಯನ್ನು ಮಾಡಲಾಗುವುದು ಸರ್ಕಾರಿ ಶಾಲೆಗಳ ಕುಂದುಕೊರತೆ ಮತ್ತು ಬಡ ವಿದ್ಯಾರ್ಥಿಗಳ ಆಗು-ಹೋಗುಗಳನ್ನು ತಿಳಿದುಕೊಂಡಿದ್ದು, ಕೇವಲ ೪೫ ವಿದ್ಯಾರ್ಥಿಗಳು ಇದ್ದ ಈ ಶಾಲೆಗೆ ಶಿಕ್ಷಕರ ಪರಿಶ್ರಮದಿಂದ ಸುತ್ತಮುತ್ತಲ ಹಳ್ಳಿಗಳನ್ನು ಭೇಟಿ ಮಾಡಿ ಪೋಷಕರನ್ನು ಮನವೊಲಿಸಿ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದು, ಎಲ್ಕೆಜಿ, ಯುಕೆಜಿ ಸಹಿತ ೧೦೮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಕೆಲವು ಶಿಕ್ಷಕರು ನಿವೃತ್ತಿಯಾಗುತ್ತಿರುವುದರಿಂದ ಮತ್ತೆ ಶಿಕ್ಷಕರ ಕೊರತೆ ಎದುರಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ನ ಮುರುಳಿ.ವಿ.ರಾವ್ ಮಾತನಾಡಿ ಸರ್ಕಾರಿ ಶಾಲೆಗಳು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಪ್ರತಿಬಿಂಬ ಟ್ರಸ್ಟ್ ರಚಿಸಿಕೊಂಡು ಈಗಾಗಲೇ ಮುಚ್ಚುವ ಹಂತ ತಲುಪಿದ್ದ ಸುಮಾರು ೧೫೦ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಈಗಿನ ವಯೋಮಾನಕ್ಕನುಗುಣವಾಗಿ ಮಕ್ಕಳಲ್ಲಿ ಕಲಿಕಾ ಪ್ರವೃತ್ತಿ ಹೆಚ್ಚಿಸಲು ಸಂಸ್ಥೆಯಿಂದ ಸರ್ಕಾರಿ ಬೆಳಸಲು ಸೇವೆ ಸಲ್ಲಿಸಲಾಗುತ್ತಿದೆ. ಈ ಶಾಲೆಗೆ ವಾಹನದ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಸಕಾಲಕ್ಕೆ ಬರಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಈ ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಈಗಾಗಲೇ ಮೂಲಭೂತ ಸೌಲಭ್ಯ ವಂಚಿತ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಸ್ಮಾರ್ಟ್ ಟಿವಿ, ಶುದ್ಧ ಕುಡಿಯುವ ನೀರಿನ ಘಟಕ, ಶಿಕ್ಷಣಕ್ಕೆ ಬೇಕಾದ ಲೇಖನ ಸಾಮಾಗ್ರಿ, ವಿವಿಧ ಚಾರ್ಟ್ಗಳು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು ೨೫ ಶಾಲೆಗಳಿಗೆ ಈ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.
ಕೆಆರ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ ಕೆಆರ್ ಪೇಟೆ ಶಾಲೆ ೭೫ ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲು ತೀರ್ಮಾನಿಸಿರುವುದ ಸ್ವಾಗತಾರ್ಹ ನಿರ್ಧಾರ ಎಂದರು.
ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುವ ರೀತಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದ ಅವರು ಪೋಷಕರು ಇಂಗ್ಲೀಷ್ ಭಾಷೆಯ ವ್ಯಾಮೋಹ ಹಾಗೂ ಬೇರೆ ದೇಶಗಳಲ್ಲಿ ಸೇವೆ ಸಲ್ಲಿಸಿ ಹಣ ಸಂಪಾದನೆ ಮಾಡುವ ಉದ್ದೇಶವನ್ನು ಬಿಡದವರಿಗೆ ಸರ್ಕಾರಿ ಶಾಲೆಗಳ ಉಳಿವು ಅಸಾಧ್ಯ ಎಂದು ಹೇಳಿದರು.
