ಚಿಕ್ಕಮಗಳೂರು: ಜಾತಿ, ಬೇಧ ಮರೆತು ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಸರಳ ಜೀವನ ನಡೆಸುತ್ತಿದ್ದ ಸಹನಾ ರೂಬಿನ್ ಅವರು ಮೆದುಳು ನಿಷ್ಕ್ರೀಯಗೊಂಡು ಕೊನೆಯುಸಿರೆಳೆದರೂ ಹೃದಯವಂತಿಕೆಯಿಂದ ಅಂಗಾಂಗ ದಾನ ಮಾಡುವ ಮೂಲಕ ಮೂರು ಜನರಲ್ಲಿ ಜೀವಂತವಾಗಿದ್ದು, ಯುವ ಸಮೂಹಕ್ಕೆ ಮಾರ್ಗದರ್ಶಕರಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ತಿಳಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಪತಿ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಅವರು ಹತ್ತು ಹಲವು ಸಂಘ, ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೊಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸಮಾನ ಮನಸ್ಕರನ್ನು ಜೊತೆಯಲ್ಲಿಟ್ಟುಕೊಂಡು ಅನಾಥ ಶವಗಳಿಗೆ ಸಂಸ್ಕಾರದ ಮೂಲಕ ಮುಕ್ತಿ ನೀಡುತ್ತಾ ಸದಾ ಸಮಾಜಮುಖಿಯಲ್ಲಿ ಸಾಗುತ್ತಿದ್ದ ಅವರು ಕ್ರಮೇಣ ಗೌರಿಕಾಲೆವೆ ಸುತ್ತಮುತ್ತ ಇದ್ದ ಜನರ ಧ್ವನಿಯಾಗಿ ಬಂದವರು.
ಕಷ್ಟಸುಖಗಳಿಗೆ ಸ್ಪಂದಿಸುವ ಮೂಲಕ ಅಪಾರ ಪ್ರೀತಿ ವಿಶ್ವಾಸಕ್ಕೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಬಡವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಕಳೆದ ಹಲವು ವರ್ಷಗಳ ಹಿಂದೆ ಸರಳ ಸಜ್ಜನಿಕೆ ವ್ಯಕ್ತಿತ್ವದ ಸಹನಾ ಜೋನ್ಸ್ರೊಂದಿಗೆ ವಿವಾಹವಾದ ನಂತರ ಪತಿ, ಪತ್ನಿ ಸಮಾಜ ಮುಖಿ ಕಾರ್ಯಗಳಿಗೆ ನಿಂತಿದ್ದು, ವಿಶೇಷ. ಕೊರೋನಾ ಸಂದರ್ಭದಲ್ಲಂತೂ ನಿರ್ಗತಿಕರು ಹಾಗೂ ಬಿಕ್ಷುಕರ ರಕ್ಷಣೆಗಾಗಿಯೇ ಪಣತೊಟ್ಟು ನಿಂತ ದಂಪತಿಗಳು ಜನರು ಹತ್ತಿರ ನಿಂತು ಮಾತನಾಡಲು ಹೆದರುತ್ತಿದ್ದ ಸಂದರ್ಭ ಎದೆಗುಂದೆ ದಾನಿಗಳು ಹಾಗೂ ನಗರಸಭೆ ಸಹಕಾರದಿಂದ ನಿರ್ಗತಿಕರ ಆಶ್ರಯ ಕೇಂದ್ರ ತೆರೆಯುವಲ್ಲಿ ಯಶಸ್ವಿಯಾಗಿ ಕಟ್ಟಿಂಗ್, ಶೇವಿಂಗ್ ಮಾಡುವುದರಿಂದ ಹಿಡಿದು ದಿಕ್ಕಿಲ್ಲದವರ ಜೊತೆ ಯಾವುದೇ ಅಂಜಿಕೆ ಅಳುಕಿಲ್ಲದೆ ಎಲ್ಲದೊಂದಿಗೆ ಮುಂದಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲು, ರಾತ್ರಿಯೆನ್ನದೆ ಶ್ರಮಿಸಿ ಹಲವರ ಪ್ರಾಣ ರಕ್ಷಣೆಗೆ ಮುಂದಾಗಿದ್ದು ಮರೆಯುವಂತಿಲ್ಲ. ಈ ಕಾರ್ಯಕ್ಕೆ ಹಲವು ಯುವಕರು ಸಾಥ್ ನೀಡಿದ್ದು, ಜನರ ಪ್ರಶಂಸೆಗೂ ಪಾತ್ರರಾಗಿದ್ದರು ಎಂದು ಹೇಳಿದ್ದಾರೆ.
