ಚಿಕ್ಕಮಗಳೂರು: ಸರ್ಕಾರದ ಮಾತೃ ಇಲಾಖೆ ಆಗಿರುವ ಕಂದಾಯ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ಮಾಡುವ ಮೂಲಕ ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ತಿಳಿಸಿದರು.
ಶುಕ್ರವಾರ ಜಿಲ್ಲೆಯ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಹಲವಾರು ಸುಧಾರಣೆಗಳನ್ನು ತರಲಾಗುತ್ತಿದೆ. ಪಹಣಿ ನೊಂದಣಿ ಹಾಗೂ ಆಸ್ತಿ ಖರೀದಿ ನೊಂದಣಿ ಆನ್ಲೈನ್ ವ್ಯವಸ್ಥೆ ಮಾಡಲಿದ್ದು ಇದರಿಂದ ಭೂಮಿಹಕ್ಕು ವರ್ಗಾವಣೆ ಮತ್ತಿತರ ವ್ಯವಹಾರಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಮೀನು ಕ್ರಯ ಖಾತೆ ವರ್ಗಾವಣೆ ಇವುಗಳಲ್ಲಿ ನಕಲಿ ಅಥವಾ ಲೋಪದೋಷವಾಗಿದ್ದರೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡು ಅಂತಹ ಜಮೀನುಗಳ ವಹಿವಾಟುಗಳನ್ನು ರದ್ದುಗೊಳಿಸಲು ಉಪನೊಂದಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿ, ಪಹಣಿ ನೊಂದಣಿ ವ್ಯವಸ್ಥೆಯನ್ನು ಆನ್ಲೈನ್ ವ್ಯವಸ್ಥೆಗೆ ಒಳಪಡಿಸುತ್ತಿದ್ದರಿಂದ ಬ್ಯಾಂಕ್ಗಳಲ್ಲಿ ಸಾಲ ಪಡೆದ ವಿವರ ಮತ್ತು ತೀರುವಳಿ ವಿವರವನ್ನು ಬ್ಯಾಂಕ್ನಲ್ಲಿಯೇ ವ್ಯವಸ್ಥಾಪಕರು ದಾಖಲು ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಇದರಿಂದ ರೈತರು ಹಾಗೂ ಜಮೀನುದಾರರಿಗೆ ವಿಳಂಭವಾಗುವುದನ್ನು ತಡೆಯಲು ಅನುಕೂಲವಾಗಲಿದೆ ಎಂದರು.
ಕರ್ನಾಟಕ ಭೂಕಂದಾಯ ಕಾಯ್ದೆಯನ್ನು ಇನ್ನಷ್ಟು ಸರಳಗೊಳಿಸುತ್ತಿದ್ದು ಎಲ್ಲಾ ರೀತಿಯ ವಿಳಂಭಗಳಿಗೆ ತಡೆ ಹಾಕಲಾಗುವುದೆಂದು ಹೇಳಿ, ಎಸ್.ಸಿ, ಎಸ್.ಟಿ ಭೂಮಿಗಳ ಪಿ.ಟಿ.ಸಿ.ಎಲ್ ಕಾಯ್ದೆಗೆ ೧೯೭೮ ರ ಮೂಲ ಕಾಯ್ದೆಯನ್ನೇ ಮುಂದವರೆಸಿ ತಿದ್ದುಪಡಿ ಮಾಡಿರುವುದರಿಂದ ಕಾಲಮಿತಿಯ ನಿರ್ಬಂಧ ಇರುವುದಿಲ್ಲ ಆದರೆ ಅಗತ್ಯ ಸಂದರ್ಭದಲ್ಲಿ ಎಸ್.ಸಿ, ಎಸ್.ಟಿ ಸಮುದಾಯದವರು ಮಾರಾಟ ಮಾಡಲು ಅನುಕೂಲವಾಗುವಂತೆ ಅನುಮತಿ ನೀಡುವ ವ್ಯವಸ್ಥೆಯನ್ನು ಸಧ್ಯದಲ್ಲೇ ಸರಳೀಕರಣ ಮಾಡಲಾಗುವುದೆಂದು ತಿಳಿಸಿದರು.