ದೈಹಿಕ ಶಿಕ್ಷಕ ಎ.ಪಿ ಗಂಗೇಗೌಡ ಮಾತನಾಡಿ ಶಾಲೆಗೆ ಮೂಲಭೂತ ಸೌಲಭ್ಯ ಕಡಿಮೆ ಇತ್ತು, ಇತ್ತೀಚಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆತಿದ್ದರೂ ಪೋಷಕರಲ್ಲಿರುವ ಇಂಗ್ಲೀಷ್ ವ್ಯಾಮೋಹದಿಂದಾಗಿ ಗ್ರಾಮೀಣ ಭಾಗದ ಶಾಲೆಗಳು ಮುಚ್ಚುವ ಹಂತ ತಲುಪಿದೆ ಎಂದು ವಿಷಾಧಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಜುನಾಥ್ ೧೯೪೯ ರಲ್ಲಿ ಈ ಶಾಲೆ ಗ್ರಾ.ಪಂ ಕಟ್ಟಡದಲ್ಲಿ ಆರಂಭವಾಯಿತು. ೧೦೦ ರಿಂದ ೩೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕನುಗುಣವಾಗಿ ಸರ್ಕಾರ ೧೯೬೩-೬೪ ನೇ ಸಾಲಿನಲ್ಲಿ ಶಾಲೆಯನ್ನು ಮಂಜೂರು ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಲಾಯಿತು ಎಂದು ತಿಳಿಸಿದರು.
೨೦೦೦ ನೇ ಇಸವಿಯಲ್ಲಿ ಖಾಸಗಿ ಶಾಲೆಗಳು ಪ್ರಾರಂಭವಾದಾಗ ಪೋಷಕರು ಇಂಗ್ಲೀಷ್ ಕಲಿತರೆ ಮಕ್ಕಳ ವಿದ್ಯಾಭ್ಯಾಸ ಉತ್ತಮಗೊಳ್ಳುತ್ತದೆ ಎಂಬ ಅಭಿಪ್ರಾಯದಿಂದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ ಸರ್ಕಾರಿ ಶಾಲೆಗಳಲ್ಲಿ ಕ್ಷೀಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಕ ವೃಂದ ದೃಢ ನಿರ್ಧಾರ ಮಾಡಿ ಪೋಷಕರ ಮನ ವೊಲಿಸಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಶಾಲೆಗೆ ಕಾಂಪೌಂಡ್, ಉದ್ಯಾನವನ ಮುಂತಾದ ಸೌಲಭ್ಯಗಳನ್ನು ನಿರ್ಮಾಣ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆಂದು ತಿಳಿಸಿದರು.
ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಭವಿಷ್ಯದೊಂದಿಗೆ ಜೀವನ ನಡೆಸುತ್ತಿದ್ದಾರೆ ಆದ್ದರಿಂದ ಈ ಶಾಲೆಗೆ ಕೊರತೆ ಇರುವ ವಾಹನ ಖರೀದಿಗೆ ಸಾರ್ವಜನಿಕರು ವಂತಿಗೆ ನೀಡಿದಾಗ ಮಾತ್ರ ಉತ್ತಮವಾದ ಶಾಲೆಯಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ವಸಂತಕುಮಾರಿ ವಹಿಸಿದ್ದರು, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮೋಹನ್ ತಗಡೂರು, ಖಜಾಂಚಿ ಪುಟ್ಟೇಗೌಡ, ಸದಸ್ಯರಾದ ಮಾಜಿ ಸೈನಿಕರು ಬಿ.ಎಂ.ರಾಘವೇಂದ್ರ, ಬಿಗ್ಗನಹಳ್ಳಿ, ಕಂಬಿಹಳ್ಳಿ ಕುಮಾರ್, ಸತೀಶ್, ಶಾಲಾ ಮಕ್ಕಳು ಪ್ರಾರ್ಥಿಸಿ ,ರಾಘವೇಂದ್ರ ಸ್ವಾಗತಿಸಿದರು, ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Government should focus on all-round development of government school