ಕೊಂಚ ಅವಕಾಶ ಸಿಕ್ಕಿದರೂ ಹಣ, ಐಶ್ವರ್ಯದ ಹಿಂದೆ ಬೆನ್ನತ್ತುವ ಇಂತಹ ಕಲಿಯುಗದಲ್ಲೂ ಬಡವರ ಬಗ್ಗೆ ಅಪಾರ ಕಾಳಜಿ ಹೊಮದಿ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಸರಳ ಜೀವನ ನಡೆಸುತ್ತಿದ್ದ ರೂಬಿನ್ ಮೊಸಸ್ ದಂಪತಿಗಳಲ್ಲಿ ಒಂದು ಕೊಂಡಿ ಕಳಚಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸದಾ ಜನರೊಂದಿಗೆ ನಗುಮೊಗದಿಂದ ಬೆರೆತು ಜನರ ಪ್ರೀತಿಗೆ ಪಾತ್ರರಾಗಿದ್ದ ಸಹನಾ ಜೋನ್ಸ್ ರವರು ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಾ ಪತಿ, ಪತ್ನಿ ಪರಸ್ಪರ ಅನ್ಯೋನ್ಯವಾಗಿ ಸಂಸಾರ ಸಾಗಿಸುತ್ತಿದ್ದರು ವಿಧಿಯಾಟದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಹನಾ ಅವರು ಇಹಲೋಕ ತ್ಯಜಿಸುವಂತಾಗಿದೆ.
ಕಳೆದ ಮೂರು ದಿನಗಳ ಹಿಂದೆ ದಿಡೀರನೆ ಸಹನಾರವರ ಮೆದುಳು ನಿಷ್ಕ್ರೀಯಗೊಂಡ ಸುದ್ದಿ ತಿಳಿದಾಗಲಂತೂ ಯಾವುದೇ ಜಾತಿ, ಧರ್ಮ ಲೆಕ್ಕಿಸದೆ ಸಾವಿರಾರು ಜನರು ಆಸ್ಪತ್ರೆಗೆ ಆಗಮಿಸಿ ಕೊನೆಯ ಕ್ಷಣವನ್ನು ನೋಡಿ ಕಣ್ಗಾಲಿಗಳೊಂದಿಗೆ ಬಾವುಕರಾಗಿ ಸಹನಾರ ಜೀವದಾನಕ್ಕೆ ದೇವರಲ್ಲಿ ಮೊರೆ ಹೋಗಿದ್ದ ಮನಕಲಕುವ ದೃಶ್ಯ ಕಂಡು ಬಂತು.
ಜೀವನದುದ್ದಕ್ಕೂ ಸೇವೆಯನ್ನು ಮೈಗೂಡಿಸಿಕೊಂಡು ಬಂದಿರುವ ಇಂತಹ ಅಪರೂಪದ ಕುಟುಂಬದ ಜೀವನವನ್ನು ಇಂದಿನ ಯುವ ಜನರು ಅಳವಡಿಸಿಕೊಂಡು ಪಾಲಿಸಿದಾಗ ಬದುಕು ಸಾರ್ಥಕವಾಗುತ್ತದೆ. ಸಹನಾ ಜೋನ್ಸ್ ಅವರ ಆತ್ಮಕ್ಕೆ ಶಾಂತಿ ದೊರೆತು ರೂಬಿನ್ ಮೊಸಸ್ ಮಗಳು ರೇಮಾ ಸೇರಿದಂತೆ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಸಮಾಜಮುಖಿ ಸೇವೆಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಬಿ.ಎಂ.ಸಂದೀಪ್ ತಿಳಿಸಿದ್ದಾರೆ.
AICC Secretary BM Sandeep