ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆಯುವ ಮನೆಗಳ್ಳತನ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರತಿತಿಂಗಳು ಮಂಗಳವಾರ ೧೧ ಗಂಟೆಯಿಂದ ೧ ಗಂಟೆಗಳ ಪೋನ್ಇನ್ ಕಾರ್ಯಕ್ರಮದ ಮೂಲಕ ಜನರ ದೂರುಗಳು ಹಾಗೂ ಪೊಲೀಸ್ ಕ್ರಮದ ಬಗ್ಗೆ ಸಂವಾದ ನಡೆಸುತ್ತಿದ್ದು, ಅದರಂತೆ ಮಂಗಳವಾರ ಬೆಳಿಗ್ಗೆ ೧೧ರಿಂದ ೧೨ರವೆಗೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದು, ಹೆಚ್ಚಿನ ದೂರುಗಳು ಸಂಚಾರ ನಿಯಂತ್ರಂಣ ಮತ್ತು ವಾಹನಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಕೇಳಿಬಂದವು.
೧೬ಕ್ಕೂ ಹೆಚ್ಚುಮಂದಿ ಸಂವಾದದಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು. ಈ ಸಂವಾದದಲ್ಲಿ ಮೊದಲು ದೂರು ಲಕ್ಕವಳ್ಳಿಯ ದೇವರಾಜು ಅವರದಾಗಿದ್ದು, ಮನೆಗಳ್ಳತನದ ಬಗ್ಗೆ ಪೊಲೀಸರು ಗಮನಹರಿಸುತ್ತಿಲ್ಲ ತಕ್ಷಣ ಅವರು ಈ ಕುರಿತು ಗಮನಹರಿಸಬೇಕೆಂದು ಮಾಡಿದ ಮನವಿಗೆ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರದ ನಿವಾಸಿ ಚೌಡಪ್ಪ ದೂರವಾಣಿ ಮೂಲಕ ದೂರು ಸಲ್ಲಿಸಿ, ನಗರದ ಇಂದಿರಾಗಾಂಧಿ ರಸ್ತೆ, ಮಹಾತ್ಮ ಗಾಂಧಿ ರಸ್ತೆಯಲ್ಲಿ ಜನ ಓಡಾಡುವ ಪಾದಚಾರಿಗಳ ರಸ್ತೆಯಲ್ಲಿಯೂ ಅನೇಕ ಅಂಗಡಿಗಳವರು ತಮ್ಮ ವಸ್ತು ಹಾಗೂ ಸಣ್ಣ ಫಲಕಗಳನ್ನು ಇಟ್ಟು, ಜನರ ಓಡಾಡಕ್ಕೆ ತೊಡಕುಂಟು ಮಾಡಿದ್ದಾರೆ. ಈ ಎರಡು ರಸ್ತೆಗಳಲ್ಲಿ ಜನ ಓಡಾಡುವ ಜಾಗದಲ್ಲಿ ಗುಂಡಿಗಳಾಗಿದ್ದು, ಅವುಗಳನ್ನು ಮುಚ್ಚುವಂತೆ ನಗರಸಭೆಗೆ ಸೂಚನೆ ನೀಡಬೇಕೆಂದು ನಗರದ ನಿವಾಸಿ ಚೌಡಪ್ಪ ಮನವಿ ಮಾಡಿದರು. ಆಗ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರಿಗೆ ನೀಡಲಾಯಿತು.
ನಗರದ ಆಜಾದ್ ಪಾರ್ಕ್ ಸಮೀಪ ಬೇಲೂರು ರಸ್ತೆಯಲ್ಲಿ ತಿಂಡಿ ಗಾಡಿಗಳು ಪ್ರತಿನಿತ್ಯ ವ್ಯಾಪಾರ ಮಾಡುವುದರಿಂದ, ಹೆಚ್ಚಿನ ವಾಹನ ದಟ್ಟಣೆ ಆಗುತ್ತಿದ್ದು, ಬೇರೆ ವಾಹನಗಳ ಓಡಾಡಕ್ಕೆ ಹಾಗೂ ಜನರ ಓಡಾಟಕ್ಕೂ ಸಮಸ್ಯೆ ಆಗಿದೆ ಅದನ್ನು ನಿಯಂತ್ರಿಸಬೇಕಾಗಿದೆ. ಆಜಾದ್ ಪಾರ್ಕ್ ವೃತ್ತದಲ್ಲಿ ಹಿಂದೆ ಇದ್ದ ನಾಲ್ಕು ಸಿಸಿ ಕ್ಯಾಮರಗಳ ಬದಲು ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ತಕ್ಷಣ ಇನ್ನು ಮೂರನ್ನು ಸರಿಪಡಿಸಬೇಕೆಂದರು ಇದಕ್ಕೆ ಪೊಲೀಸ್ ಮುಖ್ಯಾಧಿಕಾರಿಗಳು ತಕ್ಷಣವೇ ಸಂಚಾರ ಪೊಲೀಸರಿಗೆ ಕ್ರಮ ಕೈಗೊಂಡು ವಾಹನಗಳು ರಸ್ತೆಯಲ್ಲಿ ನಿಂತು ಕಾರ್ಯನಿರ್ವಹಿಸುವ ಮೂಲಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಆದಷ್ಟು ಸಿಸಿ ಕ್ಯಾಮರಗಳನ್ನು ಸರಿಪಡಿಸುವ ಭರವಸೆ ನೀಡಿದರು.
