ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ೫ ವರ್ಷದೊಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆಗಳನ್ನು ಹಾಕಲು ಕ್ರಮ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ, ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆ ಹಾಗೂ Pಅ & P.ಓ.ಆ.ಖಿ ಜಿಲ್ಲಾ ಸಕ್ಷಮ ಪ್ರಾಧಿಕಾರದ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪ್ರಥಮ ಹಂತದಲ್ಲಿ ಇದೇ ಆಗಸ್ಟ್ ೭ ಮತ್ತು ೧೨ ರಂದು ಎರಡನೇ ಹಂತದಲ್ಲಿ ೧೧ ಹಾಗೂ ೧೬ ಮತ್ತು ಮೂರನೆ ಹಂತದಲ್ಲಿ ಅಕ್ಟೋಬರ್ ೯ ಮತ್ತು ೧೪ ರಂದು ದಢಾರ ಮತ್ತು ರುಬೆಲ್ಲಾ ಲಸಿಕೆಯನ್ನು ಎಲ್ಲಾ ಮಕ್ಕಳಿಗೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಲಸಿಕಾ ಕಾರ್ಯಕ್ರಮವು ಶೇ. ೧೦೦ ರಷ್ಟು ಗುರಿ ಸಾಧಿಸಲು ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ನಿರ್ವಹಿಸುವುದರ ಜೊತೆಗೆ ದಢಾರ, ರುಬೆಲ್ಲಾ ಕಾಯಿಲೆ ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದ ಅವರು. ಮಳೆಗಾಲವಾದ್ದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಈ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕಲ ತಯಾರಿಗಳನ್ನು ಮಾಡಿಕೊಂಡು ಈ ಬಗ್ಗೆ ಸಾರ್ವಜನಿಕರಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅರಿವು ಮೂಡಿಸಲು ಜಾಗೃತಿ ಶಿಬಿರಗಳು, ವಿಚಾರ ಸಂಕೀರ್ಣಗಳು, ಬೀದಿ ನಾಟಕಗಳು ಹಾಗೂ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕವಾದ ಪ್ರಚಾರ ಕೈಗೊಳ್ಳಬೇಕು. ಹಾಗೂ ಸಮುದಾಯ ಸಹಬಾಗಿತ್ವದಲ್ಲಿ ಎಲ್ಲಾರ ಸಹಕಾರ ಪಡೆದು ಸಾಂಕ್ರಾಮಿಕ ರೋಗ ಹತೋಟಿಗೆ ಹಾಗೂ ಜಿಲ್ಲೆಯನ್ನು ದಡಾರ, ರುಬೆಲ್ಲಾ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮವಹಿಸುವಂತೆ ತಿಳಿಸಿದರು.
ಚರಂಡಿ, ತಗ್ಗು ಪ್ರದೇಶ, ಕೊಳವೆ ಬಾವಿ, ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳವುದರ ಜೊತೆಗೆ ತಮ್ಮ ತಮ್ಮ ಮನೆಗಳ ಸುತ್ತ ಮುತ್ತ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟು ಕೊಳ್ಳುವುದರ ಮೂಲಕ ಈ ರೋಗಗಳನ್ನು ಹತೋಟಿಗೆ ತರುವುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದ ಅವರು ಇಂದ್ರಧನುಷ್ ೫.೦ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೆ ಲಸಿಕೆ ಪಡೆಯುವವರನ್ನು ಗುರುತಿಸುವ ಕೆಲಸ ಆಗಬೇಕು. ಲಸಿಕೆ ನೀಡುವಾಗ ಮಕ್ಕಳ ಆರೋಗ್ಯ ಪರಿಸ್ಥಿತಿಯನ್ನು ಪರೀಕ್ಷಿಸಿ ನೀಡಬೇಕು. ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕಟ್ಟಡ ಕಾರ್ಮಿಕರು ಹಾಗೂ ಪ್ಲಾಂಟೇಷನ್ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ವಲಸೆ ಕಾರ್ಮಿಕ ಮಕ್ಕಳಿಗೆ ರೋಗಗಳ ಬಗ್ಗೆ ಅರಿವು ಮೂಡಿಸಿ ಲಸಿಕೆ ನೀಡಬೇಕು. ಈ ಕುರಿತು ವಿವಿಧ ಸಮಿತಿಗಳು ಕಾಲ ಕಾಲಕ್ಕೆ ಸಭೆ ನಡೆಸಿ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿ ಪರಿಹಾರ ಕಂಡು ಕೊಳ್ಳಬೇಕು ಎಂದು ಹೇಳಿದರು.
ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಒಟ್ಟು ೭೧ ಸ್ಕ್ಯಾನಿಂಗ್ ಸೆಂಟರ್ಗಳಿದ್ದು, ಇವುಗಳಲ್ಲಿ ೧೪ ಕೇಂದ್ರಗಳು ಕಾರಣಾಂತರದಿಂದ ರದ್ದು ಪಡಿಸಲಾಗಿದ್ದು, ಉಳಿದ ೫೭ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ದಾಖಲಾಗುವ ವಿವಿಧ ಕಾಯಿಲೆಗಳು ಪತ್ತೆ ಮತ್ತು ಅದರ ನಿವಾರಣೆಗೆ ಬಳಕೆಯಾಗುತ್ತಿವೆ ಎಂದು ಮಾಹಿತಿ ನೀಡಿದರು.
ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಲಿಂಗ ಪತ್ತೆ ಮಾಡುವುದು ಕಂಡು ಬಂದರೆ ಅಂತಹ ಸ್ಕ್ಯಾನಿಂಗ್ ಸೆಂಟರ್ಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು. ಗರ್ಭಿಣಿಯಾದ ಎಲ್ಲರಿಗೂ ಎಲ್ಲರಿಗೂ ತಾಯಿ ಕಾರ್ಡು ವಿತರಣೆಯಾಗುತ್ತಿದ್ದರೂ ಗಂಡು – ಹೆಣ್ಣು ಅನುಪಾತ ಮತ್ತು ಡಿಲಿವರಿಯ ದಾಖಲಾತಿಗಳು ಸರಿಯಾಗಿ ನಿರ್ವಹಣೆ ಮಾಡಬೇಕು ಆರ್.ಸಿ. ಹೆಚ್ ಪೋರ್ಟಲ್ನಲ್ಲಿ ಸ್ಕ್ಯಾನಿಂಗ್ – ೧.೨ ಬಗ್ಗೆ ಮಾಹಿತಿ ಇಡಬೇಕಾಗಿದ್ದು, ಅವುಗಳ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸರಿಯಾದ ಅಂಕಿ-ಅಂಶಗಳನ್ನು ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು, ಆರ್ ಸಿ ಹೆಚ್ ಅಧಿಕಾರಿ ಡಾ. ಭರತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಮಾಲೀಕರು ಉಪಸ್ಥಿತರಿದ್ದರು.
Vaccination campaign against deadly diseases across the district