ಫಾರಂ ೫೩, ೫೭ ರಲ್ಲಿ ಭೂಮಿ ಮಂಜೂರು ಮಾಡುವಾಗ ಅನೇಕ ಕಡೆ ಅಕ್ರಮಗಳು ನಡೆದಿದ್ದು ಅಕ್ರಮ ಎಸಗಿರುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಫಾರಂ ೫೭ ರಡಿಯಲ್ಲಿ ೧೧.೨೮ ಲಕ್ಷ ಅರ್ಜಿಗಳು ಬಂದಿದ್ದು ೯.೫೦ ಲಕ್ಷ ಅರ್ಜಿಗಳು ಬಾಕಿ ಇವೆ ಅರ್ಹರಿಗೆ ಮಂಜೂರಾತಿ ಮಾಡಲಾಗುವುದು ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ಫಾರಂ ೫೭ ರಡಿ ಭೂಮಿ ಮಂಜೂರು ಮಾಡಲು ೨೦೦೫ರ ಮುಂಚಿತವಾಗಿ ಅವಧಿಯನ್ನು ಪರಿಗಣಿಸಿದ್ದು ಅಕ್ರಮಗಳನ್ನು ತಡೆಯುವ ಸಲುವಾಗಿ ೨೦೦೨ ರಿಂದ ಮಂಜೂರಾತಿವರೆಗಿನ ಅವಧಿಯನ್ನು ಸ್ಯಾಟಲೈಟ್ ಮೂಲಕ ಪರಶೀಲಿಸುವ ಮೊಬೈಲ್ ಆಪ್ಅನ್ನು ಸಿದ್ದಪಡಿಸಲಾಗಿದೆ ಎಂದು ಹೇಳಿದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಒತ್ತುವರಿ ಆಗಿರುವ ಸ್ಮಶಾನ ಭೂಮಿಯನ್ನು ತಕ್ಷಣ ತೆರವುಗೊಳಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ನಾಗರೀಕ ಸೌಲತ್ತುಗಳಿಗೆ ಅಗತ್ಯ ಇರುವ ಭೂಮಿಯನ್ನು ಗುರ್ತಿಸಿ ಕಾಯ್ದಿರಿಸುವಂತೆ ಆದೇಶಿಸಲಾಗಿದೆ ಎಂದರು. ಕಾಫಿ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ಗಮನ ಸೆಳೆದಾಗ ಹಿಂದಿನ ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯವಾಗಿದ್ದು, ಪ್ರಸ್ತುತ ಪರಿಶೀಲನೆಯಲ್ಲಿದೆ ಈ ಸಂಬಂಧ ಕರಡು ಪ್ರಕಟಣೆಗೆ ಅನುಮೋದನೆಯಾಗಿದ್ದು ಸಾರ್ವಜನಿಕ ಆಕ್ಷೇಪಣೆಗಳನ್ನು ಸ್ವೀಕರಿಸಲು ಆದೇಶಿಸಲಾಗಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಶೇ.೨೦ ರಷ್ಟು ಮಾತ್ರ ಹುದ್ದೆಗಳು ಖಾಲಿ ಇರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಟಾರಿಯಾ ಅವರು ಮುಂದೆ ಗ್ರಾಮ ಲೆಕ್ಕಾಧಿಕಾರಿಗಳ ನೇಮಕದ ನಿಯಮ ಬದಲಾವಣೆ ಮಾಡಿದ್ದು, ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆ ಮಾಡಲಾಗುವುದೆಂದರು. ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹಾಗೂ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರ್ತಿಸಿ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗೋಪಾಲ್ಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ,ಉಪವಿಭಾಗಾಧಿಕಾರಿ ಹೆಚ್.ಡಿ ರಾಜೇಶ್ ಉಪಸ್ಥಿತರಿದ್ದರು
Beneficial to the public through revenue department reforms