ದಂಟರಮಕ್ಕಿ ಮತ್ತು ಉಪ್ಪಳ್ಳಿ ರಸ್ತೆಗಳಲ್ಲಿ ವೀಲಿಂಗ್ ನಡೆಯುತ್ತಿದೆ. ಅದನ್ನು ನಿಯಂತ್ರಿಸಲು ದಂಟರಮಕ್ಕಿ ಶರತ್ ಮನವಿ ಮಾಡಿದಾಗ, ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಈಗಾಗಲೇ ವೀಲಿಂಗ್ ಮಾಡುವವರ ಮೇಲೆ ಕೇಸು ದಾಖಲಿಸುವ ಕಾರ್ಯ ಆರಂಭವಾಗಿದೆ ಅದನ್ನು ವೀಕ್ಷಿಸಿದ ಸಾರ್ವಜನಿಕರು ಸಹ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಇನ್ನಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೆಲವು ಜೀಪ್ ಮಾಲೀಕರು ಸೂಕ್ತ ದಾಖಲೆಗಳನ್ನು ಹೊಂದದೆ ಪ್ರವಾಸಿಗರನ್ನು ಗಿರಿ ಪ್ರದೇಶಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂಬ ದೂರು ಸಹ ಬಂದಿದೆ ಎಂದು ತಿಳಿಸಿದ ಮುಖ್ಯಾಧಿಕಾರಿಗಳು, ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂದರು.
ಅಜ್ಜಂಪುರದ ಬಸ್ ನಿಲ್ದಾಣದ ಬಳಿ ಹಾಗೂ ಹೊಸದುರ್ಗ ರಸ್ತೆಯಲ್ಲಿ ವಾಹನ ನಿಯಂತ್ರಣವನ್ನು ಪೊಲೀಸರು ಮಾಡುತ್ತಿಲ್ಲ ಅಲ್ಲಿ ಖಾಸಗಿ ಲಾರಿಗಳು, ಆಟೋಗಳು ಹೆಚ್ಚನ ಸಂಖ್ಯೆಯಲ್ಲಿ ನಿಂತು ಓಡಾಡಲು ಸಮಸ್ಯೆ ಆಗಿದೆ ಎಂದು ವೆಂಕಟೇಶ ದೂರು ನೀಡಿದ್ದು, ಪೊಲೀಸರು ಪರಿಶೀಲಿಸಿ ಸಮಸ್ಯೆ ನಿವಾರಿಸುತ್ತಾರೆಂಬ ಭರವಸೆ ದೊರೆಯಿತು.
ನಗರದಲ್ಲಿ ಇತ್ತೀಚಿಗೆ ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ, ವಾಹನ ದಟ್ಟಣೆ ಆಗದಂತೆ, ನಿಯಂತ್ರಿಸಬೇಕೆಂಬ ದೂರುಗಳು ಬಂದಿದ್ದು, ದ್ವಿ ಚಕ್ರ ವಾಹನದಲ್ಲಿ ಸೈಲೆಂನ್ಸರ್ ತೆಗೆದು ಹೆಚ್ಚಿನ ಶಬ್ದ ಮಾಡುತ್ತಾ ವಾಹನ ಓಡಿಸುವುದು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಿ ಎಂಬ ಮನವಿ ಸಹ ಬಂತು ಈ ಬಗ್ಗೆ ತಕ್ಷಣ ಮಾಹಿತಿ ನೀಡಿದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂದು ಮುಖ್ಯಾಧಿಕಾರಿಗಳು ಹೇಳಿದರು.
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಮೊದಲ ಫೋನ್ ಇನ್ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರತಿಸ್ಪಂದನ ಸಾರ್ವಜನಿಕರಿಂದ ದೊರೆತಿದ್ದು, ಮಾತನಾಡಿದ ಅನೇಕ ಮಂದಿ ಈ ರೀತಿ ನೇರವಾಗಿ ಸಾರ್ವಜನಿಕರೊಂದಿಗೆ ಮಾತನಾಡಿ ಸಮಸ್ಯೆ ಅರಿಯುವ ಜಿಲ್ಲಾ ಮುಖ್ಯಾಧಿಕಾರಿಗಳ ಕ್ರಮವನ್ನು ಶ್ಲಾಘಿಸಿದರು.
Phone in program at District Police Office