ಚಿಕ್ಕಮಗಳೂರು: ಯುವಜನತೆ ಹೆತ್ತವರ ಆಶಯ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳಬೇಕು ಉಜ್ವಲ ಭವಿಷ್ಯಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸಲಹೆ ಮಾಡಿದರು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆತ್ತವರು ತಮ್ಮ ಮಕ್ಕಳ ಮೇಲೆ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹಲವು ಆಶಯಗಳನ್ನು ಹೊಂದಿರುತ್ತಾರೆ. ಅವರ ಭವಿಷ್ಯಕ್ಕಾಗಿ ಕೂಲಿ ನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಸಾಲ ಸೋಲ ಮಾಡಿ ಓದಿಸುತ್ತಾರೆ. ಮಕ್ಕಳು ಅದನ್ನು ಅರ್ಥ ಮಾಡಿಕೊಂಡು ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿ ಸತ್ಪ್ರಜೆಗಳಾದರೆ ಹೆತ್ತವರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಯುವಜನತೆ ಈ ದೇಶದ ಆಧಾರ ಸ್ತಂಭಗಳು ಅವರು ಮಾದಕ ವಸ್ತುಗಳಿಂದ ದುಷ್ಚಟಗಳಿಂದ ದೂರ ಉಳಿದು ಉತ್ತಮ ನಾಗರೀಕರಾದರೆ ರಾಷ್ಟ್ರದ ಭವಿಷ್ಯ ಸಹ ಉಜ್ವಲವಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮವಹಿಸಬೇಕು ಎಂದರು.
ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ. ಸುಮಿತ್ರ ಮಾತನಾಡಿ ಯುವಜನತೆ ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಪತ್ರಕರ್ತ ಬಿ. ತಿಪ್ಪೇರುದ್ರಪ್ಪ ಮಾತನಾಡಿ ದೇಶದ ಅಂತಸ್ಸತ್ವವಾದ ಯುವ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ದುರಂತ ಇದರಿಂದಾಗಿ ವೀರ ಸನ್ಯಾಸಿ ವಿವೇಕಾನಂದರ ಆಶಯದಂತೆ ಯುವಜನತೆ ಉಕ್ಕಿನ ಮನುಷ್ಯರಾಗದೆ ದುರ್ಬಲರಾಗಿ ಬಲಹೀನರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಯುವಜನತೆ ದುಷ್ಚಟಗಳಿಂದ ದೂರವಿರಬೇಕು ಮಾದಕ ವಸ್ತುಗಳ ಸೇವನೆಯನ್ನು ತ್ಯಜಿಸಬೇಕು. ಉತ್ತಮ ಪ್ರಜೆಗಳಾಗಿ ದೇಶದ ಭದ್ರ ಬುನಾದಿಗಳಾಗಬೇಕು ಎಂದು ಸಲಹೆ ಮಾಡಿದರು.
ಅಬಕಾರಿ ಅಧೀಕ್ಷಕ ಕೆ.ಜಿ ಸಂತೋಷ್ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತುಗಳ ಮಾರಾಟ ಮಾಡಿದರೆ ಆಗುವ ಶಿಕ್ಷೆಗಳ ಕುರಿತು ಕಾನೂನಿನ ಕುರಿತು ವಿವರಿಸಿದರು
ವ್ಯಸನ ದಿನಾಚರಣೆ ಪ್ರಯುಕ್ತ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಮಾದಕ ವಸ್ತುಗಳನ್ನು ತ್ಯಜಿಸುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. ರಂಗಪಯಣ ತಂಡದಿಂದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಗೀತೆಗಳ ಗಾಯನ ನಡೆಯಿತು. ಚಿಕ್ಕಮಗಳೂರಿನ ರಂಗಪ್ಪಯಣ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ದಿನ್ ಮಹಾಕಲಾ ಸಂಘದಿಂದ ಕಿರು ನಾಟಕ ಪ್ರದರ್ಶನ ನಡೆಯಿತು. ನಶೆ ಎಂಬ ನರಕ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಜರುಗಿತು.
ಪಾಲಿಟೆಕ್ನಿಕ್ ಪ್ರಾಂಶುಪಾಲ ಎಂ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಡಾ. ಬಿ. ಈ. ಸುಮಂತ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟಾನಾಯ್ಕ್, ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಬಿ. ಆರ್. ರವೀಂದ್ರ ಉಪಸ್ಥಿತರಿದ್ದರು. ಉಪನ್ಯಾಸಕ ಹೆಚ್. ಬಿ. ಮಹೇಶಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್ ಸ್ವಾಗತಿಸಿದರು, ವಿದ್ಯಾರ್ಥಿನಿ ಇಶಾ ವಂದಿಸಿದರು.
Youth should stay away from vices for bright future