ಚಿಕ್ಕಮಗಳೂರು: ರೈತರು ಕೃಷಿ ಬೆಳೆಗಳ ಜೊತೆಗೆ ತೋಟಗಾರಿಕೆ ಉಪ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.
ಅವರು ಮಂಗಳವಾರ ಜಿ.ಪಂ.ನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ರೈತರು ನೆಮ್ಮದಿಯಾಗಿ ಬದುಕಲು ಕೃಷಿ ಜೊತೆಗೆ ತೋಟಗಾರಿಕೆಯೂ ಇರುವುದು ಕಾರಣವಾಗಿದೆ. ಇದಕ್ಕೆಲ್ಲ ಪ್ರೋತ್ಸಾಹ ಕೊಟ್ಟಿದ್ದು ಡಾ.ಎಂ.ಎಚ್.ಮರೀಗೌಡರು ಎಂದರು.
ಕೃಷಿ ಜೊತೆಗೆ ತೋಟಗಾರಿಕೆ ಉಪ ಬೆಳೆಗಳು ಇರಬೇಕಾಗುತ್ತದೆ. ಉತ್ತಮ ಮಳೆ, ಬೆಳೆಯಾಗಲಿ ಎಂದು ಭಗವಂತನಲ್ಲಿ ನಾವೂ ಬೇಡಿಕೊಳ್ಳುತ್ತೇವೆ. ಇದರೊಂದಿಗೆ ಉತ್ತಮ ಬೆಲೆಯೂ ಸಿಕ್ಕಲ್ಲಿ ನಮ್ಮ ದೇಶದ ರೈತರು ಸರ್ಕಾರದಿಂದ ಏನನನ್ನೂ ಕೇಳುವುದಿಲ್ಲ ಎಂದರು.
ತೋಟಗಾರಿಕೆ ಇಲಾಖೆಯಿಂದ ಹೊಸ ಹೊಸ ತಳಿಗಳು ಸಂಶೋಧನೆ ಆಗಬೇಕು. ರೈತರ ಕೈ ಬಲಪಡಿಸಿದರೆ ದೇಶ ಸಧೃಡಗೊಳ್ಳುತ್ತದೆ. ರೈತ ಸಂಘದ ಪದಾಧಿಕಾರಿಗಳ ಜೊತೆಗೆ ಈಗಾಗಲೇ ಒಂದು ಸಭೆಯನ್ನು ಮಾಡಿದ್ದೇವೆ. ಮತ್ತೊಮ್ಮೆ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಆಲೂಗೆಡ್ಡೆ ಅಂಗಮಾರಿ ರೋಗಬಾಧೆ ಕಾಣಿಸಿಕೊಂಡಿರುವುದರಿಂದ ಹಲವು ವರ್ಷಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅದಕ್ಕೆ ಔಷಧಿ ಕಂಡು ಹಿಡಿಯದಿದ್ದರೆ ಆಲೂಗೆಡ್ಡೆ ಕೃಷಿ ಇಲ್ಲದಂತಾಗುತ್ತದೆ. ಈ ಬಗ್ಗೆ ತೋಟಗಾರಿಕೆ ಸಚಿವರ ಜೊತೆ ಸಮಾಲೋಚನೆ ಮಾಡುತ್ತೇವೆ ಎಂದರು.
ಕೃಷಿ ಆಧಾರಿತ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಸುಮಾರು ೨ ಕೋಟಿ ರೂ.ಗಳ ವರೆಗೆ ಸಾಲ ಸೌಲಭ್ಯ ನಿಡುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ. ಈಗ ಗ್ರಾಮೀಣ ಭಾಗದಲ್ಲಿ ರೈತರ ಮನೆಗಳಲ್ಲೂ ಮನೆಗೊಬ್ಬರು ಪದವಿ ಓದಿದವರು ಇರುತ್ತಾರೆ. ಅಂತವಹವರು ಕೃಷಿ ಆಧಾರಿತ ಕೈಗಾರಿಕೆ ಕೈಗೊಂಡರೆ ನಿರುದ್ಯೋಗ ಸಮಸ್ಯೆಯೂ ನೀಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರೈತರಿಗೆ ತೆಂಗು ಮತ್ತಿತರೆ ತೊಟಗಾರಿಕೆ ಬೆಳೆಗಳ ಸಸಿಗಳನ್ನು ವಿತರಿಸಲಾಯಿತು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಮಾತನಾಡಿ ತೋಟಗಾರಿಕೆ ಇಲಾಖೆಯ ಸಂಸ್ಥಾಪಕರಾದ ಮರೀಗೌಡ ರವರ ೧೦೭ನೇ ಜನ್ಮ ದಿನೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಆಗಷ್ಟ್ ೮ ರಂದು ತೋಟಗಾರಿಕೆ ದಿನಾಚರಣೆಯನ್ನು ಆಚರಣೆ ಮಾಡಿ ರೈತರಿಗೆ ಸಸಿಗಳನ್ನು ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಪೂರ್ಣಿಮಾ, ಹಂಪಾಪುರ ಗ್ರಾಪಂ ಸದಸ್ಯ ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
Horticulture Day